ADVERTISEMENT

ಕೈರಾನಾ:- ಸೋತ ಜಿನ್ನಾ ಮತ್ತು ಗೆದ್ದ ‘ಗನ್ನಾ’

ಉಮಾಪತಿ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಕೈರಾನಾ:- ಸೋತ ಜಿನ್ನಾ ಮತ್ತು ಗೆದ್ದ ‘ಗನ್ನಾ’
ಕೈರಾನಾ:- ಸೋತ ಜಿನ್ನಾ ಮತ್ತು ಗೆದ್ದ ‘ಗನ್ನಾ’   

ಎರಡು ತಿಂಗಳ ಹಿಂದಿನ ಮಾತು. ಮಹಾರಾಷ್ಟ್ರದ ನಾಸಿಕದಿಂದ ಮುಂಬೈಗೆ 166 ಕಿ.ಮೀ. ದೂರ ಬೇಸಿಗೆಯ ಧಗೆಯಲ್ಲಿ ನಡೆದು ಬಂದಿತ್ತು ಬಡ ರೈತ ಸಮುದಾಯ. ಅತಿಸಣ್ಣ ಹಿಡುವಳಿಗಳ ಭೂಹೀನ ಬುಡಕಟ್ಟುಗಳವರದೇ ಅಧಿಕ ಸಂಖ್ಯೆ. ಚಪ್ಪಲಿ ಕೂಡ ಇಲ್ಲದೆ ನಡೆದು, ಬೊಬ್ಬೆಯೆದ್ದು ಹೊಪ್ಪಳೆ ಕಿತ್ತ ಪಾದಗಳಿಗೆ ಲೆಕ್ಕವಿಲ್ಲ. ನಾಲ್ಕು ದಿನಗಳ ಕಠಿಣ ನಡಿಗೆಯ ನಂತರ ದಕ್ಷಿಣ ಮುಂಬೈಯ ಆಜಾದ್ ಮೈದಾನವನ್ನು ಪ್ರವೇಶಿಸಿದ್ದು ನಡುರಾತ್ರಿಯ ಕತ್ತಲು ಮತ್ತು ನೀರವತೆಯಲ್ಲಿ. ಶಾಲಾ ಮಕ್ಕಳು ಪರೀಕ್ಷೆ ಬರೆಯಬೇಕಿರುವ ಮಾರ್ಚ್ ತಿಂಗಳು. ಹಗಲು ಪ್ರವೇಶಿಸಿದರೆ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಮಕ್ಕಳಿಗೆ ತೊಂದರೆಯಾದೀತೆಂಬ ಕಾಳಜಿ. ಮಕ್ಕಳು ಮನೆ ಬಿಡಲು ಹಲವು ತಾಸುಗಳು ಬಾಕಿಯಿದ್ದಾಗಲೇ ರೈತರು ತಮ್ಮ ಪ್ರತಿಭಟನಾ ಮೈದಾನದಲ್ಲಿ ನೆಲೆಯೂರಿ ಆಗಿತ್ತು. ಬೆಂಗಳೂರಿಗೆ ಮುತ್ತಿಗೆ ಹಾಕಿದ್ದ ಅಂಗನವಾಡಿ ಅಮ್ಮಂದಿರಿಗೆ ಹಣ್ಣು, ಬ್ರೆಡ್ಡು, ಬಿಸ್ಕತ್ತು, ನೀರು ಇತ್ತ ಹೃದಯವಂತರಂತೆಯೇ ಮುಂಬೈವಾಸಿಗಳು ಬಡರೈತರ ಬವಣೆಗೆ ಸ್ಪಂದಿಸಿದರು. ಬೆಂದ ಪಾದಗಳ ಹುಡುಕಿ ಚಪ್ಪಲಿ ತೊಡಿಸಿದರು, ಹಣ್ಣು ನೀರು ಇತ್ತರು.

ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಕಳೆದ ವರ್ಷ ಇದೇ ತಿಂಗಳು ಪೊಲೀಸರ ಗೋಲಿಬಾರ್‌ಗೆ ರೈತರು ಬಲಿಯಾಗಿದ್ದರು. ವರ್ಷದ ನಂತರ ಇದೀಗ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹರಿಯಾಣದ ರೈತರು ತಮ್ಮ ಸಂಕಟಕ್ಕೆ ಸರ್ಕಾರ- ಸಮಾಜದ ಕಣ್ಣು ತೆರೆಸಲು ಇದೇ ಜೂನ್ ಒಂದರಿಂದ 10ರ ತನಕ ‘ಗ್ರಾಮ ಬಂದ್’ ಆಚರಿಸತೊಡಗಿದ್ದಾರೆ. ಹಾಲು, ತರಕಾರಿ, ಹಣ್ಣು ಯಾವುದನ್ನೂ ಪಟ್ಟಣಗಳಿಗೆ ಮಾರಾಟ ಮಾಡುವುದಿಲ್ಲ ಎಂಬ ಮುಷ್ಕರ ಸಾರಿದ್ದಾರೆ.

ದೇಶದ ಹಲವು ಕೃಷಿ ಸೀಮೆಗಳ ರೈತ ಸಮುದಾಯಗಳು ಬೇಡಿಕೆ ಮೀರಿದ ಪೂರೈಕೆ ಎಂಬ ಸಮೃದ್ಧಿಯ ಸಮಸ್ಯೆಯನ್ನು ಎದುರಿಸುತ್ತಿವೆ. 2016-17ರ ಸಾಲಿನಲ್ಲಿ ದೇಶ ಕಂಡ ರೈತ ಆತ್ಮಹತ್ಯೆಗಳ ಸಂಖ್ಯೆ 11,458. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಎಂಬುದೊಂದು ಸರ್ಕಾರಿ ಏಜೆನ್ಸಿ. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ತಗ್ಗಿಸಿ ದಾಖಲಿಸಬೇಕೆಂಬ ಸರ್ಕಾರದ ಒತ್ತಡಕ್ಕೆ ಕಿವಿಗೊಟ್ಟ ನಂತರವೂ ಈ ಏಜೆನ್ಸಿ ಅಂಕಿ ಅಂಶಗಳ ಪ್ರಕಾರ 1995- 2015ರ ನಡುವಣ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದೇಶದ ರೈತರ ಸಂಖ್ಯೆ 3.18 ಲಕ್ಷ. ಶೇ 70ರಷ್ಟು ಆತ್ಮಹತ್ಯೆಗಳು ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಅವಿಭಜಿತ ಆಂಧ್ರಪ್ರದೇಶದಲ್ಲಿ ನಡೆದಿವೆ. ಶೇ 52ರಷ್ಟು ಕೃಷಿ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿವೆ. ಒಟ್ಟು ಕೃಷಿ ಸಾಲದ ಮೊತ್ತವನ್ನು ₹ 12.6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

ADVERTISEMENT

ಕೃಷಿ ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರಷ್ಟು ಮತ್ತು ಕುಟುಂಬವೆಲ್ಲ ಸೇರಿ ದುಡಿದ ಕೂಲಿ ವೆಚ್ಚ ಹಾಗೂ ಕೃಷಿ ಜಮೀನಿನ ಬಾಡಿಗೆ ಸೇರಿಸಿ ದರ ನಿಗದಿ ಮಾಡಬೇಕೆಂಬ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕೆಂಬುದು ರೈತರ ಅಹವಾಲು. 2011ರಲ್ಲೇ ನೀಡಲಾದ ಈ ವರದಿಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲಿಲ್ಲ. ಹಾಲಿ ಎನ್‌ಡಿಎ ಸರ್ಕಾರಕ್ಕೂ ದರಕಾರಿಲ್ಲ. ಸ್ವಾಮಿನಾಥನ್ ಶಿಫಾರಸಿನ ಕನಿಷ್ಠ ಬೆಂಬಲ ಬೆಲೆ ಇರಲಿ, ಸಾಧಾರಣ ಬೆಂಬಲ ಬೆಲೆಯೂ ಸಿಗುತ್ತಿಲ್ಲ.

ಭಾರತದ ಕೃಷಿಯ ಪಾಲಿಗೆ 2017 ಅತಿವೃಷ್ಟಿಯ ಮತ್ತೊಂದು ದುಃಸ್ವಪ್ನದ ಸಾಲು. ಅನಾವೃಷ್ಟಿ, ಅತಿವೃಷ್ಟಿಗಳ ಸಾಲು ಸಾಲು ಸರಣಿಯಲ್ಲೇ ಎದ್ದು ಬಿದ್ದು ಬೆಂದು ನೊಂದು ಅಂಗೈಯೊಳಗಿನ ಅರೆಜೀವ ನಮ್ಮ ಒಕ್ಕಲುತನ. ಗೋಧಿ, ಹತ್ತಿ, ಆಲೂ, ಬೇಳೆಕಾಳುಗಳೇ ಅಲ್ಲದೆ ಇನ್ನೂ ಹತ್ತು ಹಲವು ಫಸಲುಗಳನ್ನು ನೆಲತಾಯಿ ಉಡಿ ಬಿರಿದು ನೀಡಿದ ಸಾಲು. ನೋಟು ರದ್ದತಿಯ ಮಾರಣಾಂತಿಕ ಹೊಡೆತ ಸಹಿಸಿ, ಹೊಟ್ಟೆ ಬಟ್ಟೆ ಕಟ್ಟಿದ ಶ್ರಮ ವ್ಯರ್ಥವಾಗಿತ್ತು. ಮಾಲು ಮಾರುಕಟ್ಟೆಗೆ ಬರುವ ಬಹು ಮುನ್ನವೇ ಧಾರಣೆಗಳು ಕನಿಷ್ಠ ಬೆಂಬಲ ಬೆಲೆಗಿಂತ ಕೆಳಗೆ ಕುಸಿದಿದ್ದವು. ವಿಶೇಷವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ರೈತ ಹೊಟ್ಟೆ ಸಂಕಟ ತಾಳದೆ ವ್ಯಗ್ರಗೊಂಡಿದ್ದ. ಮಾರ್ಚ್ ತಿಂಗಳಲ್ಲಿ ಉತ್ತರಪ್ರದೇಶವನ್ನು ಘನವಾಗಿ ಗೆದ್ದಿದ್ದ ಬಿಜೆಪಿ, ಡಿಸೆಂಬರ್ ವೇಳೆಗೆ ಗುಜರಾತಿನಲ್ಲಿ ಸರಳ ಬಹುಮತಕ್ಕೆ ತಿಣುಕಬೇಕಾಯಿತು.

ತಡವಾಗಿ ಕಣ್ಣು ತೆರೆದ ಸರ್ಕಾರವು ದಾಸ್ತಾನು ಮಿತಿಗಳನ್ನು ಹೆಚ್ಚಿಸಿತು. ಆಮದು ನಿರ್ಬಂಧಗಳನ್ನು ವಿಧಿಸಿತು. ರಫ್ತು ನಿರ್ಬಂಧಗಳ ಸಡಿಲಿಸಿತು. ಹೆಚ್ಚಿನ ಪ್ರಯೋಜನ ಆಗಲಿಲ್ಲ. ಉತ್ಪಾದನೆಯ ಪ್ರಮಾಣ ದಾಖಲೆ ಮುರಿದು ಮೇರೆ ಮೀರಿತ್ತು ಮತ್ತು ಆಮದು ಸುಂಕ ಹೆಚ್ಚಿಸಿದಂತೆಲ್ಲ, ಧಾರಣೆಯನ್ನು ಇಳಿಸುತ್ತ ರಂಗೋಲೆ ಕೆಳಗೆ ತೂರಿದ್ದರು ವಿದೇಶಿ ಸರಬರಾಜುದಾರರು.

ಬೇಳೆಕಾಳುಗಳ ಉತ್ಪಾದನೆ ಶೇ 40ರಷ್ಟು ಮೇಲೆ ಜಿಗಿದಿತ್ತು. 2016-17ರಲ್ಲಿ ನಾವು ಉತ್ಪಾದಿಸಿದ ಬೇಳೆಕಾಳುಗಳ ಪ್ರಮಾಣ 2.29 ಕೋಟಿ ಟನ್‌ಗಳು. ಇಂತಹುದೊಂದು ಬಂಪರ್ ಬೆಳೆಯ ನಿಚ್ಚಳ ನಿರೀಕ್ಷೆ ಇತ್ತು. ಆದರೂ ಆ ವೇಳೆಗಾಗಲೇ 60.61 ಲಕ್ಷ ಟನ್‌ಗಳಷ್ಟು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು!

ಭತ್ತ, ಗೋಧಿ, ಎಣ್ಣೆಕಾಳುಗಳು, ಸಕ್ಕರೆ, ಹಾಲಿನ ಜಾಗತಿಕ ಉತ್ಪಾದನೆ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. ಲಾಭದಾಯಕ ಬೆಲೆ ನೀಡುವ ಸವಾಲು ದೈತ್ಯ ರೂಪ ತಳೆಯತೊಡಗಿದೆ. ಗೋಧಿ ಮತ್ತು ಅಕ್ಕಿಗೆ ಇರುವ ಕನಿಷ್ಠ ಬೆಂಬಲ ಬೆಲೆಯ ಆಸರೆ ಇತರೆ ಅನೇಕ ಬೆಳೆಗಳಿಗೆ ಇಲ್ಲವಾಗಿದೆ.

ಕಬ್ಬು- ಸಕ್ಕರೆಯದೂ ಇದೇ ದಾಖಲೆ ಮೀರಿದ ಉತ್ಪಾದನೆಯ ವ್ಯಥೆಯ ಕಥೆ. ಪಶ್ಚಿಮ ಉತ್ತರಪ್ರದೇಶದ ಗಂಗಾ-ಯಮುನಾ ನದಿಗಳ ನಡುವಣ ಫಲವತ್ತಾದ ನೆಲ ಕಬ್ಬು ಬೆಳೆಯುವ ಸಕ್ಕರೆ ಸೀಮೆ. ಆರು ವರ್ಷಗಳ ಹಿಂದೆ 2012-13ರಲ್ಲಿ ಇಲ್ಲಿನ 24.24 ಲಕ್ಷ ಹೆಕ್ಟೇರುಗಳಲ್ಲಿ ಬೆಳೆಯಲಾದ ಕಬ್ಬಿನಿಂದ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿದ ಸಕ್ಕರೆಯ ಪ್ರಮಾಣ 74.85 ಲಕ್ಷ ಟನ್‌ಗಳು. 2017-18ರ ಹಂಗಾಮಿನಲ್ಲಿ 22.99 ಲಕ್ಷ ಹೆಕ್ಟೇರುಗಳಲ್ಲಿ ಉತ್ಪಾದಿಸಲಾಗಿರುವ ಸಕ್ಕರೆ 119.22 ಲಕ್ಷ ಟನ್‌ಗಳು. ಕಬ್ಬು ಅರೆಯುವ ಹಂಗಾಮು ವಾರದೊಪ್ಪತ್ತಿನಲ್ಲಿ ಮುಗಿವ ಹೊತ್ತಿಗೆ ಈ ಪ್ರಮಾಣ 120 ಲಕ್ಷ ಟನ್‌ಗಳನ್ನು ದಾಟುವ ನಿರೀಕ್ಷೆ ಇದೆ. ಇಳುವರಿಯ ಈ ಭಾರಿ ಹೆಚ್ಚಳದ ಹಿಂದಿನ ಕಾರಣ ಸಿ.ಓ-0238 ಎಂಬ ಹೊಸ ಸುಧಾರಿತ ತಳಿ. ದೇಶದ ಸಕ್ಕರೆ ಉತ್ಪಾದನೆ ಈ ಹಂಗಾಮಿನಲ್ಲಿ 322 ಲಕ್ಷ ಟನ್‌ಗಳಿಗೆ ಏರುವ ಅಂದಾಜಿದೆ. ನಮ್ಮ ವಾರ್ಷಿಕ ಬಳಕೆ 250-260 ಲಕ್ಷ ಟನ್‌ಗಳು. ತೀವ್ರ ಬರಗಾಲದ ವರ್ಷಗಳನ್ನು ಬದಿಗಿಟ್ಟರೆ, ಮುಂದೆಯೂ ಇಂತಹುದೇ ಭಾರಿ ಉತ್ಪಾದನೆ ಕಟ್ಟಿಟ್ಟ ಬುತ್ತಿ. ಸಕ್ಕರೆ ಧಾರಣೆ ಬೀಳತೊಡಗಿದೆ. ರಾಜ್ಯ ಸರ್ಕಾರ ನಿಗದಿ ಮಾಡಿದ ದರವನ್ನು (ಎಸ್.ಎ.ಪಿ) ಕಾರ್ಖಾನೆಗಳಿಂದ ರೈತರಿಗೆ ಕೊಡಲಾಗುತ್ತಿಲ್ಲ. 2017-18ರ ಹಂಗಾಮಿನಲ್ಲಿ ಉತ್ತರಪ್ರದೇಶವೊಂದರಲ್ಲೇ ಕಾರ್ಖಾನೆಗಳು ₹ 35,103 ಕೋಟಿ ಮೌಲ್ಯದ ಕಬ್ಬನ್ನು ಖರೀದಿಸಿವೆ. ಈವರೆಗೆ ₹ 21,978 ಕೋಟಿ ಪಾವತಿ ಮಾಡಿದ್ದರೂ, ₹ 13 ಸಾವಿರ ಕೋಟಿಗೂ ಹೆಚ್ಚು ಬಾಕಿಯ ಬೆಟ್ಟ ಉಳಿದಿದೆ.

ಇದೇ ಸಕ್ಕರೆ ಸೀಮೆಯ ಕೈರಾನಾ ಲೋಕಸಭಾ ಉಪಚುನಾವಣೆಯಲ್ಲಿ ಕಬ್ಬಿನ ಬಾಕಿಯ ಈ ಸಂಕಟವನ್ನು ನಿರ್ಲಕ್ಷಿಸಿ, ಹಿಂದೂ-ಮುಸ್ಲಿಂ ಧ್ರುವೀಕರಣದ ದಾರಿ ಹಿಡಿದಿದ್ದ ಬಿಜೆಪಿಗೆ ಸೋಲಾಗಿದೆ. 2013ರ ಮುಜಫ್ಫರನಗರ ಕೋಮು ಗಲಭೆಗಳ ನಂತರ ಬಿಜೆಪಿಯತ್ತ ಸರಿದಿದ್ದ ಈ ಸೀಮೆಯ ರೈತಾಪಿ ಜಾಟ್‌ ಸಮುದಾಯ ದೊಡ್ಡ ಪ್ರಮಾಣದಲ್ಲಿ ಆ ಪಕ್ಷದ ವಿರುದ್ಧ ಮತ ಚಲಾಯಿಸಿರುವ ಸೂಚನೆಗಳಿವೆ. ಈ ಭಾಗದ ಬಹುತೇಕ ಮುಸ್ಲಿಮರು ಭೂಮಾಲೀಕ ರೈತರು. ಬಲಾಢ್ಯರು. ಖುದ್ದು ಜಾಟ್‌ ಸಮುದಾಯಕ್ಕೆ ಸೇರಿದ್ದ ರಾಷ್ಟ್ರೀಯ ಲೋಕದಳದ ಚೌಧರಿ ಚರಣಸಿಂಗ್ ಕಟ್ಟಿದ್ದ ಪ್ರಬಲ ಜಾತಿ ಸಮೀಕರಣ ಮಜಗರ್ (ಮುಸ್ಲಿಂ, ಆಹಿರ್- ಯಾದವ್, ಜಾಟ್, ಗುಜ್ಜರ್ ಹಾಗೂ ರಜಪೂತ) 2013ರ ಕೋಮು ದಂಗೆಗಳ ನಂತರ ಛಿದ್ರವಾಗಿತ್ತು. ಇದೀಗ ರೈತರ ಸಂಕಟ ಜಾಟರು ಮತ್ತು ಮುಸಲ್ಮಾನರನ್ನು ಮರಳಿ ಒಟ್ಟಿಗೆ ತರುತ್ತಿರುವ ಸಂಕೇತಗಳಿವೆ. ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನದ ಜನಕ ಮಹಮ್ಮದಾಲಿ ಜಿನ್ನಾ ಅವರ ಭಾವಚಿತ್ರ ಹಾಕಲಾಗಿದೆ ಎಂಬ ವಿಷಯವನ್ನು ಯೋಗಿ ಆದಿತ್ಯನಾಥ ಅವರು ಕೈರಾನಾ ಉಪಚುನಾವಣೆ ಸಂದರ್ಭದಲ್ಲಿ ಬಡಿದೆಬ್ಬಿಸಿದ್ದರು. ಹಿಂದಿ ಭಾಷೆಯಲ್ಲಿ ಕಬ್ಬನ್ನು ‘ಗನ್ನಾ’ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಉಪಚುನಾವಣೆ ‘ಗನ್ನಾ ವರ್ಸಸ್ ಜಿನ್ನಾ’ ಎಂದೇ ಸ್ಥಳೀಯವಾಗಿ ಹೆಸರಾಗಿತ್ತು. ಫಲಿತಾಂಶದ ನಂತರ ಜಿನ್ನಾಗೆ ಸೋಲಾಯಿತು, ಗನ್ನಾ ಗೆದ್ದಿತು ಎಂದೇ ಬಿಜೆಪಿಯೇತರ ರಾಜಕಾರಣಿಗಳು ಬಣ್ಣಿಸಿದರು.

ಕಬ್ಬು ಬೆಳೆಗಾರರಿಗೆ ಪಾವತಿ ಮಾಡಬೇಕಾದ ಬಾಕಿಯ ಬೆಟ್ಟ ತಗ್ಗಬಹುದು. ಆದರೆ ಉತ್ಪಾದನೆ ತಗ್ಗುವುದಿಲ್ಲ. 2018-19ರಲ್ಲಿ ಸಕ್ಕರೆ ಉತ್ಪಾದನೆ 340 ಲಕ್ಷ ಟನ್ ತಲುಪುವ ಅಂದಾಜಿದೆ. ಲೋಕಸಭಾ ಚುನಾವಣೆಗಳು ಹೊಸ್ತಿಲಲ್ಲಿ ನಿಂತ ವರ್ಷದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಸವಾಲೇ ಹೌದು.

ಒಕ್ಕಲುತನದ ಸಂಕಟ ಮತ್ತು ಜಲಕ್ಷಾಮ ಕುರಿತು ತಲಸ್ಪರ್ಶಿ ಕನ್ನಡಿ ಹಿಡಿದ ವಿಶಿಷ್ಟ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್. ಕಡುಕಷ್ಟದ ದುಡಿಮೆಯಾಗಿ ಪರಿಣಮಿಸಿರುವ ಬೇಸಾಯ ವೃತ್ತಿಯನ್ನು ತೊರೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ ಎಂದಿದ್ದಾರೆ. 1991-2011ರ ನಡುವಿನ 20 ವರ್ಷಗಳಲ್ಲಿ ಹೀಗೆ ಒಕ್ಕಲುತನ ತೊರೆದ ರೈತರ ಸಂಖ್ಯೆ 1.50 ಕೋಟಿ ಎಂದು ಅವರು ರಾಷ್ಟ್ರೀಯ ಜನಗಣತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಈ ಕೃಷಿ ಸಂಕಟ ಅಪ್ಪಟ ಮಾನವ ನಿರ್ಮಿತ. ಸರ್ಕಾರಿ ನೀತಿ ನಿರೂಪಣೆಯ ದೋಷಗಳು ಮತ್ತು ಪ್ರಮಾದಗಳೇ ಈ ಸಂಕಟದ ಹಿಂದಿನ ಕಾರಣಗಳು ಎಂಬುದು ಅವರ ನಿಲುವು. ಬಿತ್ತಿ ಬೆಳೆಯುವ ವೆಚ್ಚಗಳು 90ರ ದಶಕಗಳಿಂದ ಇಲ್ಲಿಯತನಕ ಹಲವಾರು ಪಟ್ಟು ಮೇಲೆ ಜಿಗಿದಿವೆ. ಆದರೆ ರೈತನ ಆದಾಯ ನಿಂತಲ್ಲೇ ನಿಂತಿದೆ, ಹೆಚ್ಚೆಂದರೆ ಇನ್ನಷ್ಟು ಕುಸಿದಿದೆ. ಮುಂಗಡಪತ್ರ ಮಂಡಿಸಿದಾಗಲೆಲ್ಲ ಕೃಷಿ ಸಾಲದ ಮೊತ್ತವನ್ನು ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಹೆಚ್ಚಿಸಿರುವುದಾಗಿ ಅಂದು ಪ್ರಣವ್‌ ಮುಖರ್ಜಿ, ಚಿದಂಬರಂ ಹಾಗೂ ಇದೀಗ ಜೇಟ್ಲಿ ತಮ್ಮ ಭುಜಗಳನ್ನು ತಾವೇ ತಟ್ಟಿಕೊಂಡು ಬರುತ್ತಿದ್ದಾರೆ. ಆದರೆ ಅಸಲು ಸಂಗತಿಯೆಂದರೆ ಈ ಸಾಲದ ಹೆಚ್ಚಳ ಕೃಷಿ ವಾಣಿಜ್ಯ ಮತ್ತು ಕೃಷಿ ಉದ್ಯಮಗಳ ಪಾಲಾಗುತ್ತಿದೆಯೇ ವಿನಾ ಬಡ ಕೃಷಿಕರಿಗೆ ತಲುಪುತ್ತಿರುವುದು ಬಲು ಕಮ್ಮಿ ಎಂಬುದು ಅವರ ವಾದ.

ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಮಹಾರಾಷ್ಟ್ರದಲ್ಲಿ ತನ್ನ ಸಾಲದ ಶೇ 50ರಷ್ಟನ್ನು ಮುಂಬೈ ಮಹಾನಗರ ಮತ್ತು ಸುತ್ತಮುತ್ತ ನೀಡಿತು. ಒಕ್ಕಲುತನದ ತೀವ್ರ ತಳಮಳದ ತಿರುಗಣಿಗೆ ಸಿಲುಕಿರುವ ವಿದರ್ಭ ಮತ್ತು ಮರಾಠವಾಡ ಸೀಮೆಗಳಿಗೆ ದೊರಕಿದ ಸಾಲದ ಪ್ರಮಾಣ ಶೇ 16 ಮಾತ್ರ ಎಂಬ ಉದಾಹರಣೆಯನ್ನು ಸಾಯಿನಾಥ್ ತಮ್ಮ ವಾದಕ್ಕೆ ಸಮರ್ಥನೆಯಾಗಿ ಒದಗಿಸುತ್ತಾರೆ.

ಇಂತಹ ದೈತ್ಯ ಕೃಷಿ ಸಂಕಟವು ದೇಶದ ಉದ್ದಗಲಕ್ಕೆ ಚುನಾವಣಾ ವಿಷಯ ಆದ ಉದಾಹರಣೆಗಳಿಲ್ಲ. ಭಾರತೀಯ ರೈತ ಮತಗಟ್ಟೆಗೆ ತೆರಳಿದಾಗ ಯಾವುದೋ ಒಂದು ಜಾತಿ, ಕೋಮಿಗೆ ಸೇರಿದ ಒಬ್ಬ ಸಾಮಾನ್ಯ ಮತದಾರನಾಗಿ ಮತ ಚಲಾಯಿಸುತ್ತಾನೆಯೇ ವಿನಾ ರೈತನಾಗಿ ಅಲ್ಲ. ರಾಜಕೀಯ ಪಕ್ಷಗಳು ಜನರನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ಒಡೆದು ಆಳುತ್ತಿರುವುದು ಕಠೋರ ಸತ್ಯ. ಈ ಚಕ್ರವ್ಯೂಹವನ್ನು ಮುರಿದು ಹೊರ ಬಂದಾಗಲಷ್ಟೇ ರೈತ ಗೆದ್ದಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.