ADVERTISEMENT

ಸೂಚ್ಯಂಕ ಸಂಭ್ರಮದ ವಾರ

ಕೆ.ಜಿ ಕೃಪಾಲ್
Published 19 ಜುಲೈ 2015, 19:35 IST
Last Updated 19 ಜುಲೈ 2015, 19:35 IST

ಷೇರುಪೇಟೆಯ ಸಂವೇದಿ ಸೂಚ್ಯಂಕವು ಏರಿಕೆಯ ಸಂಭ್ರಮ ಕಂಡ ವಾರ ಇದಾಗಿದೆ. ಈ ಏರಿಕೆಗೆ ಕಾರಣಗಳು ವೈವಿಧ್ಯಮಯ.

ಗ್ರೀಸ್‌ ಗೊಂದಲಕ್ಕೆ ತೆರೆ ಬಿತ್ತು. ದೇಶದ ಕಂಪೆನಿಗಳಲ್ಲಿ ವಿದೇಶಿ ವಿತ್ತೀಯ ಹೂಡಿಕೆಯ ಮಿತಿಯ ಲೆಕ್ಕಾಚಾರವನ್ನು ಸರಳಗೊಳಿಸುವ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಆರ್‌ಬಿಐನಿಂದ ಬಡ್ಡಿ ದರ ಕಡಿತದ ಸಾಧ್ಯತೆ ಕಂಡುಬಂದಿತ್ತು. ಈ ಎಲ್ಲ ಅಂಶಗಳೂ ಕಳೆದ ವಾರದ ರಭಸದ ಚಟುವಟಿಕೆಗೆ ಕಾರಣವಾದವು.

ಕೆಲವು ಕಂಪೆನಿಗಳ ಷೇರಿನ ದರ ಏರಿಳಿತ ಕಲ್ಪನೆಗೆ ಮೀರಿದ್ದಾಗಿದೆ.  ಇದರಲ್ಲಿ ಜುವೆಲ್ಲರಿ ಕಂಪೆನಿ ರಾಜೇಶ್ ಎಕ್ಸ್ ಪೋರ್ಟ್ಸ್ ಷೇರು ಪ್ರಮುಖವಾದುದು. ಈ ಕಂಪೆನಿ ₹1448 ಕೋಟಿ ಮೌಲ್ಯದ ಆಭರಣಗಳನ್ನು ರಪ್ತು ಮಾಡುವ ಆರ್ಡರ್ ಪಡೆದಿದೆ ಎಂಬ ಸುದ್ದಿ ಕಂಪೆನಿಯ ಷೇರಿನಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಷೇರಿನ ಬೆಲೆಯನ್ನು ₹364ರಿಂದ ₹458ರವರೆಗೂ ಏರಿಸಿತು. ಕಳೆದ ಒಂದು ತಿಂಗಳಲ್ಲಿ ಈ ಷೇರಿನ ಬೆಲೆ ಶೇ 88ರಷ್ಟು ಏರಿಕೆ ಕಂಡಿದೆ. ಅಂದರೆ ₹245ರಿಂದ ₹458ರವರೆಗೂ ಏರಿಕೆ ಕಂಡಿದೆ!

ಪ್ರತಿ ಷೇರಿಗೆ ₹5 ಲಾಭಾಂಶ ನಿಗದಿಗೆ ಆಗಸ್ಟ್ 11ರಂದು ಬುಕ್‌ ಕ್ಲೋಸಿಂಗ್‌ (ಲೆಕ್ಕದ ಪುಸ್ತಕ ಮುಚ್ಚುವುದು) ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ಪ್ರಕಟಿಸಿದೆ. ಇದರಿಂದ ಕಂಪೆನಿಯ ಷೇರು ಶುಕ್ರವಾರ ₹477ರವರೆಗೂ ಜಿಗಿತ ಕಂಡಿದೆ. ಕಂಪೆನಿ ಆಡಳಿತ ಮಂಡಳಿ ಸೋಮವಾರ ತೈಮಾಸಿಕ ಫಲಿತಾಂಶ ಪ್ರಕಟಿಸಲಿದೆ ಎಂಬ ಸುದ್ದಿಯು ಈ ಏರಿಕೆಗೆ ಪುಷ್ಟಿ ನೀಡಿತು.

ಸ್ಟ್ರೈಡ್ಸ್ ಆರ್ಕೋಲ್ಯಾಬ್ ಜುಲೈ 2ರಿಂದ ಲಾಭಾಂಶ ನಂತರದ ವಹಿವಾಟಿಗೆ ಪ್ರವೇಶಿಸುವುದರಿಂದ ಶುಕ್ರವಾರ ವಾರ್ಷಿಕ ಗರಿಷ್ಠ ಮಟ್ಟ ದಾಖಲಿಸಿತು. ಕಳೆದೊಂದು ವಾರದಲ್ಲಿ ₹100ಕ್ಕಿಂತ ಅಧಿಕ, ಒಂದು ತಿಂಗಳಲ್ಲಿ ₹260ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಇದು ಪೇಟೆಯ ತ್ವರಿತ ಚಲನೆಗೆ ಹಿಡಿದ ಕನ್ನಡಿಯಾಗಿದೆ.
ವಿದೇಶಿ ರೇಟಿಂಗ್‌ ಸಂಸ್ಥೆಯೊಂದು ಬಿ.ಎಚ್.ಇ.ಎಲ್ ಕಂಪೆನಿಯನ್ನು ಉನ್ನತ ದರ್ಜೆಗೇರಿಸಿದ ಕಾರಣ ಇದರ ಷೇರು ಏರಿಕೆ ದಿಶೆಯಲ್ಲಿ ಸಾಗಿತು. ಒಂದು ತಿಂಗಳಲ್ಲಿ ₹48ರಷ್ಟು ಏರಿಕೆ ಪ್ರದರ್ಶಿಸಿದೆ.

ಲಾಭಾಂಶ ವಿತರಣೆಗೆ ದಿನ ಗೊತ್ತು ಪಡಿಸುವುದು ಸಮೀಪಿಸುತ್ತಿರುವ ಕಾರಣ ಸರ್ಕಾರಿ ಸ್ವಾಮ್ಯದ ರೂರಲ್ ಎಲೆಕ್ಟ್ರಿಫಿಕೇಷನ್‌ ಕಾರ್ಪೊರೇಷನ್  ಷೇರು ಗುರುವಾರ ದಿಢೀರ್ ಏರಿಕೆ ಕಂಡು ಶುಕ್ರವಾರ ₹301ರ ಗರಿಷ್ಠವನ್ನು ತಲುಪಿತು. ಲಾಭಾಂಶ ಘೋಷಣೆಗೆ ದಿನ ಸಮೀಪಿಸುತ್ತಿರುವ ಕಾರಣ ಜೆ.ಬಿ.ಕೆಮಿಕಲ್ಸ್  ಷೇರು ₹246ರಿಂದ ₹275ರವರೆಗೂ ಜಿಗಿಯಿತು. ಇದು ವಾರ್ಷಿಕ ಗರಿಷ್ಠ ಮಟ್ಟವಾಗಿದೆ.

ಉತ್ತಮ ಫಲಿತಾಂಶ ಪ್ರಕಟಿಸಿದರೂ ಎವರೆಸ್ಟ್ ಇಂಡಸ್ಟ್ರೀಸ್‌ನ ಷೇರು, ಫಲಿತಾಂಶಕ್ಕೆ ಮುನ್ನ ₹430ನ್ನು ತಲುಪಿ ನಂತರದಲ್ಲಿ ಷೇರಿನ ಬೆಲೆಯು ₹366ಕ್ಕೆ ಕುಸಿಯಿತು.ಕ್ಯಾಸ್ ಟೆಕ್ಸ್ ಟೆಕ್ನಾಲಜೀಸ್ ಈ ವಾರದ ಆರಂಭದಲ್ಲಿ ₹366ರ ವಾರ್ಷಿಕ ಗರಿಷ್ಠ  ಮಟ್ಟ ತಲುಪಿ, ನಂತರ ಕೆಳ ಆವರಣ ಮಿತಿಯಲ್ಲಿ ಸಾಗಿ ₹294ರಲ್ಲಿ ವಾರಾಂತ್ಯ ಕಂಡಿತು. ಈ ಬೆಲೆಗೂ ಷೇರು ಕೊಳ್ಳುವವರು ಇರಲಿಲ್ಲ!

ಹೀಗೆ ಪೇಟೆಯು ಕಂಪೆನಿಗಳ ಆಂತರಿಕ ಸಾಧನೆ ಮೀರಿ ಇತರೆ ಕಾರಣಗಳಿಂದಲೂ ಏರಿಕೆ- ಇಳಿಕೆ ಪ್ರದರ್ಶಿಸಿದ್ದು, ವಾಸ್ತವ ಅಂಶಕ್ಕೆ ಮಹತ್ವ ನೀಡುವುದಕ್ಕೆ ಒತ್ತು ನೀಡಿದೆ.ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 801 ಅಂಶಗಳ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ₹2,556 ಕೋಟಿ ನಿವ್ವಳ ಹೂಡಿಕೆ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹6,26 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₹105ಲಕ್ಷ ಕೋಟಿ ಯಲ್ಲಿತ್ತು.

ಹೊಸ ಷೇರು: ಫಾರ್ಮಾ ವಲಯದ ಬಯೋಕಾನ್ ಕಂಪೆನಿಯ ಅಂಗ ಸಂಸ್ಥೆ ಸಿಂಜೀನ್ ಇಂಟರ್ ನ್ಯಾಷನಲ್ ಪ್ರತಿ ಷೇರಿಗೆ ₹240ರಿಂದ ₹250ರ ದರಶ್ರೇಣಿಯಲ್ಲಿ ಎರಡು ಕೋಟಿ ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಲೆಕ್ಕದಲ್ಲಿ ಜುಲೈ 27 ರಿಂದ 29 ರವರೆಗೂ ವಿತರಣೆ ಮಾಡಲಿದೆ.  ಷೇರಿಗೆ 60 ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡರಲ್ಲೂ ವಹಿವಾಟು ಪಟ್ಟಿ ಸೇರಲಿದೆ.

ಮದ್ರಾಸ್ ಮತ್ತು ಮೆಟ್ರೋಪಾಲಿಟನ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಎಂ ಎಸ್ ಇನ್ವೆಸ್ಟ್ ಮೆಂಟ್ಸ್ ಹಾಗೂ ಅಹಮದಾಬಾದ್  ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಶ್ರೀನಾಥ್ ಇಂಡಸ್ಟ್ರಿಯಲ್ ಇನ್ವೆಸ್ಟ್ ಮೆಂಟ್ಸ್ ಜುಲೈ 16 ರಿಂದ ಬಿಎಸ್‌ಇ ‘ಡಿಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಗ್ರಾಂಡಿಯೂರ್ ಪ್ರಾಡಕ್ಟ್ಸ್ ಲಿ. ಕಂಪೆನಿ 21  ರಿಂದ ಬಿಎಸ್‌ಇನ 'ಡಿಟಿ' ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಗಜಗಾತ್ರದ ವಹಿವಾಟು: ಡಾಯಿಷ್ ಬ್ಯಾಂಕ್ 14 ರಂದು 24 ಲಕ್ಷ ಕ್ಯಾಸ್ಟೆಕ್ಸ್ ಟೆಕ್ನಾಲಜೀಸ್  ಷೇರನ್ನು ಮಾರಾಟ ಮಾಡಿದರೆ ಈ ಷೇರನ್ನು ಮೆರಿಲ್ ಲಿಂಚ್ ಕ್ಯಾಪಿಟಲ್  ಮಾರ್ಕೆಟ್ಸ್ ಖರೀದಿಸಿದೆ.
ಮುಖಬೆಲೆ ಸೀಳಿಕೆ:  ಸೆಟ್ಕೋ ಆಟೋ ಲಿ ಕಂಪೆನಿ ಹಾಗು ಸ್ಯಾಂಟೆಕ್ಸ್ ಫ್ಯಾಶನ್ಸ್ ಲಿ ಕಂಪೆನಿಗಳು ಶೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ತೀರ್ಮಾನಿಸಿವೆ.

ವಾರದ ವಿಶೇಷ
ಕಾರ್ಪೊರೇಟ್ ವಲಯದಲ್ಲಿ ನಡೆಯುತ್ತಿರುವ ವ್ಯವಹಾರಗಳು, ಒಳ ಹರಿಯುತ್ತಿರುವ ವಿದೇಶಿ ಹಣ ಬಾಹ್ಯ ನೋಟಕ್ಕೆ ಉತ್ಸಾಹದಾಯಕವಾಗಿದ್ದರೂ, ಸಣ್ಣ ವ್ಯವಹಾರಗಳಲ್ಲಿ ಜನ ಸಾಮಾನ್ಯರಲ್ಲಿ ಕೊಳ್ಳುವ ಸಾಮರ್ಥ್ಯ ಇನ್ನೂ ಆ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. 

ಇತ್ತೀಚಿನ ದಿನಗಳಲ್ಲಿ ಹೊಸ ಉಧ್ಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಅದರಲ್ಲಿ ಈ- ಕಾಮರ್ಸ್ ಎಂದರೆ ಮತ್ತಷ್ಟು ಒಲವು ದೇಶೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿದೆ. 
‘ಸ್ಟಾರ್ಟ್-ಅಪ್’ ಎಂಬ ಪದವು ಹೆಚ್ಚಿನ ಮನ್ನಣೆ ಪಡೆದಿರುವುದಕ್ಕೆ ಇತ್ತೀಚಿನ ' ಸ್ಲಿಮ್ ಪೆ ' ಎಂಬ ಹೊಸ ಸಂಸ್ಥೆ 1.66 ಕೋಟಿ ಡಾಲರ್, ಫರ್ನಿಚರ್ ಕಂಪೆನಿ ಫಾಬೇಲಿಯೋ ಐದು ಲಕ್ಷ ಡಾಲರ್, ಟ್ಯಾಲೆಂಟ್ ಡಾಟ್ ಐಒ 22 ಲಕ್ಷ ಡಾಲರ್ ಸಂಪನ್ಮೂಲ ಸಂಗ್ರಹಣೆ ಮಾಡಿರುವುದು ಸಾಕ್ಷಿಯಾಗಿದೆ.

ADVERTISEMENT

ಜೂಮ್ ಕಾರ್ ಎಂಬ ಕಂಪೆನಿ 1.10 ಕೋಟಿ ಡಾಲರ್ ಫಂಡಿಂಗ್ ಪಡೆದಿದೆ. ಈ ಗಾತ್ರದ ನಿಧಿ ಹರಿದಿರುವ ಆರಂಭದಲ್ಲೇ ಸೂಕ್ತವಾದ,  ಜಬಾಬ್ದಾರಿಯುತ ಬಳಕೆಗೆ  ನಿಯಂತ್ರಣಗಳ ಅಗತ್ಯ ಹೆಚ್ಚಿದೆ.  ಈ ಹಣವು ಯಾವುದೋ ರೂಪದಲ್ಲಿ ಷೇರುಪೇಟೆಗಳೊಳಗೆ ನುಸುಳಿ ವಾತಾವರಣದಲ್ಲಿ ಅಸ್ಥಿರತೆ ಹೆಚ್ಚಿಸುವುದಕ್ಕೆ ಅವಕಾಶ ಕೊಡದಿರುವಂತೆ ಮಾಡುವುದು ನಿಯಂತ್ರಕರಿಗೆ ಸವಾಲಾಗಿರಬಹುದು.  

ಪ್ರಮುಖ ಕಂಪೆನಿಗಳಾದ ಎಚ್.ಡಿ.ಎಫ್.ಸಿ ಎನ್‌ಸಿಡಿ ಮೂಲಕ ₨85ಸಾವಿರ ಕೋಟಿ ಸಂಗ್ರಹ ಮಾಡಲಿದೆ. ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಅಗ್ರಮಾನ್ಯ ಕಂಪೆನಿಗಳಿಗೆ ತೆರಿಗೆ ಮುಕ್ತ (ಬಡ್ಡಿ ಮಾತ್ರ) ಬಾಂಡ್ ಬಿಡುಗಡೆಗೆ ಅನುಮತಿ ದೊರೆತಿದೆ. ಚಾಲ್ತಿಯಲ್ಲಿರುವ ಶ್ರೀ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್, ಮುತ್ತೂಟ್‌ ಮಿನಿ ಫೈನಾನ್ಸ್ ಕಂಪೆನಿಗಳ ಎನ್ ಸಿಡಿ,  ಸಿಂಜೀನ್ ಇಂಟರ್‌ನ್ಯಾಷನಲ್ ಐಪಿಒ ಮೊದಲಾದವು ಷೇರುಪೇಟೆಯಲ್ಲಿ ಹರಿದಾಡುತ್ತಿರುವ ಹಣವನ್ನು ಹೀರುವುದರಿಂದ ಪೇಟೆ ಒತ್ತಡದಲ್ಲಿ ಕುಸಿತ ಕಾಣಬಹುದು.

ಈ ವಾತಾವರಣದಲ್ಲಿ ಕ್ಷಿಪ್ರ, ತ್ವರಿತ ಲಾಭದ ನಗದೀಕರಣಕ್ಕೆ ಒಲವು ತೋರುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.