ADVERTISEMENT

ನಿಗದಿತ ಸಮಯಕ್ಕೆ ಕನಿಷ್ಠ ವೇತನ ನೀಡಲು ಆಗ್ರಹ

ಗ್ರಾಮ ಪಂಚಾಯ್ತಿ ಸಿಬ್ಬಂದಿಯಿಂದ ಹಾವೇರಿ ತಾಲ್ಲೂಕು ಪಂಚಾಯ್ತಿ ಎದುರು ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 10:04 IST
Last Updated 1 ಜೂನ್ 2017, 10:04 IST

ಹಾವೇರಿ: ‘ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ನಿಗದಿತ ಸಮಯಕ್ಕೆ ವೇತನ ನೀಡಬೇಕು’ ಎಂದು ಒತ್ತಾಯಿಸಿ, ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ಸಿಐಟಿಯು ಜಿಲ್ಲಾ ಘಟಕದ ನೇತೃತ್ವದಲ್ಲಿ ಇಲ್ಲಿನ ತಾಲ್ಲೂಕು ಪಂಚಾಯ್ತಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಉಪಾಧ್ಯಕ್ಷ ಬಿ.ಐ.ಈಳಗೇರ ಮಾತನಾಡಿ, ‘ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ನಿರ್ವಹಿಸುವ ಕ್ಲರ್ಕ್‌, ಬಿಲ್‌ ಕಲೆಕ್ಟರ್‌, ವಾಟರ್‌ಮನ್‌, ಸಿಪಾಯಿ ಹಾಗೂ ಕಂಪ್ಯೂಟರ್‌ ಆಪರೇಟರ್‌ಗಳಿಗೆ ನಿಗದಿತ ಸಮಯಕ್ಕೆ ವೇತನ ನೀಡದೇ ಶೋಷಣೆ ಮಾಡಲಾಗುತ್ತಿದೆ. ಇದರಿಂದ ಅವರ ಬದುಕು ಕಷ್ಟಕರವಾಗಿದೆ’ ಎಂದರು.

‘ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 15ರಿಂದ 20 ತಿಂಗಳಿನಿಂದ ವೇತನ ನೀಡಲು ಬಾಕಿ ಇದೆ. ಅಲ್ಲದೇ ಕನಿಷ್ಠ ವೇತನವನ್ನೂ ನೀಡದೇ, ₹5ರಿಂದ ₹6 ಸಾವಿರ ಮಾತ್ರ ನೀಡುತ್ತಿದ್ದಾರೆ. ಇದನ್ನೂ  ನಿಗದಿತ ಸಮಯಕ್ಕೆ ನೀಡದ ಕಾರಣ ಸಿಬ್ಬಂದಿ ಬದುಕು ಅತಂತ್ರವಾಗಿದೆ’ ಎಂದರು.

ಸಿ.ಐ.ಟಿ.ಯು ಜಿಲ್ಲಾ ಘಟಕ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ‘ಗ್ರಾಮ ಪಂಚಾಯ್ತಿಗಳ ನೌಕರರಿಗೆ  ನಿಗದಿತ ಸಮಯಕ್ಕೆ ವೇತನ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬೇಜವ್ದಾರಿ ತೋರುತ್ತಿದ್ದಾರೆ’ ಎಂದರು.

‘ತಾಲ್ಲೂಕಿನ ಗ್ರಾಮ ಪಂಚಾಯ್ತಿ ಸಿಬ್ಬಂದಿ ಬಾಕಿ ವೇತನವನ್ನು ತಕ್ಷಣವೇ ನೀಡಬೇಕು, ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶದಂತೆ ಕ್ಲರ್ಕ್‌ಗೆ ₹13,167, ವಾಟರ್‌ಮನ್‌ಗೆ ₹11,265, ಸಿಪಾಯಿಗೆ ₹10,765 ಹಾಗೂ  ಬಿಲ್‌ ಕಲೆಕ್ಟರ್‌ಗೆ ₹13,200 ಪ್ರತಿ ತಿಂಗಳು ನೀಡಬೇಕು. ಜನಶ್ರೀ ವಿಮಾ ಯೋಜನೆ ಕಲ್ಪಿಸಬೇಕು. ಅನು ಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು’ ಎಂದರು.

ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಆರ್‌. ಪಾಟೀಲ, ‘ಈ ಸಮಸ್ಯೆಗಳ ಬಗ್ಗೆ ಜೂನ್‌ 9ರಂದು ತಾಲ್ಲೂಕು ಪಂಚಾಯ್ತಿಯಲ್ಲಿ ಸಭೆ ಕರೆದು ಚರ್ಚಿಸಲಾಗುವುದು’ ಎಂದರು.

ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿ.ಕೆ.ಬಾಳಿಕಾಯಿ, ಅಧ್ಯಕ್ಷ ನಾರಾಯಣ ಕಾಳೆ, ಪರಶುರಾಮ ಪುರದ, ಅಬ್ದುಲ್‌ ಗುತ್ತಲ, ಗುಡ್ಡಪ್ಪ ರಾಮಣ್ಣನವರ, ಪುಷ್ಪಾ ಬಿ, ಎಂ.ಬಿ.ಕೊಲ್ಲಾಪುರಿ, ಗದಿಗೆಪ್ಪ ಮೇಲ್ಮುರಿ ಹಾಗೂ ಪರಮೇಶ್ವರ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT