ADVERTISEMENT

8000 ಅಂಶ ದಾಟಿದ ನಿಫ್ಟಿ

ಬಿಎಸ್‌ಇ ಸಂವೇದಿ ಸೂಚ್ಯಂಕದ್ದೂ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಮುಂಬೈ (ಪಿಟಿಐ): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಪ್ರಮುಖ ಸೂಚ್ಯಂಕ ‘ನಿಫ್ಟಿ’ ಇದೇ ಮೊದಲ ಬಾರಿಗೆ 8,000 ಅಂಶಗಳ ಗಡಿ ದಾಟಿ ಮುನ್ನಡೆದಿದೆ. ಆ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ನಿಫ್ಟಿ ಸೋಮವಾರದ ವಹಿವಾಟಿನಲ್ಲಿ 8,027.70 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 7,000 ಅಂಶಗಳಿಂದ 8,000 ಅಂಶಗಳ ಗಡಿ ದಾಟಲು ಮೇ 12ರಿಂದ 78 ವಹಿವಾಟು ಅವಧಿಗಳನ್ನು ತೆಗೆದು­ಕೊಂಡಿ­ರುವುದು ಗಮನಾರ್ಹ.

ಎನ್‌್ಎಸ್‌ಇಯಲ್ಲಿನ ಎಲ್ಲ ವಿಭಾಗದ ಷೇರುಗಳೂ ಸೋಮವಾರದ ವಹಿವಾಟಿ­ನಲ್ಲಿ ಭಾರಿ ಏರಿಕೆ ಕಂಡಿದ್ದು ಇನ್ನೊಂದು ವಿಶೇಷ.

ಬಿಎಸ್‌ಇಯಲ್ಲೂ ದಾಖಲೆ
ಇನ್ನೊಂದೆಡೆ ಮುಂಬೈ ಷೇರು ವಿನಿ­ಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ 229.44 ಅಂಶಗಳ ಏರಿಕೆ ಕಂಡು, 26,867.55 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿ ಹೊಸ ದಾಖಲೆ ಬರೆಯಿತು.

ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ (ಜಿಡಿಪಿ) ಜುಲೈನಲ್ಲಿ ಶೇ 5.7ಕ್ಕೇರಿರುವುದು ಹೂಡಿಕೆದಾರರಲ್ಲಿನ ವಿಶ್ವಾಸವನ್ನು ಹೆಚ್ಚಿಸಿತು. ವಾಹನ, ಲೋಹ ಮತ್ತು ಬ್ಯಾಂಕಿಂಗ್‌ ಷೇರುಗಳ ಖರೀದಿಗೆ ಹೂಡಿಕೆದಾರರು ಮುಗಿ­ಬಿದ್ದರು. ಇದು ಷೇರುಪೇಟೆಯಲ್ಲಿನ ವಹಿವಾಟಿಗೆ ಉತ್ತೇಜನ ತಂದಿತು.

ಈ ಮಧ್ಯೆ, ವಿದೇಶಿ ಹೂಡಿಕೆಯೂ ಹೆಚ್ಚುತ್ತಿದೆ. ದೇಶದ ಆರ್ಥಿಕತೆ ಕಠಿಣ ಪರಿಸ್ಥಿತಿಯಿಂದ ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳ­ಲಾಗುವುದು ಎಂಬ ಕೇಂದ್ರ ಸರ್ಕಾರ ಹೇಳಿರುವುದೂ ಷೇರುಪೇಟೆ­ಯಲ್ಲಿನ ಉತ್ಸಾಹ­ದಾಯಕ ಚಟುವಟಿ­ಕೆಗೆ ಕಾರಣ­ವಾಗಿದೆ. ದಿನದ ವಹಿವಾಟಿನಲ್ಲಿ ಹೀರೊ ಮೊಟೊ­ಕಾರ್ಪ್‌ ಶೇ 5.79ರಷ್ಟು ಹೆಚ್ಚಿನ ಗಳಿಕೆ ಕಂಡುಕೊಂಡಿ­ದೆ. ಮಾರುತಿ ಸುಜುಕಿ ಶೇ 4.71 ಗಳಿಕೆಯೊಂದಿಗೆ 2ನೇ ಸ್ಥಾನದ­ಲ್ಲಿದೆ.

ಲಾರ್ಸನ್‌ ಆ್ಯಂಡ್‌ ಟಬ್ರೋ, ಹಿಂಡಲ್ಕೊ, ಒಎನ್‌ಜಿಸಿ, ಜಿಎಐಎಲ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಸಿಪ್ಲಾ, ಕೋಲ್‌ ಇಂಡಿಯಾ, ಸೆಸಾ ಸ್ಟೆರಲೈಟ್‌, ಟಾಟಾ ಪವರ್‌, ಟಾಟಾ ಸ್ಟೀಲ್‌, ಇನ್ಫೊಸಿಸ್‌ ಮತ್ತು ಎನ್‌ಟಿಪಿಎಲ್‌ ಸರಾಸರಿ ಶೇ 1ರಂತೆ  ಶೇ 3.62ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.