ADVERTISEMENT

ಬ್ಯಾಂಕ್‌ ಸಾಲ ನೀಡಿಕೆ ಎಲ್ಲೆಡೆ ಏರಿಕೆ

ಎಂಎಸ್‌ಎಂಇ ವಲಯಕ್ಕೆ ನೀಡುವ ಸಾಲದ ಪ್ರಮಾಣ ಇಳಿಕೆ

ವಿಜಯ್ ಜೋಷಿ
Published 9 ಆಗಸ್ಟ್ 2023, 18:33 IST
Last Updated 9 ಆಗಸ್ಟ್ 2023, 18:33 IST
ಬ್ಯಾಂಕ್‌ ಸಾಲ
ಬ್ಯಾಂಕ್‌ ಸಾಲ   

ಬೆಂಗಳೂರು: ದೇಶದ ವಾಣಿಜ್ಯ ಬ್ಯಾಂಕ್‌ಗಳು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ವಲಯದ ಉದ್ಯಮಗಳಿಗೆ ನೀಡುವ ಸಾಲದ ಪ್ರಮಾಣವು ಹೊಸ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಕಡಿಮೆ ಆಗಿದ್ದರೂ, ಇದೇ ಅವಧಿಯಲ್ಲಿ ಕೃಷಿ ವಲಯಕ್ಕೆ ನೀಡುತ್ತಿರುವ ಸಾಲದ ಪ್ರಮಾಣ ಏರಿಕೆ ಕಂಡಿದೆ.

ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ವಾಣಿಜ್ಯ ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣವು ಈ ವರ್ಷದ ಜೂನ್‌ ತಿಂಗಳಿನಲ್ಲಿ ಶೇಕಡ 19.7ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಜೂನ್‌ ತಿಂಗಳಲ್ಲಿ ಈ ವಲಯಕ್ಕೆ ನೀಡಿದ ಸಾಲದ ಪ್ರಮಾಣವು ಶೇ 12.9ರಷ್ಟು ಮಾತ್ರ ಹೆಚ್ಚಾಗಿತ್ತು.

ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ನೀಡುವ ಸಾಲದ ಪ್ರಮಾಣವು ಮೇ ತಿಂಗಳಲ್ಲಿ ಶೇ 16ರಷ್ಟು ಹೆಚ್ಚಾಗಿದೆ (ಹಿಂದಿನ ವರ್ಷದ ಮೇ ತಿಂಗಳಲ್ಲಿ ಶೇ 11.7ರಷ್ಟು). ಏಪ್ರಿಲ್ ತಿಂಗಳಲ್ಲಿ ಈ ವಲಯಕ್ಕೆ ಸಾಲ ನೀಡಿಕೆಯಲ್ಲಿ ಶೇ 16.7ರಷ್ಟು ಹೆಚ್ಚಳ ಆಗಿದೆ (ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 10.6ರಷ್ಟು ಹೆಚ್ಚಳ).

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಇಡೀ ಉದ್ಯಮ ವಲಯಕ್ಕೆ ಸಾಲ ನೀಡಿಕೆ ಪ್ರಮಾಣದಲ್ಲಿನ ಹೆಚ್ಚಳವು ಹಿಂದಿನ ವರ್ಷದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಜೂನ್‌ನಲ್ಲಿ ಶೇ 8.1ರಷ್ಟು (ಹಿಂದಿನ ವರ್ಷ ಶೇ 9.5ರಷ್ಟು), ಮೇ ತಿಂಗಳಲ್ಲಿ ಶೇ 6ರಷ್ಟು (ಹಿಂದಿನ ವರ್ಷ ಶೇ 8.2ರಷ್ಟು), ಏಪ್ರಿಲ್‌ ತಿಂಗಳಲ್ಲಿ ಶೇ 7ರಷ್ಟು (ಹಿಂದಿನ ವರ್ಷ ಶೇ 8ರಷ್ಟು) ಆಗಿದೆ. ಆದರೆ ಬೃಹತ್ ಪ್ರಮಾಣದ ಉದ್ದಿಮೆಗಳಿಗೆ ಸಾಲ ನೀಡಿಕೆ ಪ್ರಮಾಣದಲ್ಲಿ ಮಾತ್ರ ಹೆಚ್ಚಳ ಆಗಿದೆ.

ಸಾಲ ನೀಡಿಕೆ ಪ್ರಮಾಣವು ಎಂಎಸ್‌ಎಂಇ ವಲಯಕ್ಕೆ ಕಡಿಮೆ ಆಗಿರುವುದರ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ, ‘ಸಣ್ಣ ಉದ್ಯಮಗಳಿಗೆ ಸಾಲ ಕೊಡಬೇಕು ಎಂದಾದರೆ ಸಾಲ ಹಿಂದಿರುಗಿಸುವ ಸಾಮರ್ಥ್ಯದ ಕುರಿತಾದ ರೇಟಿಂಗ್‌ ವಿವರವನ್ನು ಬ್ಯಾಂಕ್‌ಗಳು ಕೇಳುತ್ತಿವೆ. ಸಣ್ಣ ಉದ್ದಿಮೆಗಳು ಅದನ್ನು ಎಲ್ಲಿಂದ ಕೊಡುವುದು’ ಎಂದು ಪ್ರಶ್ನಿಸಿದರು.

‘ಸಣ್ಣ ಉದ್ದಿಮೆಗಳು ಸಾಲ ಕೋರಿ ಸಲ್ಲಿಸುವ ಅರ್ಜಿಗಳನ್ನು ಬ್ಯಾಂಕ್‌ಗಳು ಈ ಮೊದಲು ತಮ್ಮ ಶಾಖೆಯ ಮ್ಯಾನೇಜರ್‌ಗಳ ಹಂತದಲ್ಲಿ ಇತ್ಯರ್ಥಪಡಿಸುತ್ತಿದ್ದವು. ಆದರೆ ಈಗ ಕೇಂದ್ರೀಕೃತ ವ್ಯವಸ್ಥೆಯ ಮೂಲಕವೇ ಸಾಲಕ್ಕೆ ಅನುಮೋದನೆ ನೀಡಲಾಗುತ್ತಿದೆ. ರೇಟಿಂಗ್‌ ಇಲ್ಲ ಎಂದು ಅರ್ಜಿಗಳು ಮುಂದಕ್ಕೆ ಹೋಗುತ್ತಲೇ ಇಲ್ಲ. ಇದೊಂದು ಸಮಸ್ಯೆಯಾಗಿದೆ’ ಎಂದರು.

‘ಮೊದಲೆಲ್ಲ ಉದ್ದಿಮೆಗಳ ದಿನನಿತ್ಯದ ವಹಿವಾಟು ನೋಡಿ ಮ್ಯಾನೇಜರ್‌ಗಳೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಕೈಗಾರಿಕಾ ವಲಯಗಳಲ್ಲಿ ಇರುವ ಬ್ಯಾಂಕ್‌ ಶಾಖೆಗಳ ಮ್ಯಾನೇಜರ್‌ಗಳಿಗೆ ಸಣ್ಣ ಉದ್ದಿಮೆಗಳ ಸಾಲದ ಅರ್ಜಿ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಿದರೆ, ಪರಿಸ್ಥಿತಿ ಸುಧಾರಿಸಬಹುದು’ ಎಂದು ರೆಡ್ಡಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.