ADVERTISEMENT

ಹೂಡಿಕೆಗೆ ವಯಸ್ಸಿನ ಅಡ್ಡಿ ಇದೆಯೇ?

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಹೂಡಿಕೆಗೆ ವಯಸ್ಸಿನ ಅಡ್ಡಿ ಇದೆಯೇ?
ಹೂಡಿಕೆಗೆ ವಯಸ್ಸಿನ ಅಡ್ಡಿ ಇದೆಯೇ?   

ನೀವು ಮ್ಯೂಚುಯಲ್‌ ಫಂಡ್‌ ಹೂಡಿಕೆದಾರರಾಗಿದ್ದರೆ, ಯಾವುದರಲ್ಲಿ ಹಣವನ್ನು ತೊಡಗಿಸಿಕೊಳ್ಳಬೇಕು (ಪೋರ್ಟ್‌ ಫೋಲಿಯೊ ಅಲೊಕೇಷನ್‌) ಎಂಬುದರ ಬಗ್ಗೆ ಜನರು ಮಾತನಾಡುವುದನ್ನು ಕೇಳಿಸಿಕೊಂಡಿರಬಹುದು. ಷೇರುಗಳಲ್ಲಿ ಹೂಡಿಕೆಯ ಪ್ರಮಾಣದ ವಿಚಾರ ಬಂದಾಗ, ‘100 ರಿಂದ ನಿಮ್ಮ ವಯಸ್ಸನ್ನು ಕಳೆಯುವಾಗ ಬರುವ ಉತ್ತರವನ್ನೇ ಪ್ರಮಾಣವಾಗಿ ಬಳಸಿಕೊಳ್ಳುವುದು ಸೂಕ್ತ’ ಎಂದು ಹಲವರು ಸಲಹೆ ನೀಡುತ್ತಾರೆ. ನಿಜವಾಗಿಯೂ ಇದು ಒಳ್ಳೆಯ ಸಲಹೆಯೇ?

ಯುವಕರಲ್ಲಿ ನಷ್ಟದ ತಾಳಿಕೆ’ಯ ಶಕ್ತಿ ಹೆಚ್ಚಾಗಿರುತ್ತದೆ ಎಂಬುದು ಸಾಮಾನ್ಯ ಗ್ರಹಿಕೆ. ನಿಮಗೆ ವಯಸ್ಸಾಗುತ್ತಿದ್ದಂತೆ ಅಪಾಯ ತಾಳಿಕೆಯ ಶಕ್ತಿ ಕುಂದುತ್ತದೆ. ಯಾಕೆ ಹೀಗೆ? ಉತ್ತರ ಸರಳವಾಗಿದೆ. ನೀವು ಯುವಕರಾಗಿದ್ದಾಗ ಹೊಣೆಗಾರಿಕೆಗಳು ಕಡಿಮೆ ಇರುತ್ತವೆ ಮತ್ತು ಗುರಿ ಸಾಧಿಸಲು ದೀರ್ಘ ಅವಧಿ ಇರುತ್ತದೆ. ಅಂದರೆ ಕೆಲವು ರಿಸ್ಕ್‌ಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯ ಇರುತ್ತದೆ. ಒಂದುವೇಳೆ ಏಳು ಬೀಳುಗಳಾದರೂ ಮತ್ತೆ ಸಾವರಿಸಿಕೊಳ್ಳಲು ಕಾಲಾವಕಾಶ ಇರುತ್ತದೆ. ಆದ್ದರಿಂದ ಈ ಹಂತದಲ್ಲಿ ಹೂಡಿಕೆಯ ದೊಡ್ಡ ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬಹುದು (ಮಾರುಕಟ್ಟೆಯಲ್ಲಿ ಏರುಪೇರುಗಳಿರುತ್ತವೆ ಎಂಬ ಕಾರಣಕ್ಕೆ ಈ ಹೂಡಿಕೆಯನ್ನು ‘ಅಸುರಕ್ಷಿತ’ ಎಂದು ಭಾವಿಸಲಾಗುತ್ತದೆ). ‘ವಯಸ್ಸಾಗುತ್ತಿದ್ದಂತೆ ಷೇರು ಪೇಟೆಯ ಹೂಡಿಕೆಯನ್ನು ಕಡಿಮೆ ಮಾಡಬೇಕು’ ಎಂಬ ಸಲಹೆಯನ್ನು ಹಲವರು ನೀಡುತ್ತಾರೆ. ನಿಜವಾಗಿಯೂ ಇದು ಎಲ್ಲಾ ಕಾಲದಲ್ಲೂ ಅನುಸರಿಸಬಹುದಾದ ಸಲಹೆಯೇ? ಹಾಗೆ ಆಗಬೇಕಾಗಿಲ್ಲ. ಯಾಕೆ ಎಂದು ವಿವರಿಸುವ ಮೊದಲು ‘ಅಪಾಯ ತಾಳಿಕೆಯ ಸಾಮರ್ಥ್ಯ’ ಎಂಬುದರ ನಿಜವಾದ ಅರ್ಥವನ್ನು ಕಂಡುಕೊಳ್ಳಬೇಕು.

ಇದನ್ನು ಅಪಾಯ ತಾಳಿಕೆಯ ಸಾಮರ್ಥ್ಯ ಮತ್ತು ಅಪಾಯದ ಬಗ್ಗೆ ನಿಮ್ಮ ನಿಲುವು (ನಷ್ಟವಾದಾಗ ನಿಮ್ಮ ವರ್ತನೆ) ಎಂದು ಎರಡು ಭಾಗಗಳಾಗಿ ಅರ್ಥೈಸಬೇಕು. ಷೇರು ಮಾರುಕಟ್ಟೆಯ ಏರುಪೇರಿನಿಂದ ನಿಮಗೆ ಕಳವಳವಾಗುತ್ತದೆ ಎಂದಾದರೆ ಅಥವಾ ಮಾರುಕಟ್ಟೆ ಕುಸಿತದಿಂದ ನಿಮ್ಮ  ಹೂಡಿಕೆಯ ಮೌಲ್ಯ ಕಡಿಮೆಯಾದಾಗ ನಿಮ್ಮಲ್ಲಿ ಆತಂಕ ಉಂಟಾಗುತ್ತದೆ ಎಂದರೆ ಅದು ಅಪಾಯದ ಬಗೆಗಿನ ನಿಮ್ಮ ವರ್ತನೆ ಅಥವಾ ನಿಲುವನ್ನು ತೋರಿಸುತ್ತದೆ. ಇದಕ್ಕೂ ನಿಮ್ಮ ಅಪಾಯ ತಾಳಿಕೆಯ ಸಾಮರ್ಥ್ಯಕ್ಕೂ ಸಂಬಂಧವಿರಬೇಕೆಂದಿಲ್ಲ. ನಿಮ್ಮ ಆರ್ಥಿಕ ಸಾಮರ್ಥ್ಯ ಎಷ್ಟು ಎನ್ನುವುದರ ಮೇಲೆ ಅಪಾಯ ತಾಳಿಕೆಯ ಸಾಮರ್ಥ್ಯ ಅವಲಂಬಿಸಿರುತ್ತದೆ.

ADVERTISEMENT

32 ವರ್ಷ ವಯಸ್ಸಿನ ಐ.ಟಿ ಉದ್ಯೋಗಸ್ಥರೊಬ್ಬರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಐ.ಟಿ ಕ್ಷೇತ್ರ ಉತ್ತುಂಗದಲ್ಲಿದ್ದಾಗ ವೃತ್ತಿಯನ್ನು ಆರಂಭಿಸಿದ ಈ ಯುವಕ, ಈಗ ಒಳ್ಳೆಯ ವೇತನ ಪಡೆಯುತ್ತಿದ್ದು, ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣವೂ ಇದೆ ಎಂದುಕೊಳ್ಳಬಹುದು. ಆದರೆ, ಆತನ ಪಾಲಕರಿಗೆ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನ ಇಲ್ಲದೆ, ‘ಅದೊಂದು ಜೂಜು’ ಎಂಬ ಭಾವನೆ ಇದ್ದರೆ, ಯುವಕನೂ ಅದೇ ಭಾವನೆಯನ್ನು ಮೂಡಿಸಿಕೊಂಡು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬದಲು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಸಾಧ್ಯತೆ ಹೆಚ್ಚು. ಇಂಥ ವ್ಯಕ್ತಿಗಳನ್ನು ಸಾಂಪ್ರದಾಯಿಕ ಮನಸ್ಥಿತಿಯ ಅಥವಾ ಅಪಾಯ ಭೀತಿ ಎದುರಿಸುತ್ತಿರುವವರು ಎಂದು ಪರಿಗಣಿಸಲಾಗುತ್ತದೆ. ಅಂದರೆ, ಇಂಥವರು ಯಾವತ್ತೂ ರಿಸ್ಕ್‌ ತೆಗೆದುಕೊಳ್ಳುವುದೇ ಇಲ್ಲ ಎಂದು ಅರ್ಥವೇ?

ಹಣಕಾಸಿನ ನಿರ್ವಹಣೆಯ ದೃಷ್ಟಿಯಿಂದಲೇ ಹೇಳಬೇಕಾದರೆ, ಇಂಥವರು ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಂಡರೆ ತಮ್ಮ ಸಂಪತ್ತನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು. ಇವರ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣ ಇರುವುದರಿಂದ ಷೇರು ಮಾರುಕಟ್ಟೆಯ ಸಣ್ಣ–ಪುಟ್ಟ ಏರಿಳಿತಗಳು ಇವರ ಮೇಲೆ ಹೆಚ್ಚಿನ ಪರಿಣಾಮ ಬೀರಲಾರವು. ಅಂದರೆ ಈ ವ್ಯಕ್ತಿ ‘ಹೆಚ್ಚು ಅಪಾಯ ತಾಳಿಕೆಯ ಸಾಮರ್ಥ್ಯ’ ಹೊಂದಿದ್ದಾರೆ ಎಂದು ಅರ್ಥ.

ಈಗ ವಯಸ್ಸು ಹಾಗೂ ಅಪಾಯ ತಾಳಿಕೆ ಸಾಮರ್ಥ್ಯಗಳಿಗೆ ಇರುವ ಸಂಬಂಧದ ಕಡೆಗೆ ಗಮನ ಹರಿಸೋಣ. ವಯಸ್ಸಾದಂತೆಯೇ ಆರ್ಥಿಕ ನಷ್ಟದ ಬಗೆಗಿನ ನಿಮ್ಮ ಧೋರಣೆಯೂ ಬದಲಾಗಲೇಬೇಕು ಎಂದೇನೂ ಇಲ್ಲ. ಇಲ್ಲಿ ವಯಸ್ಸಿಗಿಂತ ಹೆಚ್ಚಾಗಿ, ಅಪಾಯಕಾರಿ ಹೂಡಿಕೆ ಉತ್ಪನ್ನಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ನೀವು ಅವುಗಳನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದೀರಿ ಎಂಬುದು ಮುಖ್ಯ.

ವಯಸ್ಸಾದಂತೆ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಲು ಕಾರಣವೆಂದರೆ, ನಿಮ್ಮ ಗುರಿ ತಲುಪಲು ಇರುವ ಅವಧಿ ಕಡಿಮೆಯಾಗುತ್ತ ಹೋಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ನಿಮ್ಮ ಮಗಳ ಶಿಕ್ಷಣಕ್ಕಾಗಿ ಇಂತಿಷ್ಟು ಹಣವನ್ನು ಉಳಿತಾಯ ಮಾಡಲೇಬೇಕು ಎಂಬ ಗುರಿ ನಿಮಗಿದೆ ಎಂದಿಟ್ಟುಕೊಳ್ಳಿ. ನಿಮಗಿಂತ ಸಣ್ಣ ವಯಸ್ಸಿನ ವ್ಯಕ್ತಿಗೆ ಅಷ್ಟೇ ಹಣ ಉಳಿತಾಯ ಮಾಡಲು 10ವರ್ಷಗಳ ಅವಧಿ ಇದ್ದರೆ, ನಿಮ್ಮ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ ಎಂದರ್ಥ. ನಿಗದಿತ ಮೊತ್ತವನ್ನು ಉಳಿತಾಯ ಮಾಡಲು ಅವಧಿ ಕಡಿಮೆ ಇದ್ದಾಗ, ಪ್ರತಿ ತಿಂಗಳೂ ಹೆಚ್ಚು ಹೆಚ್ಚು ಹಣವನ್ನು ಉಳಿತಾಯ ಮಾಡಬೇಕಾದ ಒತ್ತಡ ಇರುತ್ತದೆ. ಇಂಥ ಸಂದರ್ಭದಲ್ಲಿ ನಷ್ಟ ಉಂಟಾದರೆ ಗುರಿ ತಲುಪುವುದು ಅಸಾಧ್ಯವಾಗುತ್ತದೆ. ಅಷ್ಟೇ ಹಣ ಉಳಿತಾಯಕ್ಕೆ ಹೆಚ್ಚು ಕಾಲಾವಧಿ ಇರುವ ವ್ಯಕ್ತಿ ಪ್ರತಿ ತಿಂಗಳೂ ಕಡಿಮೆ ಉಳಿತಾಯ ಮಾಡುತ್ತ, ಉಳಿದ ಹಣವನ್ನು ಬೇರೆ ಬೇರೆ ಕಡೆಗಳಲ್ಲಿ ತೊಡಗಿಸಿ ತನ್ನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು. ಅಂದರೆ ಏರುಪೇರುಗಳನ್ನು ಸಹಿಸಿಕೊಳ್ಳುವ ಶಕ್ತಿ ಈತನಲ್ಲಿ ಹೆಚ್ಚಿರುತ್ತದೆ.

ಕೆಲವೊಮ್ಮೆ ನಿಮ್ಮ ಗುರಿಯ ಆಧಾರದಲ್ಲೂ ರಿಸ್ಕ್‌ ತೆಗೆದುಕೊಳ್ಳುವ ಶಕ್ತಿಯ ನಿರ್ಧಾರವಾಗುತ್ತದೆ. ಒಂದು ವೇಳೆ ನೀವು ಮಕ್ಕಳ ಶಾಲಾ ಶುಲ್ಕ ಪಾವತಿಗಾಗಿ ಉಳಿತಾಯ ಮಾಡಬೇಕು ಎಂದಾದರೆ ಆ ಗುರಿಯನ್ನು ಮುಂದೂಡುವುದು ಅಸಾಧ್ಯ. ಅದೇ, ಐ–ಫೋನ್‌ ಖರೀದಿಗಾಗಿ ಉಳಿತಾಯ ಮಾಡುತ್ತೀರಿ ಎಂದಿಟ್ಟುಕೊಳ್ಳಿ, ಅಂಥ ಸಂದರ್ಭದಲ್ಲಿ ಈ ಉದ್ದೇಶವನ್ನು ಮುಂದೂಡಲೂ ಅವಕಾಶ ಇರುತ್ತದೆ. ಅಂದರೆ ಪರೋಕ್ಷವಾಗಿ ರಿಸ್ಕ್‌ ತೆಗೆದುಕೊಳ್ಳಬಹುದಾದ ಶಕ್ತಿ ಸ್ವಲ್ಪ ಹೆಚ್ಚಾಗುತ್ತದೆ.

ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಮಾಡಿರುವ ಹೂಡಿಕೆಗಳ ಬೆಂಬಲ ಇದ್ದರೆ ವಯಸ್ಸಾದರೂ ಅಪಾಯ ಎದುರಿಸುವ ಸಾಮರ್ಥ್ಯ ಇರುತ್ತದೆ. ಉದಾಹರಣೆಗೆ 40ವರ್ಷ ವಯಸ್ಸಿನೊಳಗೆಯೇ ನೀವು ಸಾಕಷ್ಟು ಷೇರುಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂದಾದರೆ ಆ ವಯಸ್ಸಿನಲ್ಲೂ ಷೇರ ಮಾರುಕಟ್ಟೆಯಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಹಿಂಜರಿಕೆ ಉಂಟಾಗುವುದಿಲ್ಲ. ಆದರೆ, ಆರಂಭದಿಂದಲೇ ನಿಮ್ಮ ಹೂಡಿಕೆಯ ಲಾಭಾಂಶವನ್ನು ಬಳಸುತ್ತಲೇ ಇದ್ದರೆ ವಯಸ್ಸಾದಾಗ ಆರ್ಥಿಕ ಸಮಸ್ಯೆ ಎದುರಾಗಿ, ಮಾರುಕಟ್ಟೆಯಲ್ಲಿ ಹೂಡಿಕೆಗೆ ಹಿಂಜರಿಕೆ ಉಂಟಾಗಬಹುದು. ಯಾಕೆಂದರೆ ನಿಮ್ಮ ಮೂಲ ಬಂಡವಾಳಕ್ಕೆ ಕುತ್ತು ಬಂದರೆ ನಿಯಮಿತ ಆದಾಯವೂ ಇಲ್ಲದಾಗುವ ಅಪಾಯ ಇದೆ.

ನಿಮ್ಮ ಆರ್ಥಿಕ ಗುರಿಗಳೇನು ಮತ್ತು ಅದನ್ನು ಸಾಧಿಸಲು ಇರುವ ಸಮಯ ಎಷ್ಟು ಎಂಬುದನ್ನು ಹೂಡಿಕೆಗೂ ಮೊದಲು ನಿರ್ಧರಿಸಬೇಕು. ಹೂಡಿಕೆ ಮಾಡುವಾಗ ವಯಸ್ಸಿನ ವಿಚಾರ ಬರುವುದು ಇಂಥ ಸಂದರ್ಭಗಳಲ್ಲಿ ಮಾತ್ರ. ಗುರಿ ಮತ್ತು ಅವಧಿಯನ್ನು ನಿರ್ಧರಿಸಿ ಹೂಡಿಕೆಗೆ ಮುಂದಾದಾಗ ಅಲ್ಪಾವಧಿಯ ಹೂಡಿಕೆಗೆ ಯಾಕೆ ಷೇರು ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂಬುದು ಸ್ಪಷ್ಟವಾಗುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಷೇರು ಪೇಟೆಯಲ್ಲಿ ಯಾವ ಅವಧಿಯ ಹೂಡಿಕೆಯು ಹೂಡಿಕೆದಾರರಿಗೆ ಎಷ್ಟು ಪ್ರಮಾಣದಲ್ಲಿ ನಷ್ಟ ಉಂಟುಮಾಡಿರುವ ಅನುಪಾತದ ಪ್ರಮಾಣವನ್ನು ಪಕ್ಕದಲ್ಲಿರುವ ಅಂಕಿ ಅಂಶಗಳ ಪಟ್ಟಿ ನೀಡುತ್ತದೆ. ಎಲ್ಲ ವಿಭಾಗಗಳಲ್ಲೂ ಹೂಡಿಕೆಯ ಅವಧಿ ದೀರ್ಘವಾಗುತ್ತ ಹೋದಂತೆ ನಷ್ಟದ ಪ್ರಮಾಣ ಕಡಿಮೆ ಆಗುವುದನ್ನು ಈ ಪಟ್ಟಿಯಲ್ಲಿ ನೋಡಬಹುದಾಗಿದೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ 7ವರ್ಷಕ್ಕೂ ಹೆಚ್ಚು ಕಾಲದ ಯಾವ ಹೂಡಿಕೆಯಲ್ಲೂ ಹೂಡಿಕೆದಾರರಿಗೆ ನಷ್ಟವಾಗಿಲ್ಲ. ಸಿಪ್‌ (SIP) ಮಾದರಿಯ ಹೂಡಿಕೆ ಮಾಡಿದವರಲ್ಲಿ ಈ ನಷ್ಟದ ಪ್ರಮಾಣ ಇನ್ನೂ ಕಡಿಮೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನಿಮ್ಮ ವಯಸ್ಸು ಎಷ್ಟರ ಮಟ್ಟಿಗೆ ಮುಖ್ಯ ಎಂಬುದನ್ನು ಈಗ ನೀವೇ ನಿರ್ಧರಿಸಬಹುದಾಗಿದೆ. ನಿಜ ಏನೆಂದರೆ, ಈ ಪ್ರಶ್ನೆಗೆ ಎಲ್ಲರಿಗೂ ಅನ್ವಯವಾಗುವ ಒಂದೇ ಉತ್ತರ ಇಲ್ಲ. ವಯಸ್ಸಾಗುತ್ತ ಷೇರು ಮಾರುಕಟ್ಟೆಯ ಹೂಡಿಕೆ ಕಡಿಮೆ ಮಾಡಬೇಕು ಎನ್ನುವುದರ ಬದಲು, ಗುರಿ ತಲುಪಲು ನಿಮಗೆ ಇರುವ ಕಾಲಾವಕಾಶ ಎಷ್ಟು ಎಂಬುದರ ಮೇಲೆ ಹೂಡಿಕೆಯ ನಿರ್ಧಾರ ಮಾಡಬೇಕು ಎಂಬುದು ಹೆಚ್ಚು ಸರಿ.

ನಿಮ್ಮ ಹೂಡಿಕೆಗಳ ಸ್ಥಿತಿ ಹೇಗಿದೆ ಎಂಬುದನ್ನು ಪ್ರತಿ ವರ್ಷ ವಿಮರ್ಶಿಸಬೇಕು. ಒಂದು ವೇಳೆ ನಿಮ್ಮಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಶಕ್ತಿ ಹಿಂದಿನ ವರ್ಷಕ್ಕಿಂತಲೂ ಈಗ ಹೆಚ್ಚಾಗಿದ್ದರೆ ಅಥವಾ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಿದ್ದರೆ ಖಂಡಿತವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಹೀಗೆ ಮಾಡಿದರೆ ನಿಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ.

(ಪ್ರಿನ್ಸಿಪಲ್‌ ರಿಸರ್ಚ್‌ ಅನಲಿಸ್ಟ್‌, ಫಂಡ್ಸ್‌ ಇಂಡಿಯಾಡಾಟ್‌ಕಾಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.