ADVERTISEMENT

‘ಜಾತಿ ವ್ಯವಸ್ಥೆ ಇರುವವರೆಗೂ ಶೋಷಣೆ’

ಜಾತಿ ವ್ಯವಸ್ಥೆ ಅಳಿಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:44 IST
Last Updated 22 ಏಪ್ರಿಲ್ 2017, 5:44 IST
ಉಡುಪಿ: ‘ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೆಯೋ ಅಲ್ಲಿಯ ವರೆಗೂ ಶೋಷಣೆ ನಿಲ್ಲದು. ಪ್ರತಿಯೊಬ್ಬ ರಲ್ಲಿಯೂ ಮಾನವೀಯ ಮೌಲ್ಯಗಳು ನೆಲೆಸಿದಾಗ ಮಾತ್ರ ಜಾತಿ ಅಳಿಯಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
 
ಬಾರ್ಕೂರು ಮಹಾ ಸಂಸ್ಥಾನಂ ಟ್ರಸ್ಟ್‌ ಶುಕ್ರವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅಳಿಯಕಟ್ಟು ಪರಂಪರೆಯ ಬಾರ್ಕೂರು ಸಂಸ್ಥಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
‘ನಮ್ಮ ಸ್ವಾರ್ಥಕ್ಕಾಗಿ ನಾವು ನೂರಾರು ಜಾತಿ ಮಾಡಿಕೊಂಡಿದ್ದೇವೆ, ಆದ್ದರಿಂದ ಪ್ರತಿಯೊಬ್ಬರೂ ಜಾತಿಯ ಹಣೆಪಟ್ಟಿಯೊಂದಿಗೆ ಹುಟ್ಟುತ್ತಾರೆ.
 
ಸಾಯುವವರೆಗೂ ಜಾತಿ ಹೋಗುವುದಿಲ್ಲ. ಜಾತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ದೇವಸ್ಥಾನದ ಹೊರಗೆ ಇಡುವುದು ಅಮಾನವೀಯ. ಈಗಿನ ಸಮಾಜ ಶ್ರೇಣೀಕೃತ ವ್ಯವಸ್ಥೆ ಆಗಿದೆ.
 
ನಮಗೆ ಬೇಕಾಗಿರುವುದು ಸಮತಲದ ಸಮಾ ಜವೇ ಹೊರತು ಲಂಬಾಕಾರದ ಸಮಾಜ ವ್ಯವಸ್ಥೆ ಅಲ್ಲ. ಇದಕ್ಕಾಗಿ ಜಾತಿ ವ್ಯವಸ್ಥೆ ಹೋಗಬೇಕು. ಜಾತಿ ಧರ್ಮದ ಹೆಸರಿ ನಲ್ಲಿ ಮನುಷ್ಯರನ್ನು ಒಡೆಯುವುದು ಅಧರ್ಮ’ ಎಂದು ಹೇಳಿದರು.
 
‘ಜಾತಿ ತಾರತಮ್ಯದ ವಿರುದ್ಧ ಕೇರಳ ದಲ್ಲಿ ನಾರಾಯಣ ಗುರುಗಳು ಹೊಸ ಪರಂಪರೆಯನ್ನೇ ಆರಂಭಿಸಿದರು. ಕೆಳ ವರ್ಗದವರಿಗೆ ದೇವಸ್ಥಾನದ ಪ್ರವೇಶ ನಿರಾಕರಿಸಿದವರ ವಿರುದ್ಧ ಅವರು ಪ್ರತಿ ಭಟನೆ ಮಾಡಲಿಲ್ಲ, ಹೋರಾಟ ನಡೆಸಲಿಲ್ಲ. ತಾವೇ ಸ್ವತಃ ದೇವಸ್ಥಾನ ನಿರ್ಮಾಣ ಮಾಡಿದರು.
 
ದೇವರ ದೃಷ್ಟಿ ಯಲ್ಲಿ ಮನುಷ್ಯರೆಲ್ಲ ಒಂದೇ ಆದ ಮೇಲೆ ಯಾರು ಪೂಜಿಸಿದರೂ ಒಂದೇ. ಆದರೆ, ದೇವರು ಮತ್ತು ಭಕ್ತರ ಮಧ್ಯೆ ಕಂದಕ ನಿರ್ಮಾಣ ಮಾಡಿ ಮಧ್ಯವರ್ತಿಗಳು ಬರುತ್ತಾರೆ. ಜಾತಿ ವ್ಯವಸ್ಥೆ ಹೋಗಬೇಕು ಎಂದು ಬಸವವಣ್ಣನವರು 800 ವರ್ಷ ಗಳ ಹಿಂದೆಯೇ ಹೇಳಿದರು. ಎಲ್ಲ ಜಾತಿ ಗಳನ್ನು ಒಳಗೊಂಡ ಅಂದಿನ ಅನುಭವ ಮಂಟಪವೇ ಇಂದಿನ ಲೋಕಸಭೆ ಯಾಗಿದೆ’ ಎಂದರು.
 
ಅರ್ಥವಾಗದ ಅಮರಕೋಶ: ನಾನು ದೇವಸ್ಥಾನ– ಗುರುಗಳಿಗೆ ವಿರುದ್ಧ ಇಲ್ಲ. ‘ದೇವರೆ ಒಳ್ಳೆಯದನ್ನು ಮಾಡು’ ಎಂದು ಹೇಳಲು ಸಂಸ್ಕೃತ ಕಲಿಯಬೇಕಿಲ್ಲ. ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ಶರಣರ ನುಡಿ ಎಲ್ಲರಿಗೂ ಅರ್ಥವಾಗುತ್ತದೆ. ಇನ್ನೊಬ್ಬರಿಗೆ ಕೆಡುಕು ಬಯಸದಿರುವುದೇ ಧರ್ಮ.
 
ಧರ್ಮದ ಬಗ್ಗೆ ಯಾರಾದರೂ ದೀರ್ಘವಾದ ವ್ಯಾಖ್ಯಾನ ನೀಡಲು ಬಂದರೆ ಅದನ್ನು ಕೇಳಬೇಡಿ. ನಾನು ಪ್ರಾಥಮಿಕ ತರಗತಿಗೆ ಹೋಗಲಿಲ್ಲ. ಆ ಸಮಯದಲ್ಲಿ ಜಾನಪದ ನೃತ್ಯ ಕಲಿಸುತ್ತಿದ್ದ ನಂಜೇಗೌಡ ಎಂಬುವರು ಅಮರಕೋಶವನ್ನು ಓದಿಸುತ್ತಿದ್ದರು.
 
ಆದರೆ ಈವರೆಗೂ ಅದೇನು ಎಂದು ನನಗೆ ಅರ್ಥವಾಗಿಲ್ಲ. ದಾಸರು, ಶರಣರು, ಸೂಫಿಗಳು ಸರಳ ಭಾಷೆಯಲ್ಲಿ ಧರ್ಮವೆಂದರೇನೆಂದು ತಿಳಿಸಿದ್ದಾರೆ’ ಎಂದು ಹೇಳಿದರು.
 
ಬಾರ್ಕೂರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಮಾತನಾಡಿ, ‘ಬಂಟ ಸಮು ದಾಯ ಗುರು ಪರಂಪರೆಯನ್ನು ಹೊಂದಿರಲಿಲ್ಲ. ಎರಡು ಸಾವಿರ ವರ್ಷಗಳ ನಂತರ ಈ ಸಮುದಾಯ ಸಂಘಟನೆಯ ರೂಪಕ್ಕೆ ಬಂದಿದೆ.
 
ಬಂಟರೆಲ್ಲ ಶ್ರೀಮಂತರು ಎಂದು ಹೇಳುತ್ತಾರೆ. ಆದರೆ, ಈ ಜಾತಿಯಲ್ಲಿಯೂ ಬಡವರಿದ್ದಾರೆ. ಅವರೆಲ್ಲರ ಒಳಿತಿಗಾಗಿ ಸಂಸ್ಥಾನ ಕೆಲಸ ಮಾಡಲಿದೆ. ಆರೋಗ್ಯ ಮತ್ತು ಶಿಕ್ಷಣ ನೀಡುವುದು ಮುಖ್ಯ ಉದ್ದೇಶ’ ಎಂದರು. 
 
ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ ಸುವರ್ಣ, ಉದ್ಯಮಿ ಶಶಿಕಿರಣ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಚಿನ್ನಪ್ಪಗೌಡ ಅವರಿಗೆ ರಾಜ ಭೂತಾಳ ಪಾಂಡ್ಯ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
 
ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಸಚಿವರಾದ ಪ್ರಮೋದ್ ಮಧ್ವರಾಜ್‌, ರುದ್ರಪ್ಪ ಲಮಾಣಿ, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ್‌, ಮುಖ್ಯಮಂತ್ರಿ ಅವರ ಸಂಸ ದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಶಾಸಕ ವಿನಯಕುಮಾರ್ ಸೊರಕೆ, ಶಬರಿ ಮಲೆ ಪಂದಲ ರಾಜ ವಂಶಸ್ಥ ರಾಜ ಕೇರಳ ವರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.