ADVERTISEMENT

‘ಎಸ್‌ಬಿಐ ಗೃಹಸಾಲ ಮೇಳ’ 26ರಿಂದ

ರೂ.325 ಕೋಟಿ ಸಾಲ ವಿತರಣೆ ಗುರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಬೆಂಗಳೂರು: ನಗರದ ಸೇಂಟ್‌ ಮಾರ್ಕ್‌ ರಸ್ತೆಯಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಏ. 26 ಮತ್ತು 27ರಂದು ಗೃಹ­ಸಾಲ ಉತ್ಸವ ಹಮ್ಮಿಕೊಳ್ಳಲಾ­ಗಿದ್ದು, ರೂ.325 ಕೋಟಿ ಗೃಹಸಾಲ ಮಂಜೂರು ಗುರಿ ಇದೆ ಎಂದು ‘ಭಾರತೀಯ ಸ್ಟೇಟ್ ಬ್ಯಾಂಕ್‌’ನ ಚೀಫ್‌ ಜನರಲ್‌ ಮ್ಯಾನೇಜರ್ ಅಶ್ವಿನಿ ಮೆಹ್ರಾ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರ ಸಂಸ್ಥೆಗಳ ಮಹಾಒಕ್ಕೂಟ’ (ಕ್ರೆಡಾಯ್‌) ಸಹಯೋಗದಲ್ಲಿ ‘ಕ್ರೆಡಾಯ್‌ ಎಸ್‌ಬಿಐ ರಿಯಾಲ್ಟಿ ಎಕ್ಸ್ಪೊ’ ಆಯೋಜಿಸಲಾಗಿದೆ. ಸ್ಥಳದಲ್ಲೇ ಗೃಹಸಾಲ ಮಂಜೂರು ಮಾಡಲಾಗುವುದು ಎಂದರು.

‘ಎಸ್‌ಬಿಐ’ ಅಧ್ಯಕ್ಷೆ ಅರುಂದತಿ ಭಟ್ಟಾಚಾರ್ಯ ಏ. 25ರಂದು ಸಂಜೆ 4.30ಕ್ಕೆ ಎಕ್ಸ್‌ಪೊಗೆ ಚಾಲನೆ ನೀಡುವರು ಎಂದು ವಿವರಿಸಿದರು.‘ಎಸ್‌ಬಿಐ’ 2014ರ ಮಾರ್ಚ್‌ ವೇಳೆಗೆ ಒಟ್ಟು ರೂ.1.40 ಲಕ್ಷ ಕೋಟಿಗ­ಳಷ್ಟು ಬೃಹತ್‌ ಮೊತ್ತವನ್ನು ಗೃಹಸಾಲ ಕ್ಷೇತ್ರದಲ್ಲೇ ವಿತರಿಸಿದಂತಾ­ಗಿದೆ. ಇದರಲ್ಲಿ ಕರ್ನಾಟಕದಲ್ಲಿನ ಗೃಹ­ಸಾಲ ವಿತರಣೆ ಒಟ್ಟು ರೂ.14,800 ಕೋಟಿ­ಗ­ಳಷ್ಟಿದೆ. ಬೆಂಗಳೂರು ನಗರದ­ಲ್ಲಿಯೇ ಗರಿಷ್ಠ (ರೂ.10,865 ಕೋಟಿ) ಗೃಹಸಾಲ ವಿತರಣೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಹೊಸದಾಗಿ ರೂ.4800 ಕೋಟಿ ಗೃಹಸಾಲ ವಿತರಿಸಿದ್ದು, ಹಿಂದಿನ ವರ್ಷಕ್ಕಿಂತ ಶೇ 25.7ರಷ್ಟು ಹೆಚ್ಚಳವಾಗಿದೆ ಎಂದರು.

‘ಎಸ್‌ಬಿಐ ಯುವ’
‘ಎಸ್‌ಬಿಐ ಯುವ’ ಯೋಜನೆಯಡಿ 21ರಿಂದ 45 ವರ್ಷ ವಯೋಮಿತಿಯ ವೇತನದಾರರಿಗೆ ಸಾಮಾನ್ಯಕ್ಕಿಂತ ಶೇ 20ರಷ್ಟು ಅಧಿಕ ಗೃಹಸಾಲ ಮೊತ್ತ ನೀಡ ಲಾಗುತ್ತಿದೆ. ಮಹಿಳೆಯರಿಗೆ ಗೃಹಸಾಲ ಬಡ್ಡಿದರ ಶೇ 0.50 ಕಡಿಮೆ ಮಾಡಲಾಗಿದೆ. ರೂ.20 ಲಕ್ಷದವರೆಗಿನ ಮನೆ ಖರೀದಿಗೆ ಶೇ 90ರಷ್ಟು, ರೂ.20 ಲಕ್ಷ ದಿಂದ ರೂ.70 ಲಕ್ಷದವರೆಗಿನ ಮನೆಗೆ ಶೇ 80ರಷ್ಟು ಮತ್ತು ರೂ.80 ಲಕ್ಷ ಮೀರಿದ ಮನೆ ಖರೀದಿಗಾದರೆ ಶೇ 75ರಷ್ಟು ಗೃಹಸಾಲ ನೀಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಾದ್ಯಂತದ 100 ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿ­ಗಳು ಪ್ರದರ್ಶನ ದಲ್ಲಿ ಭಾಗವಹಿಸಲಿವೆ. ರೂ.20 ಲಕ್ಷದಿಂದ ರೂ.3 ಕೋಟಿವರೆಗೆ ಬೆಲೆಬಾಳುವ 25 ಸಾವಿರಕ್ಕೂ ಅಧಿಕ ಮನೆಗಳು ಖರೀದಿಗೆ ಲಭ್ಯವಾಗಲಿವೆ ಎಂದು ‘ಕ್ರೆಡಾಯ್‌’ ಅಧ್ಯಕ್ಷ ಶ್ರೀರಾಮ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.