ADVERTISEMENT

ಕೊನೆಗೂ ನಡೆದ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:43 IST
Last Updated 13 ಅಕ್ಟೋಬರ್ 2017, 5:43 IST
ಚಾಮರಾಜನಗರದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿ 209ರ ಅಗಲೀಕರಣಕ್ಕಾಗಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು
ಚಾಮರಾಜನಗರದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿ 209ರ ಅಗಲೀಕರಣಕ್ಕಾಗಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು   

ಚಾಮರಾಜನಗರ: ಕಟ್ಟಡ ಮಾಲೀಕರು ಮತ್ತು ಜಿಲ್ಲಾಡಳಿತದ ಸಂಘರ್ಷದಿಂದ ನಗರದಲ್ಲಿ ನನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ 209ರ ಅಗಲೀಕರಣ ಕಾಮಗಾರಿ ಕೊನೆಗೂ ಆರಂಭವಾಗಿದೆ. ಬುಧವಾರ ಬೆಳಿಗ್ಗೆಯೇ ಭುವನೇಶ್ವರಿ ವೃತ್ತದಿಂದ ಸತ್ಯಮಂಗಲ ವೃತ್ತದವರೆಗೆ ಪೊಲೀಸ್‌ ಸರ್ಪಗಾವಲು ಹಾಕಿದ ಜಿಲ್ಲಾಡಳಿತ, ಸಮರೋಪಾದಿಯಲ್ಲಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿತು.

ನಾಲ್ಕು ಜೆಸಿಬಿ ಯಂತ್ರಗಳು ರಸ್ತೆಯ ಎರಡೂ ಬದಿಗಳಲ್ಲಿ ಒತ್ತುವರಿಯಾಗಿದ್ದ ಕಟ್ಟಡಗಳನ್ನು ಒಡೆದುಹಾಕಿದವು. ‘ಕಟ್ಟಡ ಒಡೆಯುವಂತಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಇದೆ’ ಎಂದು ಕೆಲವರು ಆದೇಶಪತ್ರ ತೋರಿಸಿದರೂ ಅಧಿಕಾರಿಗಳು ಅದಕ್ಕೆ ಕಿವಿಗೊಡಲಿಲ್ಲ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿ ಕಟ್ಟಡ ತೆರವಿಗೆ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಅದನ್ನು ಲೆಕ್ಕಿಸದೆ ಕಾರ್ಯಾಚರಣೆ ಮುಂದುವರಿಸಿದಾಗ ಸುಮ್ಮನಾದರು.

ತೆರವು ಕಾರ್ಯ ಆರಂಭವಾದಾಗ ಅನೇಕ ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿದ ಅಂಗಡಿ ಮಾಲೀಕರು ಮತ್ತು ಕೆಲಸಗಾರರು ಸಾಮಗ್ರಿಗಳನ್ನು ಸಾಗಿಸಲು ಮುಂದಾದರು. ಎರಡೂ ಕಡೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ಒಡ್ಡಿದ್ದರಿಂದ ಸಾಮಗ್ರಿಗಳನ್ನು ಸಾಗಿಸಲು ಅವರು ಪರದಾಡುವಂತಾಯಿತು.

ADVERTISEMENT

ಕೆಲವು ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಬೆಲೆಬಾಳುವ ವಸ್ತುಗಳು ಅವಶೇಷಗಳ ಅಡಿ ಸಿಲುಕಿದವು. ಕೆಲವರು ಮೊದಲೇ ಕಟ್ಟಡ ಖಾಲಿ ಮಾಡಿದ್ದರು. ಜೆಸಿಬಿಯಿಂದ ಉರುಳಿದ ಅವಶೇಷಗಳನ್ನು ಒಡೆದು ಕಬ್ಬಿಣದ ಸರಳು ಮತ್ತು ಕಿಟಕಿ, ಬಾಗಿಲು ಮುಂತಾದ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಕೆಲಸಗಾರರು ಮಗ್ನರಾಗಿದ್ದರು.

ಹತ್ತಾರು ವರ್ಷಗಳಿಂದ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಗಳು ನೋವಿನಿಂದಲೇ ಜಿಲ್ಲಾಡಳಿತದ ಕೆಲಸಕ್ಕೆ ಸಹಕರಿಸಿದರು. ಕಾರ್ಯಾಚರಣೆಯನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ವಾರದ ಹಿಂದಷ್ಟೇ ಇದೇ ರೀತಿ ಪೊಲೀಸ್ ಬಂದೋಬಸ್ತ್‌ ನಡುವೆ ಸ್ವಲ್ಪ ದೂರದವರೆಗೆ ಚರಂಡಿ ನಿರ್ಮಾಣ ಕಾರ್ಯ ನಡೆಸಲಾಗಿತ್ತು.

ಒಡೆದ ಕಟ್ಟಡದಲ್ಲೇ ವ್ಯಾಪಾರ: ರಸ್ತೆವರೆಗೆ ಚಾಚಿಕೊಂಡಿದ್ದ ಕೆಲವು ಕಟ್ಟಡಗಳು ಸಂಪೂರ್ಣವಾಗಿ ತೆರವುಗೊಂಡರೆ, ಇನ್ನು ಹಲವು ಕಟ್ಟಡಗಳು ಅರ್ಧಭಾಗದ ಅಸ್ತಿತ್ವ ಕಳೆದುಕೊಂಡವು. ಅರೆಬರೆ ಒಡೆದ ಕಟ್ಟಡದಲ್ಲಿಯೇ ಕೆಲವರು ವ್ಯಾಪಾರ ಮುಂದುವರಿಸಿದ್ದು ವಿಶೇಷವಾಗಿತ್ತು. ಮುಂಭಾಗದ ಬಹುಪಾಲನ್ನು ಕಳೆದುಕೊಂಡ ಚಿಕ್ಕ ಹೋಟೆಲ್‌ನಲ್ಲಿ ದೂಳು ಗದ್ದಲದ ನಡುವೆಯೇ ಗ್ರಾಹಕರು ಊಟ ಮಾಡುತ್ತಿದ್ದದ್ದು ಕಂಡುಬಂತು.  ಮಾಂಸ, ಮೊಬೈಲ್‌ ಅಂಗಡಿಗಳು ಸಹ ವ್ಯಾಪಾರ ವಹಿವಾಟು ನಡೆಸಿದವು. 

ಪ್ರಯಾಣಿಕರ ಪರದಾಟ: ಕಾರ್ಯಾಚರಣೆ ನಡೆದ ಮಾರ್ಗ ಮಧ್ಯದಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ರಸ್ತೆಯ ಎರಡೂ ದಿಕ್ಕಿನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರು ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡುತ್ತಿದ್ದರು.

ಖಾಸಗಿ ಬಸ್‌ ಮತ್ತು ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದವರು ಎತ್ತ ಹೋಗಬೇಕೆಂದು ತಿಳಿಯದೆ ಕಂಗಾ ಲಾದರು. ಸತ್ಯಮಂಗಲಕ್ಕೆ ತೆರಳುವ ಮುಖ್ಯರಸ್ತೆಯಾಗಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಯಾಯಿತು. ಇದರಿಂದ ನಗರದ ಒಳಬೀದಿಗಳು ಮತ್ತು ಗುಂಡ್ಲುಪೇಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.