ADVERTISEMENT

ಬರಲಿವೆ ಅದ್ಭುತ ತಂತ್ರಜ್ಞಾನಗಳು

ಪೃಥ್ವಿರಾಜ್ ಎಂ ಎಚ್
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಬರಲಿವೆ ಅದ್ಭುತ ತಂತ್ರಜ್ಞಾನಗಳು
ಬರಲಿವೆ ಅದ್ಭುತ ತಂತ್ರಜ್ಞಾನಗಳು   

ಕೃತಕ ಸಹಜವಾಗಲಿದೆ

ಅಪಘಾತಗಳಲ್ಲಿ ಅಂಗಾಂಗಗಳನ್ನು ಕಳೆದುಕೊಂಡರೆ, ಕೃತಕ ಅಂಗಾಂಗಗಳೇ ಆಸರೆ. ಆದರೆ ಇವು ಸಹಜ ಅಂಗಾಂಗಗಳಂತೆ ಕೆಲಸ ಮಾಡುವುದಿಲ್ಲ. ಹೀಗಾಗಿ ಸಹಜ ಅಂಗಾಂಗಗಳಂತೆ ಕೃತಕ ಅಂಗಾಂಗಗಳೂ ಕೆಲಸ ಮಾಡಲು ನೆರವಾಗುವ ತಂತ್ರಜ್ಞಾನವನ್ನು ಬ್ರಿಟನ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರ ಹೆಸರು ಹಾಪ್ಟಿಕ್ ಪ್ರೊಸ್ಥಟಿಕ್

ಸ್ಮಾರ್ಟ್‌ ಕೈ ತಯಾರಿಸಿ, ಕೈ ಕಳೆದುಕೊಂಡ ವ್ಯಕ್ತಿಗೆ ಜೋಡಿಸಿ, ಅದರ ಕಾರ್ಯವಿಧಾನವನ್ನು ಪರಿಶೀಲಿಸಿದ್ದಾರೆ. ಇದು ಕೃತಕ ಅಂಗಾಂಗದಂತೆ ಅಲ್ಲದೆ, ದೇಹದ ನಾಡಿ ವ್ಯವಸ್ಥೆಯೊಂದಿಗೆ ಜೋಡಣೆಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಅಗತ್ಯವಾದ ಎಲಕ್ಟ್ರೊಕೋಡ್‌ ವ್ಯವಸ್ಥೆಯನ್ನು ಮುಂಗೈನ ಒಳಗೆ 20 ಕಡೆ ಮೂರು ನರಗಳೊಂದಿಗೆ ಜೋಡಿಸಿ ಸಹಜವಾಗಿ ಕೆಲಸ ಮಾಡುವಂತೆ ಮಾಡುತ್ತಾರೆ.

ADVERTISEMENT

ಇದು, ವಿಶೇಷ ಸೆನ್ಸರ್‌ಗಳ ಮೂಲಕ ಸ್ಪರ್ಶವನ್ನು ಗ್ರಹಿಸುತ್ತ ಸಹಜವಾಗಿ ಕೆಲಸ ಮಾಡುವುದನ್ನು ಅವರು ಗಮನಿಸಿದ್ದಾರೆ. ಇದರ ಕಾರ್ಯವೈಖರಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಕೋಮಲವಾದ ಗುಲಾಬಿ ಎಲೆಗಳನ್ನು ನಾಜುಕಾಗಿ ಸ್ಪರ್ಶಿಸುತ್ತದೆ. ಅಂಗಾಂಗಗಳ ದೋಷ ಮತ್ತು ಅಂಗಾಂಗಗಳನ್ನು ಕಳೆದುಕೊಂಡವರ ಬಾಳಿನಲ್ಲಿ ಇದು ಹೊಸ ಬೆಳಕು ಮೂಡಿಸಲಿದೆ.

ಮನುಷ್ಯನಿಗೆ ರೆಕ್ಕೆ ಬಂದರೆ?

ಸಂಚಾರಕ್ಕೆ ಬೈಕ್‌, ಕಾರ್ ವಾಹನ ಅವಲಂಬಿಸುವ ಅಗತ್ಯ ದೂರವಾಗಲಿದೆ. ಹೈಡ್ರೊಜನ್ ಪೆರಾಕ್ಸೈಡ್‌ ತುಂಬಿದ ಎರಡು ಸಿಲಿಂಡರ್‌ಗಳನ್ನು ಹೊಂದಿರುವ ಬ್ಯಾಕ್‌ಪಾಕ್‌ ಅನ್ನು ಬೆನ್ನಿಗೆ ಕಟ್ಟಿಕೊಂಡರೆ ಸಾಕು, ರೆಕ್ಕೆ ಬಂದ ಹಕ್ಕಿಯಂತೆ ಗಾಳಿಯಲ್ಲಿ ಹಾರಿಡಿಕೊಂಡು ಹೋಗಬಹುದು. ಅದು ಕೂಡ ಗಂಟೆಗೆ 123 ಕಿ.ಮೀ ವೇಗದಲ್ಲಿ!

ಅಮೆರಿಕದ ಸಂಸ್ಥೆಯೊಂದು ತಯಾರಿಸಿರುವ ‘ಜೆಟ್‌ಪ್ಯಾಕ್ ಎಚ್‌ 202’ ಎಂಬ ಪರಿಕರರವನ್ನು ಬಳಸಿದರೆ ಇದು ಸಾಧ್ಯವಾಗಲಿದೆ. ಇದು ಸುಮಾರು 80 ಕೆ.ಜಿ ತೂಕವಿರುವ ವ್ಯಕ್ತಿಯನ್ನು ಹೊತ್ತು 250 ಅಡಿ ಎತ್ತರದಲ್ಲಿ ಹಾರುತ್ತದೆ. ಇದರ ಪ್ರಯೋಗಗಳು ಮುಗಿದಿವೆ. ಪ್ರಯೋಜನ ಪಡೆಯುವ ಕಾಲ ಸದ್ಯದಲ್ಲೇ ಬರಲಿದೆ.

ನೆಲ ಸ್ಪರ್ಶಿಸದ ಬೈಕ್!

ತುರ್ತಾಗಿ ಎಲ್ಲಿಗೋ ಹೋಗಬೇಕು. ಆದರೆ ಬೆಂಗಳೂರು, ಮುಂಬೈ, ದೆಹಲಿಯಂತಹ ಸಂಚಾರ ದಟ್ಟಣೆ ಸಮಸ್ಯೆ ಇರುವ ಮಹಾನಗರಗಳಲ್ಲಿ ಇದು ಅಸಾಧ್ಯ. ಸಂಚಾರ ದಟ್ಟಣೆಯಲ್ಲಿ ಸಿಲುಕಿರುವ ಹಲವರು ಸಾಮಾನ್ಯವಾಗಿ ಯೋಚಿಸುವುದು ಏನೆಂದರೆ.  ‘ನನ್ನ ಬೈಕ್‌ ಗಾಳಿಯಲ್ಲಿ ತೇಲಾಡುವಂತಿದ್ದರೆ ಎಲ್ಲ ಕಾರು, ಬಸ್‌ಗಳ ಮೇಲೆ ಹಾರಿಸಿಕೊಂಡು ಹೋಗಬಹುದಿತ್ತು’ ಎಂದು. ಈ ಯೋಚನೆ ಸಾಕಾರವಾಗುವ ಕಾಲ ಸನಿಹದಲ್ಲೇ ಇದೆ!

ಎರ್‌–ಎಕ್ಸ್‌ನಿಂದ ಇದು ಸಾಧ್ಯವಾಗಲಿದೆ. ಇಬ್ಬರು ಪ್ರಯಾಣಿಸಬಹುದಾದ ನೆಕ್ಟ್ಸ್‌ ಜನರೇಷನ್ ‘ಹೋವರ್ ಬೈಕ್‌’ ಅನ್ನು ನೆಲದಿಂದ 12 ಅಡಿ ಎತ್ತರದಲ್ಲಿ ಓಡಿಸಬಹುದು. ಇದು ಗಂಟೆಗೆ 72 ಕಿ.ಮೀ ವೇಗದಲ್ಲಿ ಓಡುತ್ತದೆ. 140 ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯವಿದೆ.

ಸುಮಾರು 17 ವರ್ಷ ಶ್ರಮಿಸಿ ಈ ಬೈಕ್‌ ತಯಾರಿಸಲಾಗಿದೆ. ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ರನ್‌ ವೇ ಅಗತ್ಯವಿಲ್ಲದೆ, ಇದ್ದ ಸ್ಥಳದಿಂದಲೇ ಹಾರುವ ಸಾಮರ್ಥ್ಯ ಇದಕ್ಕಿರುವುದು ವಿಶೇಷ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರಕ್ಷಣೆಗೆ, ರಸ್ತೆ ಸಂಪರ್ಕವಿಲ್ಲದ ಪ್ರದೇಶಗಳಿಗೆ, ಸಮೀಕ್ಷೆ ನಡೆಸಲು ಈ ವಾಹನ ನೆರವಾಗಲಿದೆ.

ಇಡೀ ದೇಹಕ್ಕೆ ಉಕ್ಕು ಕವಚ

ದೃಢವಾದ, ಗುಣಮಟ್ಟದ ಬುಲೆಟ್‌ಫ್ರೂಫ್‌ ಜಾಕೆಟ್‌ಗಳು ಲಭ್ಯವಿಲ್ಲದೇ ಇರುವುದರಿಂದ ಪ್ರತಿ ವರ್ಷ ಹಲವಾರು ಸೈನಿಕರು, ಪೊಲೀಸರು ಸಾವನ್ನಪ್ಪುತ್ತಿದ್ದಾರೆ. ಅಪಾಯದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಉಕ್ಕಿನ ಮನುಷ್ಯರನ್ನಾಗಿ (ಐರನ್‌ ಮ್ಯಾನ್‌) ಮಾಡಿದರೆ ಯಾವ ಗುಂಡೂ ದೇಹದೊಳಗೆ ಪ್ರವೇಶಿಸುವುದಿಲ್ಲ.

ಈ ಆಲೋಚನೆಯಲ್ಲೀ ಹೊಳೆದದ್ದೇ ಐರನ್‌ ಮ್ಯಾನ್ ಸೂಟ್‌. ಕೆಲವು ವರ್ಷಗಳಿಂದ ಅಮೆರಿಕ ಸೇನೆ ಈ ಸೂಟ್ ತಯಾರಿಸಲು ಪ್ರಯೋಗಗಳನ್ನು ನಡೆಸುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇದು ಬಳಕೆಗೆ ಲಭ್ಯವಾಗಲಿದೆ. ಕಡಿಮೆ ತೂಕದಿಂದ ಕೂಡಿರುವ ಈ ಸೂಟ್ ಇಡಿ ದೇಹವನ್ನು ಮುಚ್ಚಿ ರಕ್ಷಣೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.