ADVERTISEMENT

‘ಐಎಲ್‌ ಆ್ಯಂಡ್‌ ಎಫ್‌ಎಸ್‌’ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ

ಸಂಕಷ್ಟದಿಂದ ಪಾರುಮಾಡಲು ಹೊಸ ನಿರ್ದೇಶಕ ಮಂಡಳಿ

ಪಿಟಿಐ
Published 1 ಅಕ್ಟೋಬರ್ 2018, 17:28 IST
Last Updated 1 ಅಕ್ಟೋಬರ್ 2018, 17:28 IST
IL&FS
IL&FS   

ಮುಂಬೈ: ಸಾಲದ ಸುಳಿಗೆ ಸಿಲುಕಿರುವ ಇನ್‌ಫ್ರಾಸ್ಟಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್‌ಆ್ಯಂಡ್‌ಎಫ್‌ಎಸ್‌) ಅನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ರಾಷ್ಟ್ರೀಯ ಕಂಪನಿ ಕಾಯ್ದೆ ಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠವು, ಸಂಸ್ಥೆಯ ನಿರ್ದೇಶಕ ಮಂಡಳಿಯನ್ನು ಬದಲಿಸಲು ಸರ್ಕಾರಕ್ಕೆ ಅವಕಾಶ ನೀಡಿದೆ. 2009ರಲ್ಲಿ ಸತ್ಯಂ ಕಂಪ್ಯೂಟರ್‌ ಅನ್ನು ವಶಪಡಿಸಿಕೊಂಡ ನಂತರದ ಖಾಸಗಿ ಸಂಸ್ಥೆಯ ಸ್ವಾಧೀನ ಯತ್ನ ಇದಾಗಿದೆ.

ಮೂಲಸೌಕರ್ಯ ಯೋಜನೆಗಳಿಗೆ ದೀರ್ಘಾವಧಿಯ ಸಾಲ ಸೌಲಭ್ಯ ಒದಗಿಸುವ ಸಂಸ್ಥೆಯ ನಿರ್ದೇಶಕ ಮಂಡಳಿಯ ಬದಲಾವಣೆ ಮತ್ತು ಆಡಳಿತ ನಿಯಂತ್ರಣವನ್ನು ತನಗೆ ನೀಡಬೇಕೆಂಬ ಸರ್ಕಾರದ ಕೋರಿಕೆಯನ್ನು ಮಂಡಳಿಯು ಮಾನ್ಯ ಮಾಡಿದೆ.

ADVERTISEMENT

ಸಾಲ ಮರುಪಾವತಿ ಮಾಡದ ಬಿಕ್ಕಟ್ಟು ಎದುರಿಸುತ್ತಿರುವ ಸಂಸ್ಥೆಯಲ್ಲಿನ ಆಡಳಿತ ನಿರ್ವಹಣೆಯ ವೈಫಲ್ಯವು, ಹಾಲಿ ನಿರ್ದೇಶಕ ಮಂಡಳಿಯನ್ನು ರದ್ದು ಮಾಡುವುದಕ್ಕೆ ಸಮರ್ಥ ಕಾರಣವಾಗಿದೆ ಎಂದು ‘ಎನ್‌ಸಿಎಲ್‌ಟಿ’ ಹೇಳಿದೆ.

ಸಂಸ್ಥೆಯನ್ನು ಸಾಲದ ಸುಳಿಯಿಂದ ಮೇಲೆತ್ತಲು ನಿರ್ದೇಶಕ ಮಂಡಳಿ ಬದಲಿಸಲು ಅನುಮತಿ ನೀಡಬೇಕು ಎಂದು ಕಂಪನಿ ವ್ಯವಹಾರ ಸಚಿವಾಲಯ ಮನವಿ ಮಾಡಿಕೊಂಡಿತ್ತು.

ಹೊಸ ನಿರ್ದೇಶಕ ಮಂಡಳಿಯು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಸಂಸ್ಥೆಗೆ ಅಗತ್ಯ ಹಣಕಾಸು ನೆರವು ನೀಡಿ ಚೇತರಿಸಿಕೊಳ್ಳಲು ನೆರವು ನೀಡಲಾಗುವುದು ಎಂದು ಸರ್ಕಾರ ಪ್ರತಿಪಾದಿಸಿತ್ತು. ಸಂಸ್ಥೆಯ ಅಂಗಸಂಸ್ಥೆಗಳ ನಿರ್ದೇಶಕ ಮಂಡಳಿಗಳನ್ನೂ ಬದಲಿಸಲು ಅನುಮತಿ ನೀಡಬೇಕು ಎಂದೂ ಕೇಳಿಕೊಳ್ಳಲಾಗಿತ್ತು.

‘ಐಎಲ್‌ಆ್ಯಂಡ್‌ಎಫ್‌ಎಸ್‌’ ಮತ್ತು ಅಂಗಸಂಸ್ಥೆಗಳು ಸಾಲ ಮರುಪಾವತಿ ಮಾಡದ ಬಿಕ್ಕಟ್ಟಿಗೆ ಗುರಿಯಾಗಿವೆ. ಒಟ್ಟಾರೆ ಸಾಲದ ಹೊರೆಯು ₹ 91 ಸಾವಿರ ಕೋಟಿಗಿಂತ ಹೆಚ್ಚಿಗೆ ಇದೆ. ಬ್ಯಾಂಕ್‌ ಮತ್ತು ವಿಮೆ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿವೆ.

ಹೊಸ ನಿರ್ದೇಶಕರು: ಕೋಟಕ್‌ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಕ್‌, ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಜಿ. ಎನ್‌. ಬಾಜಪೈ, ಐಸಿಐಸಿಐ ಬ್ಯಾಂಕ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಜಿ. ಸಿ. ಚತುರ್ವೇದಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಮಾಲಿನಿ ಶಂಕರ್‌, ವಿನೀತ್‌ ನಯ್ಯರ್‌, ಲೆಕ್ಕಪತ್ರ ತಪಾಸಿಗ ನಂದಕಿಶೋರ್‌ ಅವರನ್ನು ಹೊಸ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.