ADVERTISEMENT

ಜಿಎಸ್‌ಟಿ: ರೆಸ್ಟೊರಂಟ್ಸ್‌ ಮೇಲೆ ಸಕಾರಾತ್ಮಕ ಪರಿಣಾಮ

ಪಿಟಿಐ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಜಿಎಸ್‌ಟಿ: ರೆಸ್ಟೊರಂಟ್ಸ್‌ ಮೇಲೆ  ಸಕಾರಾತ್ಮಕ ಪರಿಣಾಮ
ಜಿಎಸ್‌ಟಿ: ರೆಸ್ಟೊರಂಟ್ಸ್‌ ಮೇಲೆ ಸಕಾರಾತ್ಮಕ ಪರಿಣಾಮ   

ಮುಂಬೈ : ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಬೆಂಗಳೂರು ಮತ್ತು ಮುಂಬೈ ಮಹಾನಗರಗಳಲ್ಲಿನ ರೆಸ್ಟೊರಂಟ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಎರಡೂ ಮಹಾನಗರಗಳಲ್ಲಿನ ಶೇ 70ಕ್ಕೂ ಹೆಚ್ಚಿನ ರೆಸ್ಟೊರಂಟ್‌ ಮಾಲೀಕರು ವಹಿವಾಟಿನ ಮೇಲೆ ಜಿಎಸ್‌ಟಿ ಬೀರಿದ ಪರಿಣಾಮದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೊಸ ತೆರಿಗೆ ವ್ಯವಸ್ಥೆಯು ಸಂಪೂರ್ಣವಾಗಿ ತಂತ್ರಜ್ಞಾನ ಬೆಂಬಲ ಹೊಂದಿರುವುದರಿಂದ ತೆರಿಗೆ ಪಾವತಿ ಸುಲಭಗೊಳಿಸಿದೆ ಎಂದು ಶೇ 68ರಷ್ಟು ಮಾಲೀಕರು ಹೇಳಿಕೊಂಡಿದ್ದಾರೆ. ತೆರಿಗೆ ಮತ್ತು ಸಲಹಾ ಸಂಸ್ಥೆ ಗ್ರ್ಯಾಂಟ್‌ ಥೋರ್ನ್‌ಟನ್ ಇಂಡಿಯಾ ಸಂಸ್ಥೆ ಈ ಸಮೀಕ್ಷೆ ನಡೆಸಿದೆ.

ಗರಿಷ್ಠ ಬಾಡಿಗೆ ದರ ಮತ್ತು ಅನುಭವಿ ಸಿಬ್ಬಂದಿ ಉಳಿಸಿಕೊಳ್ಳುವುದು ಉದ್ಯಮ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ನಿಯಂತ್ರಣ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಉದ್ದಿಮೆ ಎದುರಿಸುತ್ತಿರುವ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ.

ADVERTISEMENT

ನೋಟು ರದ್ದತಿಯೂ ಉದ್ದಿಮೆ ಮೇಲೆ ಕೆಲಮಟ್ಟಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಇದರ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಮುಂಬೈನಲ್ಲಿ ಇದು ಶೇ 60ರಷ್ಟು ಪರಿಣಾಮ ಬೀರಿದೆ. ನಮ್ಮಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಬೆಂಗಳೂರಿನ ಒಂದು ಮೂರಾಂಶದಷ್ಟು ಮಾಲೀಕರು ಹೇಳಿಕೊಂಡಿದ್ದಾರೆ.

ಬಿಲ್‌ ಪಾವತಿಗೆ ಈಗಲೂ ನಗದು ಪಾವತಿಯೇ ಗರಿಷ್ಠ ಮಟ್ಟದಲ್ಲಿ ಇದೆ. ಮೊಬೈಲ್‌ ವಾಲೆಟ್‌ ಮೂಲಕ ಪಾವತಿಯು ಕ್ರಮೇಣ ಜನಪ್ರಿಯಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.