ADVERTISEMENT

5 ಪೈಸೆಗೆ ಒಂದು ಕೆ.ಜಿ. ಈರುಳ್ಳಿ!

ಕಂಗೆಟ್ಟ ಮಹಾರಾಷ್ಟ್ರ, ಮಧ್ಯ ಪ್ರದೇಶ ರೈತರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
5 ಪೈಸೆಗೆ ಒಂದು ಕೆ.ಜಿ. ಈರುಳ್ಳಿ!
5 ಪೈಸೆಗೆ ಒಂದು ಕೆ.ಜಿ. ಈರುಳ್ಳಿ!   

ನವದೆಹಲಿ (ಪಿಟಿಐ): ನಿರೀಕ್ಷೆಗೆ ಮೀರಿದ ಇಳುವರಿಯಿಂದಾಗಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ರೈತರು ಕಂಗೆಟ್ಟಿದ್ದು ತಮಗೆ ತೋಚಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ.

ದೇಶದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ರೈತರು ಸಗಟು ಮಾರುಕಟ್ಟೆಯಲ್ಲಿ ಕೇವಲ ಐದು ಪೈಸೆಗೆ ಒಂದು ಕೆ.ಜಿ.  ಲೆಕ್ಕದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿರುವುದಾಗಿ ದುಃಖತೋಡಿಕೊಂಡಿದ್ದಾರೆ.

ಏಷ್ಯಾದ ಅತಿ ದೊಡ್ಡ ಈರುಳ್ಳಿ  ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಮಹಾರಾಷ್ಟ್ರದ ಲಾಸಲ್‌ಗಾಂವ್‌ ಮಾರುಕಟ್ಟೆಯಲ್ಲಿ  ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹6ಕ್ಕೆ ಕುಸಿದಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ₹48.50ರಷ್ಟಿತ್ತು.

ಇಳುವರಿ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬೆಲೆ ಕುಸಿತದಿಂದಾಗಿ ಉಗ್ರಾಣಗಳಲ್ಲಿಯ ದಾಸ್ತಾನು ಪ್ರಮಾಣ ಕೂಡ ಕರಗುತ್ತಿಲ್ಲ. ಇದರಿಂದಾಗಿ ಸಾವಿರಾರು ಟನ್ ಈರುಳ್ಳಿ ಕೊಳೆಯುತ್ತಿದ್ದು, ರೈತರು ತೋಚಿದ ಬೆಲೆಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.2015ರ ಜುಲೈನಿಂದ 2016 ಜೂನ್‌ ವರೆಗಿನ ಬೆಳೆವರ್ಷದಲ್ಲಿ  ಈರುಳ್ಳಿ ಇಳುವರಿ ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ರಫ್ತು ಹೆಚ್ಚಳ, ಸುಂಕ ಕಡಿತ: ಈರುಳ್ಳಿ ಬೆಳೆಗಾರರ ಹಿತದೃಷ್ಟಿಯಿಂದ  ಈರುಳ್ಳಿ ರಫ್ತು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ರಫ್ತು ಉದ್ಯಮಿಗಳಿಗೆ ಸಲಹೆ ಮಾಡಿದೆ. ತಾಜಾ ಮತ್ತು ಸಂಗ್ರಹಿಸಿಟ್ಟ ಈರುಳ್ಳಿ ರಫ್ತಿನ ಮೇಲೆ ಶೇ 5 ರವರೆಗೆ ಸುಂಕ ವಿನಾಯ್ತಿ  ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. 

ಡಿಸೆಂಬರ್ 31ರವರೆಗೆ ರಫ್ತು ಉದ್ಯಮಿಗಳಿಗೆ ಈ ವಿನಾಯ್ತಿ ದೊರೆಯಲಿದ್ದು,  ಅಗತ್ಯ ಬಿದ್ದರೆ  ಅವಧಿಯನ್ನು ವಿಸ್ತರಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.ಈರುಳ್ಳಿ ರಫ್ತುದಾರರಿಗೆ ಸರ್ಕಾರ ರಫ್ತು ಸುಂಕ ವಿನಾಯ್ತಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಿದೆ ಎಂದು ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.

ಬೆಲೆ ಕುಸಿತದಿಂದ ಕಂಗೆಟ್ಟಿರುವ ಈರುಳ್ಳಿ ಬೆಳೆಗಾರರಿಗೆ ಅಗತ್ಯ ನೆರವು ನೀಡಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು  ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಮತ್ತು ವಾಣಿಜ್ಯ ಸಚಿವರ ಜತೆ ಸಮಾಲೋಚನೆ ನಡೆಸಿದ್ದಾರೆ.

2015-16ರಲ್ಲಿ ₹2,362 ಕೋಟಿ ಮೌಲ್ಯದ 12 ಲಕ್ಷ ಟನ್‌ ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ ₹20–₹25ರಂತೆ ರಫ್ತು ಮಾಡಲಾಗಿತ್ತು.ಪ್ರಸಕ್ತ ವರ್ಷ ಭಾರತದಿಂದ 3–3.5 ಲಕ್ಷ ಟನ್‌ ಈರುಳ್ಳಿ  ಪ್ರತಿ ಕೆ.ಜಿಗೆ ₹10–₹12 ಬೆಲೆಯಲ್ಲಿ ರಫ್ತಾಗುವ ಸಾಧ್ಯತೆ ಇದೆ.  ಅತಿ ಹೆಚ್ಚು ಈರುಳ್ಳಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ನೆದರ್ಲೆಂಡ್ಸ್‌ ಮತ್ತು ಚೀನಾ ನಂತರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.