ADVERTISEMENT

‘ಟಿಸಿಎಸ್‌’ ಸಾಮರ್ಥ್ಯ ರೂ 5ಲಕ್ಷ ಕೋಟಿ!

ಮಾರುಕಟ್ಟೆ ಮೌಲ್ಯ ‘ದಾಖಲೆ’ ವೃದ್ಧಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಮುಂಬೈ(ಪಿಟಿಐ): ಸಾಫ್ಟ್‌ವೇರ್‌ ಸೇವೆಗಳ ರಫ್ತು ಕ್ಷೇತ್ರದಲ್ಲಿ ದೇಶದ ಅತ್ಯಂತ ದೊಡ್ಡ ಕಂಪೆನಿ ಎನಿಸಿ ಕೊಂಡಿರುವ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ನ (ಟಿಸಿ ಎಸ್‌) ಮಾರುಕಟ್ಟೆ ಮೌಲ್ಯ ಬುಧವಾರದ ಷೇರು ಪೇಟೆ ವಹಿವಾಟಿನ ನಂತರ ₨5 ಲಕ್ಷ ಕೋಟಿಗೆ ಹೆಚ್ಚಳ ಕಂಡಿದೆ. ಭಾರತದ ಷೇರುಪೇಟೆ ಇತಿಹಾಸದಲ್ಲೇ ಇಷ್ಟೊಂದು ಬೃಹತ್‌  ಪ್ರಮಾಣದಲ್ಲಿ ಮಾರುಕಟ್ಟೆ ಮೌಲ್ಯ ಗಳಿಸಿ ಮೈಲಿಗಲ್ಲು ಸ್ಥಾಪಿಸಿದ ಮೊಟ್ಟ ಮೊದಲ ಕಂಪೆನಿ ಎನಿಸಿಕೊಂಡಿದೆ ‘ಟಿಸಿಎಸ್‌’.

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಬುಧವಾರದ ವಹಿವಾಟು ಕೊನೆಗೊಂಡ ನಂತರದಲ್ಲಿ ‘ಟಿಸಿಎಸ್‌’ ಮಾರುಕಟ್ಟೆ ಮೌಲ್ಯ ₨5,06,703.34 ಕೋಟಿಗಳಷ್ಟಾಗಿತ್ತು. ಅಮೆರಿಕದ ಡಾಲರ್‌ ಲೆಕ್ಕದಲ್ಲಿ 8400 ಕೋಟಿಯಷ್ಟಿತ್ತು.

‘ಬಿಎಸ್‌ಇ’ಯಲ್ಲಿ ಬುಧವಾರ ‘ಟಿಸಿಎಸ್‌’ನ ಪ್ರತಿ ಷೇರು ಶೇ 2.21ರಷ್ಟು ಬೆಲೆ ಹೆಚ್ಚಿಸಿಕೊಂಡು ₨2,586.90ರಂತೆ ಮಾರಾಟವಾದವು. ದಿನದ ಮಧ್ಯಾಂತರದಲ್ಲಿ 52ವಾರಗಳಲ್ಲೇ ಗರಿಷ್ಠ ಎನ್ನುವ ಷ್ಟರ (₨2,595) ಮಟ್ಟಕ್ಕೂ ಏರಿದ್ದವು.

ಉಳಿದಂತೆ ಷೇರುಪೇಟೆಯಲ್ಲಿ ದೇಶದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಮಾಹಿತಿ ತಂತ್ರ ಜ್ಞಾನ ಕಂಪೆನಿಗಳ ಪಟ್ಟಿಯಲ್ಲಿ ಇನ್ಫೊಸಿಸ್‌ (₨1,92,196 ಕೋಟಿ), ಎಚ್‌ಸಿಎಲ್‌ ಟೆಕ್ನಾಲಜೀಸ್‌ (₨1,07,880 ಕೋಟಿ), ವಿಪ್ರೊ (₨1,40,474 ಕೋಟಿ) ಮತ್ತು ಟೆಕ್‌ ಮಹೀಂದ್ರಾ (₨50,374 ಕೋಟಿ) ಮೊದಲ ಸಾಲಿನಲ್ಲಿವೆ.

ದಿಗ್ಗಜ ಸಂಸ್ಥೆಗಳು
‘ಟಿಸಿಎಸ್‌’ ಹೊರತುಪಡಿಸಿದರೆ ಕೇಂದ್ರ ಸರ್ಕಾರದ ಒಡೆತನದ ‘ತೈಲ ಮತ್ತು ನೈಸರ್ಗಿಕ ಅನಿಲ ನಿಗಮನ’ (ಒಎನ್‌ಜಿಸಿ) ₨3,46,583 ಕೋಟಿ, ಖಾಸಗಿ ಕಂಪೆನಿ ಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. (ಆರ್‌ಐಎಲ್‌) ₨3,34,055 ಕೋಟಿ ಮತ್ತು ‘ಐಟಿಸಿ’ ₨2,80,454 ಹಾಗೂ ಕೋಲ್‌ ಇಂಡಿಯಾ ₨2,42,580 ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ.

ಬಿಎಸ್‌ಇ ವಹಿವಾಟು ಪಟ್ಟಿಯಲ್ಲಿರುವ ಟಾಟಾ ಸಮೂಹದ 16 ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ₨3,06,338 ಕೋಟಿಗಳಷ್ಟಿದೆ.

ಸೂಚ್ಯಂಕ ಹೊಸ ದಾಖಲೆ
ದೇಶದ ಎರಡೂ ಪ್ರಮುಖ ಷೇರುಪೇಟೆಗಳಲ್ಲಿ ಬುಧವಾರ ಹೊಸ ದಾಖಲೆ ನಿರ್ಮಾಣವಾಯಿತು.

‘ಮುಂಬೈ ಷೇರು ವಿನಿಮಯ ಕೇಂದ್ರ’ (ಬಿಎಸ್‌ಇ) 121 ಅಂಶಗಳ ಗಳಿಕೆಯೊಂದಿಗೆ 26,147.33 ಅಂಶಗಳಷ್ಟು ಗರಿಷ್ಠ ಮಟ್ಟದ ದಾಖಲೆ ಬರೆಯಿತು. ‘ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ’ದ (ಎನ್‌ಎಸ್‌ಇ) ‘ನಿಫ್ಟಿ’ ಸಹ 27.90 ಅಂಶಗಳನ್ನು ಶಕ್ತಿ ಹೆಚ್ಚಿಸಿಕೊಂಡು 7,795.75 ಅಂಶಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ದಿನದ ವಹಿವಾಟಿನ ಮಧ್ಯಾಂತರದಲ್ಲಿ 7,809 ಅಂಶಗಳ ಶಿಖರವನ್ನೂ ಮುಟ್ಟಿ ವಾಪಸಾಯಿತು.

ದಿನದ ವಹಿವಾಟಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದ್ದು ‘ಇನ್ಫೊಸಿಸ್‌’ ಕಂಪೆನಿ. ಶೇ 3.46ರಷ್ಟು ಪ್ರಮಾಣದಲ್ಲಿ ತನ್ನ ಷೇರು ಮೌಲ್ಯವನ್ನು ಹೆಚ್ಚಿಸಿಕೊಂಡು ‘ಇನ್ಫಿ’ ಸಂವೇದಿ ಸೂಚ್ಯಂಕ ವೃದ್ಧಿಗೆ 60 ಅಂಶಗಳ ಕೊಡುಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT