ADVERTISEMENT

₹1500ಕ್ಕೆ ಮಾರುಕಟ್ಟೆಗೆ ಬರಲಿದೆ 'ಜಿಯೋ ಸ್ಮಾರ್ಟ್‌ಫೋನ್‌’: 3 ವರ್ಷದ ಬಳಿಕ ಹಣ ವಾಪಸ್‌

ಏಜೆನ್ಸೀಸ್
Published 21 ಜುಲೈ 2017, 9:00 IST
Last Updated 21 ಜುಲೈ 2017, 9:00 IST
₹1500ಕ್ಕೆ ಮಾರುಕಟ್ಟೆಗೆ ಬರಲಿದೆ 'ಜಿಯೋ ಸ್ಮಾರ್ಟ್‌ಫೋನ್‌’: 3 ವರ್ಷದ ಬಳಿಕ ಹಣ ವಾಪಸ್‌
₹1500ಕ್ಕೆ ಮಾರುಕಟ್ಟೆಗೆ ಬರಲಿದೆ 'ಜಿಯೋ ಸ್ಮಾರ್ಟ್‌ಫೋನ್‌’: 3 ವರ್ಷದ ಬಳಿಕ ಹಣ ವಾಪಸ್‌   

ಮುಂಬೈ: ದೇಶದ ಮೊಬೈಲ್‌ ಅಂತರ್ಜಾಲ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದ ‘ರಿಲಯನ್ಸ್‌ ಇಂಡಸ್ಟ್ರೀಸ್‌’ ಇದೀಗ ಮೇಡ್‌ ಇನ್‌ ಇಂಡಿಯಾ ಖ್ಯಾತಿಯ ‘ಜಿಯೋ ಫೋನ್‌’ ಬಿಡುಗಡೆ ಮಾಡುವ ಮೂಲಕ ಮೊಬೈಲ್‌ ಮಾರುಕಟ್ಟೆಯಲ್ಲೂ ಭಾರಿ ನಿರೀಕ್ಷೆ ಮೂಡಿಸಿದೆ.

ಶುಕ್ರವಾರ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ₹1500 ಮುಖಬೆಲೆಯ 4ಜಿ ವೋಲ್ಟ್‌ ಸೌಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ಗ್ರೂಪ್ ಮುಖ್ಯಸ್ಥ ಮುಖೇಶ್‌ ಅಂಬಾನಿ, ‘ನಾವು ಸಾಂಪ್ರದಾಯಿಕ ಶೈಲಿಯ ಮೊಬೈಲ್‌ ಅನ್ನು ಪರಿಚಯಿಸಿದ್ದೇವೆ. ಇದು ಭಾರತದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಅಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಈ ಮೊಬೈಲ್‌ ತಮಗೆ ಉಚಿತವಾಗಿ ಸಿಗಲಿದೆ. ಅಂದರೆ ₹1500 ನೀಡಿ ಇದನ್ನು ಖರೀದಿಸಿದರೆ, ಮೂರು ವರ್ಷಗಳ ನಂತರ ಆ ಹಣವನ್ನು ವಾಪಸ್ ಮಾಡಲಿದ್ದೇವೆ. ಆಗಸ್ಟ್‌ 24ರ ನಂತರ ಮುಂಗಡವಾಗಿ ಕಾಯ್ದಿರಿಸುವಿಕೆ ಆರಂಭವಾಗಲಿದ್ದು, ಆದ್ಯತೆಯ ಆಧಾರದಲ್ಲಿ ಸೆಪ್ಟೆಂಬರ್‌ 2017ರಿಂದಲೇ ಮಾರಾಟ ಪ್ರಾರಂಭವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಪ್ರತಿ ತಿಂಗಳು ₹153 ನೀಡಿ ಡೇಟಾ ರೀಚಾರ್ಜ್‌ ಮಾಡಿಕೊಂಡರೆ, ಅನಿಯಮಿತ ಅಂತರ್ಜಾಲ ಸೌಲಭ್ಯ ದೊರೆಯಲಿದೆ.ಇಷ್ಟು ಪ್ರಮಾಣದ ಡೇಟಾ ಸೌಲಭ್ಯ ಬಳಸಲು ಇತರೆ ಕಂಪನಿಗಳಿಗೆ ₹5000 ವೆಚ್ಚ ಮಾಡಬೇಕಾಗುತ್ತದೆ’ ಎಂದು ರಿಲಯನ್ಸ್‌ ಮುಖ್ಯಸ್ಥರು ತಿಳಿಸಿದ್ದಾರೆ. ಜತೆಗೆ ವಾರಕ್ಕೆ ₹54 ರೀಚಾರ್ಜ್‌ ಮಾಡಿಕೊಳ್ಳುವ ವಾರದ ಪ್ಲಾನ್‌  ಕೂಡಾ ಇಲ್ಲಿ ಲಭ್ಯವಿದೆ.

ಜಗತ್ತಿನಲ್ಲಿ ಅತ್ಯಂತ ಅಗ್ಗದ ದರಕ್ಕೆ ದೊರಕುವ ಸ್ಮಾರ್ಟ್‌ಫೋನ್‌ ಇದಾಗಿದೆ ಎಂದು ಹೇಳಿಕೊಂಡಿರುವ ಕಂಪೆನಿ, ಪ್ರತಿ ತಿಂಗಳು ದೇಶದಾದ್ಯಂತ 5ಲಕ್ಷ ‘ಜಿಯೋ ಫೋನ್‌’ ಮಾರಾಟ ಮಾಡುವ ಯೋಜನೆಯಲ್ಲಿದೆ. ಗ್ರಾಹಕರ ಬಳಕೆಗೆ ಅನುಕೂಲವಾಗುವಂತೆ ಕೀಪ್ಯಾಡ್‌ ಅನ್ನು ವಿನ್ಯಾಸಗೊಳಿಸಿದೆ.

ಮೊಬೈಲ್‌ ಬಿಡುಗಡೆಗೂ ಮುನ್ನ ಸಾರ್ವಜನಿಕ ವಲಯದಲ್ಲಿ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದವು. ಹಾಗಾಗಿ ಇದರ ಬಗ್ಗೆ ಅಪಾರ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು.

ವಿಶೇಷತೆಗಳು
* 4ಜಿ ವೋಲ್ಟ್‌ ಸೌಲಭ್ಯ
* ಕೀಪ್ಯಾಡ್‌ ವಿನ್ಯಾಸ
* ಅಂತರ್ಜಾಲ ಹುಡುಕಾಟಕ್ಕೆ ಅವಕಾಶ
* 2.4 ಇಂಚಿನ ಡಿಸ್‌ಪ್ಲೇ
* ಜಿಯೋ ಸಿನಿಮಾ ಆ್ಯಪ್‌ ಲಭ್ಯ
* ‘ಎಸ್‌ಒಎಸ್‌’ (ತುರ್ತು ಕರೆ ಗುಂಡಿ) ಸೌಲಭ್ಯ
* ಪ್ರತಿ ತಿಂಗಳು ₹153ರೀಚಾರ್ಜ್‌ ಮಾಡಿಕೊಂಡರೆ ಅನಿಯಮಿತ ಅಂತರ್ಜಾಲ
* ಉಚಿತ ಕರೆ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.