ADVERTISEMENT

ಈಗ ಸ್ಮಾರ್ಟ್‌ಹೋಂ ಸಮಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಈಗ ಸ್ಮಾರ್ಟ್‌ಹೋಂ ಸಮಯ
ಈಗ ಸ್ಮಾರ್ಟ್‌ಹೋಂ ಸಮಯ   

ಹಾಗೆ ಸುಮ್ಮನೆ ಊಹಿಸಿಕೊಳ್ಳಿ. ನೀವು ಮನೆಯಿಂದ ಹೊರಬಂದ ಕೂಡಲೇ ಸ್ವಯಂಚಾಲಿತವಾಗಿ ನಿಮ್ಮ ಮನೆಯ ಬಾಗಿಲಿಗೆ ಬೀಗ ಬೀಳುತ್ತದೆ. ಅಷ್ಟೇ ಅಲ್ಲ, ಮನೆಯ ಒಳಗೆ ಹವಾನಿಯಂತ್ರಣ ವ್ಯವಸ್ಥೆ ಚಾಲನೆಯಲ್ಲಿದ್ದರೆ, ವಿದ್ಯುತ್‌ ದ್ವೀಪಗಳು ಉರಿಯುತ್ತಿದ್ದರೆ ತನ್ನಿಂದ ತಾನೇ ಸ್ಥಗಿತಗೊಳ್ಳುತ್ತವೆ. ನೀವು ಮನೆಯಿಂದ ಹೊರಗೆ ಹೋದ ನಂತರ, ಮನೆಯೊಳಗೆ ಯಾವುದೇ ಚಲನವಲನ ಕಂಡುಬಂದರೆ ತಕ್ಷಣ ಇದನ್ನು ಗುರುತಿಸುವ ಸೆನ್ಸರ್‌, ನಿಮ್ಮ ಮೊಬೈಲ್‌ಗೆ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.

ಮನೆಯ ಆವರಣ, ಹಿಂಬಾಗಿಲು ಅಥವಾ ಮುಖ್ಯದ್ವಾರದ ಬಳಿ ಕೆಲಸದಾಳು ಅಥವಾ ಯಾರೇ ಸುಳಿದಾಡಿದರೂ, ತಕ್ಷಣ ಮಾಲೀಕನ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಇಷ್ಟೇ ಅಲ್ಲ, ವಾಪಸ್‌ ಮರಳಿ ನೀವು ಮನೆಗೆ ಬಂದು, ಬಾಗಿಲ ಬಳಿ ನಿಲ್ಲುತ್ತಿದ್ದಂತೆ, ಅಲ್ಲಿರುವ ಕ್ಯಾಮೆರಾ ನಿಮ್ಮ ಮುಖ ಗುರುತಿಸಿ, ಬಾಗಿಲು ಸ್ವಯಂಚಾಲಿತವಾಗಿ ತೆರೆಯುವಂತೆ ಮಾಡುತ್ತದೆ. ಮನೆಯೊಳಗಿನ ದೀಪಗಳು ಚಾಲನೆಗೊಳ್ಳುತ್ತವೆ. ಉಷ್ಣಾಂಶ ಹೆಚ್ಚಿದ್ದರೆ, ಫ್ಯಾನಿನ ರೆಕ್ಕೆಗಳು ತಿರುಗಲು ಪ್ರಾರಂಭಿಸುತ್ತವೆ. ಹವಾನಿಯಂತ್ರಣ ವ್ಯವಸ್ಥೆಯೂ ಚಾಲನೆಗೊಳ್ಳುತ್ತದೆ.

ಇದು ಅತ್ಯಾಧುನಿಕ ಸ್ಮಾರ್ಟ್‌ಹೋಂ ಪರಿಕಲ್ಪನೆ. ಈ ಶತಮಾನದ ಬಹು ಬೇಡಿಕೆಯ ತಂತ್ರಜ್ಞಾನ. ಈಗ ಪ್ರಮುಖವಾಗಿ ಚರ್ಚೆಯಾಗುತ್ತಿರುವ ತಂತ್ರಜ್ಞಾನ  ಇದಾಗಿದೆ. ಸಾಮಾನ್ಯ ಮನೆಯನ್ನು ಡಿಜಿಟಲ್‌ ಗೃಹವನ್ನಾಗಿ ಹೇಗೆ ಪರಿವರ್ತಿಸಬಹುದು ಮತ್ತು ಈ ಮನೆಯನ್ನು ನಾವು ಬಳಸುವ ಗ್ಯಾಜೆಟ್‌ಗಳ ಜತೆಗೆ ಸಂಪರ್ಕ ಸಾಧಿಸಿ, ಮಾಲೀಕ ತಾನಿರುವ ಸ್ಥಳದಿಂದಲೇ ಹೇಗೆ ನಿರ್ವಹಣೆ ಮಾಡಬಹುದು ಎನ್ನುವುದು ಇದರ ಹೆಚ್ಚುಗಾರಿಕೆಯಾಗಿದೆ.

ADVERTISEMENT

ಮೊದಲೆಲ್ಲಾ ಎಲೆಕ್ಟ್ರಾನಿಕ್ಸ್‌ ಮೇಳಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಅಥವಾ ಅತ್ಯಾಧುನಿಕ ಗ್ಯಾಜೆಟ್‌ಗಳ ಪ್ರದರ್ಶನ ನಡೆಯುತ್ತಿತ್ತು. ಆದರೆ, ಕಳೆದ ಎರಡು ವರ್ಷದಲ್ಲಿ ಇದು ಸಂಪೂರ್ಣವಾಗಿ ಬದಲಾಗಿದೆ. ಈಗೇನಿದ್ದರೂ ಆರ್ಟಿಫಿಷಲ್‌ ಇಂಟಲಿಜೆನ್ಸ್‌ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ್ದೇ ಮಾತು.

ಸ್ಮಾರ್ಟ್‌ಹೋಂನ ಹಿಂದಿರುವ ರಿಯಲ್‌ ಸ್ಟಾರ್ ಅಥವಾ ನೈಜ ಹೀರೋ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ). ಜನರ ದಿನನಿತ್ಯದ ಬದುಕನ್ನು ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಸರಳಗೊಳಿಸುವ ವ್ಯವಸ್ಥೆ ಇದು. ಮನೆಯ ಮಾಲಿಕ ಬಾಗಿಲ ಎದುರು ಬಂದು ನಿಲ್ಲುತ್ತಿದ್ದಂತೆ, ಕ್ಯಾಮೆರಾ ಆತನನ್ನು ಗುರುತಿಸಿ, ತಕ್ಷಣ ಬಾಗಿಲು ತೆರೆ ಎಂಬ ಸಂದೇಶವನ್ನು ರವಾನಿಸುತ್ತದೆ. ಮಾಲೀಕ ಅಲ್ಲದಿದ್ದರೆ, ಬೇರೆ ಯಾರೋ ಬಂದಿದ್ದಾರೆ ಎಂಬ ಸಂದೇಶವನ್ನು ಮಾಲೀಕನ ಮೊಬೈಲ್‌ಗೆ ಕ್ಷಿಪ್ರ ಗತಿಯಲ್ಲಿ ರವಾನಿಸುವ ಚತುರ ತಂತ್ರಜ್ಞಾನ ಇದು.

‘ಸ್ಮಾರ್ಟ್‌ಹೋಂ ಪರಿಕಲ್ಪನೆಯಲ್ಲಿ ಹಾರ್ಡ್‌ವೇರ್‌ ಪಾತ್ರ ಕಡಿಮೆ. ಡಿವೈಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಅಥವಾ ಯಾವ ತಂತ್ರಜ್ಞಾನ ಬಳಸಲಾಗಿದೆ ಎನ್ನುವುದು ಇಲ್ಲಿ ಮುಖ್ಯ’ಎನ್ನುತ್ತಾರೆ ತಂತ್ರಜ್ಞಾನ ವಿಶ್ಲೇಷಕಿ ಕ್ಯಾರೊಲಿನಾ ಮಿಲೆನ್ಸಿ.

ಗೂಗಲ್‌, ಫೇಸ್‌ಬುಕ್‌ ಮತ್ತು ಅಮೆಜಾನ್‌ನಂತಹ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಗಳು ಕ್ಲೌಡ್‌ ಕಂಪ್ಯೂಟಿಂಗ್‌ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಉಪಕರಣಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸ್ಪರ್ಧೆಯಲ್ಲಿ ಇವೆ.

ಹೈಡೆಫಿನಿಷನ್‌ (ಎಚ್‌ಡಿ) ಗುಣಮಟ್ಟದ, ವಿಲಾಸಿ ಡಿಜಿಟಲ್‌ ಟಿವಿಗಳು, ಸ್ಮಾರ್ಟ್‌ ಹೋಂ ಪರಿಕರಕಗಳು, ಮತ್ತು ಡ್ರೋನ್‌ ಕೂಡ ಈಗ  ಹೆಚ್ಚು ಬೇಡಿಕೆ ಇರುವ ಸರಕುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಬಳಕೆದಾರನ ಧ್ವನಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಗೃಹೋಪಕರಣಗಳು, ವಿದ್ಯುತ್‌ ದೀಪಗಳು, ಕಾರಿನ ಮ್ಯೂಸಿಕ್‌ ಸಿಸ್ಟಂ, ರೊಬೊವ್ಯಾಕ್ಯೂಂ, ಕಾಫಿ ಮೇಕರ್‌ಗಳು ಮಾರುಕಟ್ಟೆ ಬರುತ್ತಿವೆ.

ಇವನ್ನೆಲ್ಲ ಕಾರ್ಯಗತಗೊಳಿಸಲು ಸಾವಿರಾರು ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳು, ಕಳೆದ ಸೆಪ್ಟೆಂಬರ್‌ನಲ್ಲಿ ಗೂಗಲ್‌ನ ಮಾರುಕಟ್ಟೆ ಪರಿಚಯಿಸಿದ, ಮನೆಯಲ್ಲಿ ಬಳಸಬಹುದಾದ ಸ್ಮಾರ್ಟ್‌ ಸ್ಪೀಕರ್‌ ಸೇರಿದಂತೆ ಹಲವು ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಅಮೆಜಾನ್‌ ಕೂಡ, ಬಳಕೆದಾರನ ಧ್ವನಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬಲ್ಲ ‘ಎಕೊ’ ಎಂಬ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಆ್ಯಪಲ್‌ ಕಂಪನಿಯು  ‘ಸಿರಿ’ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ‘ಹೋಂಪಾಡ್‌’ ಎಂಬ ಸ್ಪೀಕರ್‌ ಬಿಡುಗಡೆ ಮಾಡಲಿದೆ. ಸ್ಯಾಮ್ಸಂಗ್‌ ಕಂಪನಿಯ ಬಹು ನಿರೀಕ್ಷಿತ, ಡಿಜಿಟಲ್‌ ಮಾರ್ಗದರ್ಶಕ ‘ಬಿಕ್ಸ್‌ಬಿ’ನ ಸುಧಾರಿತ ಆವೃತ್ತಿ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

(ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.