ADVERTISEMENT

‘ಸುಗಂಧ ರಾಯಭಾರಿ’ಗೆ ಶತಮಾನದ ಸಂಭ್ರಮ

ಜಕ್ಕಣಕ್ಕಿ ಎಂ ದಯಾನಂದ
Published 3 ಮೇ 2016, 19:30 IST
Last Updated 3 ಮೇ 2016, 19:30 IST
‘ಸುಗಂಧ ರಾಯಭಾರಿ’ಗೆ  ಶತಮಾನದ ಸಂಭ್ರಮ
‘ಸುಗಂಧ ರಾಯಭಾರಿ’ಗೆ ಶತಮಾನದ ಸಂಭ್ರಮ   

ಕನ್ನಡ ನಾಡು ಚಿನ್ನದ ಬೀಡು, ಶ್ರೀಗಂಧದ ನೆಲೆವೀಡು ಎಂಬ ಮಾತಿದೆ. ಶ್ರೀಗಂಧದ ಕಂಪನ್ನು ದೇಶವಿದೇಶಗಳಲ್ಲಿ ಪಸರಿಸಿದ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜಂಟ್‌ (ಕೆಎಸ್‌ಡಿಎಲ್)ಗೆ ಈಗ ಶತಮಾನದ ಸಂಭ್ರಮದಲ್ಲಿದೆ.

ಇಂದು ಹತ್ತು ಹಲವು  ಸೋಪ್ಸ್‌ ಮತ್ತು ಡಿಟರ್ಜಂಟ್‌ ಉತ್ಪನ್ನಗಳನ್ನು   ಮಾರುಕಟ್ಟೆಗೆ ನೀಡುತ್ತಿರುವ ಕಾರ್ಖಾನೆ  1916 ರಲ್ಲಿ ಸ್ಥಾಪನೆಯಾಯಿತು. ಇದೀಗ 2016 ರ ಮೇ  ತಿಂಗಳಲ್ಲಿ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.

ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌, ದಿವಾನ್‌ ಸರ್‌ ಎಂ.ವಿಶ್ವೇಶ್ವರಯ್ಯ ಅವರು ಮೈಸೂ ರಿನಲ್ಲಿ ಕಾರ್ಖಾನೆಗೆ ಚಾಲನೆ ನೀಡಿದ್ದರು. ಶ್ರೀಗಂಧದಿಂದ ಎಣ್ಣೆ ತೆಗೆಯುವ ಘಟಕ ಬೆಂಗಳೂರಿನಲ್ಲಿ  1916ರಲ್ಲಿ  ಕಾರ್ಯಾರಂಭ ಮಾಡಿತ್ತು.

100 ವರ್ಷಗಳ  ಹೆಜ್ಜೆ ಗುರುತು
‘ಭಾರತದ ಸುಗಂಧದ ರಾಯಭಾರಿ’ ಎಂದು ಕರೆಸಿಕೊಳ್ಳುವ  ಕೆಎಸ್‌ಡಿಎಲ್‌, ನೂರು ವರ್ಷಗಳಲ್ಲಿ ನಡೆದುಬಂದ ಸಾಧನೆಯ ದಾರಿ ಸ್ವಾರಸ್ಯಕರವಾಗಿದೆ. 1918ರಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು 11  ಟನ್‌ (ವರ್ಷಕ್ಕೆ) ಸಾಮರ್ಥ್ಯದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಅದೇ ವರ್ಷ ಮೈಸೂರು ಸ್ಯಾಂಡಲ್‌ ಸೋಪ್‌ ಅನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

1944ರಲ್ಲಿ ಶ್ರೀಗಂಧದ ಎಣ್ಣೆ  ತೆಗೆಯುವ  ಎರಡನೇ ಘಟಕವನ್ನು ಶಿವಮೊಗ್ಗದಲ್ಲಿ ಆರಂಭಿಸಲಾಯಿತು. 1957ರಲ್ಲಿ ಕಾರ್ಖಾನೆಯನ್ನು  ಈಗಿನ ಘಟಕಕ್ಕೆ ಸ್ಥಳಾಂತರಿಸಲಾಯಿತು. 1965 ವಿದೇಶಕ್ಕೆ ರಫ್ತು ಆರಂಭ. 1967ರಲ್ಲಿ ಸುವರ್ಣ ಮಹೋತ್ಸವ ಆಚರಣೆ ಸಂಭ್ರಮ.

1974 ಕಾರ್ಖಾನೆಯ ಉತ್ಪನ್ನಗಳ ಮಾರಾಟಕ್ಕೆ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌  ಅನ್ನು ಏಕೈಕ  ಮಾರಾಟ ಪ್ರತಿನಿಧಿಯಾಗಿ ಮಾಡಲಾಯಿತು. 1980ರಲ್ಲಿ   ಸೋಪ್‌ ಫ್ಯಾಕ್ಟರಿಯನ್ನು ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿ 9ನೇ  ಜುಲೈನಲ್ಲಿ   ‘ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜಂಟ್‌  ಲಿಮಿಟೆಡ್‌’ (ಕೆಎಸ್‌ಡಿಎಲ್‌) ಎಂದು ನಾಮಕರಣ ಮಾಡಲಾಯಿತು.

ಬಹುರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿದ ಸಂಸ್ಥೆಯು, ಐಎಸ್ಒ ಪ್ರಮಾಣ ಪತ್ರಗಳನ್ನು ನಂತರ ವರ್ಷಗಳಲ್ಲಿ ಪಡೆದುಕೊಂಡಿತು. ಅಲ್ಲದೆ ಇತರ ಹಲವು ಉತ್ಪನ್ನಗಳನ್ನು ಪರಿಚಯಿಸಿತು. 2012ರಲ್ಲಿ ಕಂಪೆನಿ ಹೆಚ್ಚಿನ ಲಾಭದ ವಹಿವಾಟು ನಡೆಸಿದ ದಾಖಲೆ ಸೃಷ್ಟಿಸಿತು.

ಶತಮಾನೋತ್ಸವ ಆಚರಣೆ
ಕಾರ್ಖಾನೆಗೆ 100 ವರ್ಷ ತುಂಬಿದ ಪ್ರಯುಕ್ತ ಅದ್ದೂರಿಯಿಂದ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಈ ವೇಳೆ ಹೊಸ ‘ಮೈಸೂರು ಸ್ಯಾಂಡಲ್‌ ಸೆಂಟೆನಿಯಲ್‌’ ಸೋಪ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ನೂತನ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಗುತ್ತದೆ.

ಹಲವು ಪ್ರಶಸ್ತಿಗಳ ಗರಿ
ಕಾರ್ಖಾನೆ ನೂರು ವರ್ಷಗಳಲ್ಲಿ ಹಲವು ಪ್ರಶಸ್ತಿಗಳನ್ನು  ಮುಡಿಗೇರಿಸಿ ಕೊಂಡಿದೆ. 2010ರಲ್ಲಿ ಮುಖ್ಯಮಂತ್ರಿಗಳ ರತ್ನ ಅವಾರ್ಡ್,   ರಫ್ತು  ವಹಿವಾಟಿಗೆ 2006–07 ರಲ್ಲಿ ಕೆಮೆಕ್ಸಿಲ್‌ನಿಂದ ಪ್ರಶಸ್ತಿ ಪಡೆದಿದೆ.  2012ರಲ್ಲಿ ‘ನ್ಯಾಷನಲ್‌ ಅವಾರ್ಡ್‌ ಫಾರ್‌ ಕಾಸ್ಟ್‌ ಮ್ಯಾನೇಜ್‌ ಮೆಂಟ್‌’ ಸಂದಿದೆ. ಗುಣಮಟ್ಟಕ್ಕಾಗಿ ಐಎಸ್ಒ  9001–2008  ಮತ್ತು ಪರಿಸರ ನೀತಿಗಾಗಿ ಐಎಸ್‌ಒ 14001–2004 ಪ್ರಮಾಣ ಪತ್ರಗಳು ಬಂದಿವೆ.

2014–15ಕ್ಕೆ ರಫ್ತಿಗಾಗಿ ಅತ್ಯುತ್ತಮ ಸಂಸ್ಥೆ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.  ‘ಮೈಸೂರು ಸ್ಯಾಂಡಲ್‌ಸೋಪ್‌’ ಭೌಗೋಳಿಕ ಗುರುತಿಸುವಿಕೆ ನೋಂದಣಿ ಯಾಗಿದ್ದು, ಭಾರತದ ಬೌದ್ಧಿಕ ಆಸ್ತಿಯಾಗಿದೆ.

ಐದು ಪ್ರಮುಖ ಉತ್ಪನ್ನಗಳು
1918ರಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್‌’ ಬ್ರ್ಯಾಂಡ್‌ ಹೆಸರಿನಲ್ಲಿ ಸೋಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ ಲಾಯಿತು. ಕೆಎಸ್‌ಡಿಎಲ್‌ ಮುಖ್ಯವಾಗಿ 5 ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳೆಂದರೆ ಪ್ರೀಮಿಯಂ ಸೋಪ್‌, ಪಾಪ್ಯುಲರ್ ಸೋಪ್‌, ಡಿಟರ್ಜಂಟ್‌, ಸೌಂದರ್ಯವರ್ಧಕ ಹಾಗೂ ಅಗರಬತ್ತಿಗಳು.

ಸದ್ಯ 12 ರೀತಿಯ ಪ್ರೀಮಿಯಂ ಸೋಪ್‌, 5 ಪಾಪ್ಯುಲರ್ ಸೋಪ್‌, 12 ಡಿಟರ್ಜಂಟ್‌, 10 ಸೌಂದರ್ಯವರ್ಧಕ ಮತ್ತು 15 ರೀತಿಯ ಅಗರಬತ್ತಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವುಗಳಲ್ಲದೆ ಸ್ಯಾಂಡಲ್‌ವುಡ್ ಬಿಲ್ಲೆಟ್ಸ್‌  ಮತ್ತಿತರ  ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಇದಲ್ಲದೆ ವಿದ್ಯಾರ್ಥಿಗಳಿಗಾಗಿ ‘ಶುಚಿ ಸಂಭ್ರಮ’ ಎಂಬ ಕಿಟ್‌ ಅನ್ನು ಪರಿಚಯಿಸಿದೆ.

ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್‌ಗಳಿಗೆ, ಮೊರಾರ್ಜಿ ದೇಸಾಯಿ  ಮತ್ತು ನವೋದಯ ವಿದ್ಯಾಲಯಗಳ ಹಾಸ್ಟೆಲ್‌ಗಳಿಗೆ ಇದನ್ನು 1994ರಿಂದ ಪೂರೈಸಲಾಗುತ್ತದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಮಡಿಲು’ ಯೋಜನೆಯಡಿ ನೀಡುವ ಕಿಟ್‌, ಕೆಎಸ್‌ಡಿಎಲ್‌ನ ಹಲವು ಉತ್ಪನ್ನಗಳನ್ನು ಒಳಗೊಂಡಿರುತ್ತದೆ.

ಆರು ಮಾರುಕಟ್ಟೆ ಶಾಖೆಗಳು
ಕಾರ್ಖಾನೆ ತನ್ನ ಮಾರಾಟ ಮತ್ತು ಉತ್ಪನ್ನಗಳ ಪ್ರಚಾರಕ್ಕಾಗಿ ದೇಶದ ಆರು  ಕಡೆ ಮಾರುಕಟ್ಟೆ  ಶಾಖೆಗಳನ್ನು ಹೊಂದಿದೆ.  ಬೆಂಗಳೂರು, ಚೆನ್ನೈ, ಹೈದರಾಬಾದ್‌,  ಮುಂಬೈ, ಕೋಲ್ಕತಾ ಹಾಗೂ  ದೆಹಲಿಗಳಲ್ಲಿ ಶಾಖೆಗಳಿವೆ.   ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಎರಡು ವಿಭಾಗಗಳಿವೆ. ಬೆಂಗಳೂರಿನಲ್ಲಿ ಆಡಳಿತ ಕಚೇರಿ ಇದೆ.

18 ದೇಶಗಳಿಗೆ ರಫ್ತು
ಕಾರ್ಖಾನೆಯ ಉತ್ಪನ್ನಗಳು ಪ್ರಪಂಚದ 18 ದೇಶಗಳಲ್ಲಿ  ಗ್ರಾಹಕರನ್ನು ತಲುಪಿವೆ. ಅಮೆರಿಕ, ಯುಎಇ, ಸೌದಿ ಅರೇಬಿಯಾ, ಕೆನಡಾ, ಕುವೈತ್‌, ಬೆಹರಿನ್‌, ಕತಾರ್‌, ಮಲೇಷ್ಯಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಚೀನಾ, ತೈವಾನ್‌, ಆಸ್ಟ್ರೇಲಿಯಾ, ಯುರೋಪ್‌  ದೇಶಗಳಾದ ಲಂಡನ್‌, ಫ್ರಾನ್ಸ್‌ ಮತ್ತು ಹಂಗೇರಿ ದೇಶಗಳಿಗೆ ₹10.26 ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.  ಯುಎಇಗೆ 2015–16ರಲ್ಲಿ ಒಟ್ಟು ₹3.9 ಕೋಟಿ ಮೊತ್ತದ ಉತ್ನನ್ನಗಳನ್ನು ರಫ್ತು ಮಾಡಲಾಗಿದ್ದರೆ,  ಸೌದಿ ಅರೇಬಿಯಾಕ್ಕೆ ₹2.56 ಕೋಟಿ, ಅಮೆರಿಕಕ್ಕೆ ₹1.09 ಕೋಟಿ ಮೌಲ್ಯದ ಉತ್ಪನ್ನ ರಫ್ತಾಗಿದೆ.

ಇದಲ್ಲದೆ ಇನ್ನೂ ಹಲವು ದೇಶಗಳಿಗೆ ರಫ್ತು ಮಾಡುವ ಕುರಿತು ಮಾರುಕಟ್ಟೆ ವಿಭಾಗ ಮಾತುಕತೆ ನಡೆಸುತ್ತಿದೆ. ಹಲವು ದೇಶಗಳ ಪ್ರತಿನಿಧಿಗಳು ಈಗಾಗಲೇ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ.

2015–16 ರಲ್ಲಿ  333.39   ಟನ್‌ಗಳಷ್ಟು  ಟಾಯ್ಲೆಟ್‌ ಸೋಪ್‌ ಉತ್ಪನ್ನ ರಫ್ತಾಗಿದ್ದರೆ,  3.75  ಟನ್‌ ಸೌಂದರ್ಯವರ್ಧಕ ಹಾಗೂ 6.63  ಟನ್‌ ಅಗರ ಬತ್ತಿ ರಫ್ತು ಮಾಡಲಾಗಿದೆ.

ಸದ್ಯ ಕಾರ್ಖಾನೆಯಲ್ಲಿ 2017 ರ ಮೇ ವರೆಗೆ ಸಾಕಾಗುವಷ್ಟು ಶ್ರೀಗಂಧದ ಎಣ್ಣೆ ದಾಸ್ತಾನು ಇದೆ.  ಸದ್ಯದಲ್ಲೇ 114  ಟನ್‌ ಎಣ್ಣೆ ಉತ್ಪಾದಿಸಲಾಗುತ್ತಿದ್ದು, ಇದು 2019ರ ಜೂನ್‌ವರೆಗೆ ಸಾಕಾಗುತ್ತದೆ.

ಶಿವಮೊಗ್ಗದಲ್ಲಿ ಶ್ರೀಗಂಧ ನರ್ಸರಿ: ಸಂಸ್ಥೆ ‘ಹೆಚ್ಚು ಶ್ರೀಗಂಧ ಬೆಳೆಯಿರಿ’ ಶೀರ್ಷಿಕೆಯಡಿ ಶ್ರೀಗಂಧ ಬೆಳೆಯುವ ರೈತರನ್ನು ಪ್ರೋತ್ಸಾಹಿಸುತ್ತಿದೆ. ಶಿವಮೊಗ್ಗದಲ್ಲಿ ಶ್ರೀಗಂಧದ ನರ್ಸರಿ  ಮತ್ತು ಗಾರ್ಡನ್‌ ಇದೆ. ಕಾನೂನು ಪ್ರಕಾರ ಶ್ರೀಗಂಧ ಬೆಳೆದು ಪೂರೈಸಲು ನೆರವಾಗುತ್ತಿದೆ.

***
ಪ್ರಗತಿಯ ಪಥದತ್ತ...
‘ನಮ್ಮ ಸಂಸ್ಥೆಯ ಉತ್ಕೃಷ್ಟ ಉತ್ಪನ್ನಗಳಾದ ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಗಂಧದ ಸೋಪ್‌  ತಮ್ಮ ನೈಸರ್ಗಿಕ ಸುವಾಸನೆಯಿಂದ ವಿಶ್ವಮಾನ್ಯತೆ ಪಡೆದಿವೆ. ಜಾಗತೀಕರಣ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆಯ ನಡುವೆಯೂ ಪ್ರಗತಿ ಪಥದತ್ತ ಸಾಗುತ್ತಿದೆ. 2014–15 ನೇ ಸಾಲಿನಲ್ಲಿ ₹ 408 ಕೋಟಿ ವಹಿವಾಟು ನಡೆಸಿದೆ. 2015–16ರಲ್ಲಿ ₹450 ಕೋಟಿ ವಹಿವಾಟು ಗುರಿ ಹೊಂದಲಾಗಿದೆ. ಸಂಸ್ಥೆ ಇಷ್ಟು ವರ್ಷ ಸಾಧನೆ ಮಾಡುತ್ತಾ ಬರಲು ಶ್ರಮಿಸಿದ ಎಲ್ಲ ಹಂತದ ಕಾರ್ಮಿಕ ಸಿಬ್ಬಂದಿ, ಅಧಿಕಾರಿಗಳು ಹಾಗೂ ಗ್ರಾಹಕರಿಗೆ ಅಭಿನಂದನೆಗಳು.
-ಡಾ. ಶಮ್ಲಾ ಇಕ್ಬಾಲ್‌, ವ್ಯವಸ್ಥಾಪಕ ನಿರ್ದೇಶಕಿ. ಕೆಎಸ್‌ಡಿಎಲ್‌

***
ಗ್ರಾಹಕರ ಬೇಡಿಕೆಗೆ ಸ್ಪಂದನೆ
ರಾಜ್ಯ ಸರ್ಕಾರದ ಪ್ರತಿಷ್ಠಿತ ಉದ್ಯಮಗಳಲ್ಲಿ ಅಗ್ರಸ್ಥಾನದಲ್ಲಿರುವ ಕೆಎಸ್‌ಡಿಎಲ್‌  , ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತ  ಬಂದಿದೆ. ಈ ಎಲ್ಲ  ಉತ್ಪನ್ನಗಳಿಗೆ ಗ್ರಾಹಕರಿದ್ದಾರೆ. ಶ್ರೀಗಂಧದ ಕೊರತೆ  ನಿವಾರಿಸಲು ‘ಶ್ರೀಗಂಧ ಬೆಳೆಸಿ ಸಿರಿವಂತರಾಗಿ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
-ವೆರೋನಿಕಾ ಕರ್ನೇಲಿಯೊ, ಅಧ್ಯಕ್ಷೆ, ಕೆಎಸ್‌ಡಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.