ADVERTISEMENT

ಬಾರದ ಮಳೆ: ಕಳೆಗುಂದಿದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:58 IST
Last Updated 19 ಜುಲೈ 2017, 6:58 IST
ನೀರಿಲ್ಲದೆ ಬಣಡುತ್ತಿರುವ ಲಕ್ಷ್ಮೇಶ್ವರ ಸಮೀಪದ ಬಸಾಪುರ ಕೆರೆ ಅಂಗಳ
ನೀರಿಲ್ಲದೆ ಬಣಡುತ್ತಿರುವ ಲಕ್ಷ್ಮೇಶ್ವರ ಸಮೀಪದ ಬಸಾಪುರ ಕೆರೆ ಅಂಗಳ   

ಲಕ್ಷ್ಮೇಶ್ವರ:  ವೇಳೆಗೆ ಸರಿಯಾಗಿ ಮಳೆ  ಆಗಿದ್ದರೆ ಇಷ್ಟೊತ್ತಿಗಾಗಲೇ ತಾಲ್ಲೂಕಿನ ಎಲ್ಲ ಕೆರೆಗಳು ನೀರಿನಿಂದ ಕಂಗೊಳಿಸು ತ್ತಿದ್ದವು. ಆದರೆ ಮಳೆರಾಯನ ಅವಕೃಪೆ ಯಿಂದಾಗಿ ಸದ್ಯ ಮಾಗಡಿ ಕೆರೆಯನ್ನು ಹೊರತುಪಡಿಸಿದರೆ ಇನ್ನಿತರ ಯಾವ ಕೆರೆಗಳಲ್ಲೂ ನೀರಿಲ್ಲದೆ ಬಣಗುಡುತ್ತಿದ್ದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಭಯ ಈಗಾಗಲೇ ಜನ ರನ್ನು ಕಾಡಲು ಆರಂಭಿಸಿದೆ.

ಮಜ್ಜೂರು, ಶೆಟ್ಟಿಕೇರಿ, ಲಕ್ಷ್ಮೇಶ್ವರ, ಬಾಲೆಹೊಸೂರು, ಸೂರಣಗಿ, ಬಸಾ ಪುರ, ರಾಮಗಿರಿ ಸೇರಿ ಇನ್ನಿತರ ಊರು ಗಳಲ್ಲಿನ ದೊಡ್ಡ ದೊಡ್ಡ ಕೆರೆಗಳು ಈಗಲೂ ಖಾಲಿ ಇದ್ದು ಬರದ ಭೀಕರತೆಯನ್ನು ಸಾರುತ್ತಿವೆ. ಕಳೆದ ವರ್ಷವೂ ಸಹ ಮಳೆಕಣ್ಣಾಮುಚ್ಚಾಲೆಯಿಂದಾಗಿ ಕೆರೆಕಟ್ಟೆ ಗಳು ತುಂಬದೆ ಜನತೆ ನೀರಿನ ಬವಣೆ ಅನುಭವಿಸಿದ್ದಾರೆ. ಈ ವರ್ಷವೂ ಸಹ ಅದೇ ಪರಿಸ್ಥಿತಿ ಮುಂದುವರೆದಿದ್ದು ಜನರಲ್ಲಿ ಭಯ ಮೂಡಿಸಿದೆ. ಲಕ್ಷ್ಮೇಶ್ವರ ಸಮೀಪದ ಬಸಾಪುರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಮೂಲವಾಗಿದ್ದ ಕೆರೆ ಅಂಗಳ ಖಾಲಿ ಇದ್ದು ಗ್ರಾಮಸ್ಥರಲ್ಲಿ ಚಿಂತೆ ಮೂಡಿಸಿದೆ.

‘ಮುಂಗಾರು ಮಳೆಗೆ ನಮ್ಮೂರ ಕೆರಿ ತುಂಬಬೇಕಾಗಿತ್ತು. ಆದರ ಈ ವರ್ಷಾ ಮಳಿ ಆಗಿಲ್ಲ. ಹಿಂಗಾಗಿ ಬ್ಯಾಸಿಗಿಗೆ ಜೀವನಾ ಮಾಡದ ಹೆಂಗಪಾ ಅನ್ನ ಚಿಂತಿ ಈಗ ನಮ್ಮನ್ನ ಕಾಡಾಕತ್ತೈತಿ’ ಎಂದು ಬಸಾಪುರ ಗ್ರಾಮದ ಮಂಜಯ್ಯ ಪೂಜಾರ, ಮಾಂತೇಶ ಜಾವೂರ ಅವರು ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ. ಇದೇ ರೀತಿ ಎಲ್ಲ ಕೆರೆಗಳ ಒಡಲು ಬರಿದಾಗಿದ್ದು ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಗೋಚರಿಸುತ್ತಿದೆ.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಜಾನುವಾರುಗಳ ಕುಡಿಯುವ ನೀರಿಗೆ ಕೆರೆಗಳನ್ನೇ ಅವಲಂಬಿಸಿದ್ದಾರೆ. ಆದರೆ ಒಣಗಿ ನಿಂತಿರುವ ಕೆರೆಗಳನ್ನು ಕಂಡಾಗ ಅವರಿಗೆ ಸಂಕಟ ಆಗುತ್ತಿದೆ. ಇಷ್ಟೊತ್ತಿಗೆ ತುಂಬಿದ ಕೆರೆಗಳಲ್ಲಿ ಬಾನಾಡಿಗಳು ಖುಷಿಯಿಂದ ಗೀಳುಡುತ್ತಿದ್ದವು. ಆದರೆ ಒಣ ಕೆರೆಯನ್ನು ಕಂಡು ಅವೂ ಸಹ ಗೋಳಾಡುವಂಥ ಪರಿಸ್ಥಿತಿ ಉದ್ಭವಿಸಿದೆ. ‘ಮುಂದಿನ ದಿನಗಳಲ್ಲಾದರೂ ಉತ್ತಮ ಮಳೆ ಆಗಿ ನಮ್ಮೂರು ತುಂಬೀತು’ ಎಂದು ಜನರು ಮಳೆರಾಯನನ್ನು ಎದುರು ನೋಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.