ADVERTISEMENT

ಬಿಲ್ಲೇನಹಳ್ಳಿಯಲ್ಲಿ ಗುಂಪು ಘರ್ಷಣೆ: ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:11 IST
Last Updated 5 ಅಕ್ಟೋಬರ್ 2017, 9:11 IST

ಕೆ.ಆರ್.ಪೇಟೆ: ತಾಲ್ಲೂಕಿನ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಗುಂಪು ಘರ್ಷಣೆಯಿಂದ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಭದ್ರತೆಯ ದೃಷ್ಟಿಯಿಂದ ಬುಧವಾರ ಸಂಜೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಗ್ರಾಮದ ಕೆರೆ ತುಂಬಿದ್ದರಿಂದಾಗಿ ಗವಿರಂಗನಾಥ ಕ್ಷೇತ್ರದಲ್ಲಿರುವ ಕೆರೆಗೆ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸುವ ಕಾರ್ಯಕ್ರಮ ಬುಧವಾರ ಇತ್ತು. ಶಾಸಕ ನಾರಾಯಣಗೌಡ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ, ಜೆಡಿಎಸ್‌ನಿಂದ ಗೆದ್ದಿರುವ ಸಂತೇಬಾಚಹಳ್ಳಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎನ್.ದಿನೇಶ್ ಭಾಗವಹಿಸದೆ ಪ್ರತ್ಯೇಕವಾಗಿ ಪೂಜೆ ಸಲ್ಲಿಸಿದರು. ಶಾಸಕ ನಾರಾಯಣಗೌಡ ಪಾಲ್ಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿಲ್ಲ. ಕಾಂಗ್ರೆಸ್ಸಿನ ತಾ.ಪಂ. ಮಾಜಿ ಸದಸ್ಯ ಬಿ.ಆರ್.ಕುಮಾರ್ ಶಾಸಕರೊಂದಿಗೆ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಗ್ರಾಮಸ್ಥರೊಂದಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಘಟನೆಯಿಂದ ಗವಿರಂಗನಾಥ ಕ್ಷೇತ್ರ ಹಾಗೂ ಬಿಲ್ಲೇನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಗುಂಪನ್ನು ಚದುರಿಸಿ ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಹಲವರಿಗೆ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್ಪಿ ಚಂದ್ರಶೇಖರ್, ಹಾಗೂ ಸಿಪಿಐ ವೆಂಕಟೇಶಯ್ಯ, ಎಸ್ಐ ಅರುಣ್‌ಕುಮಾರ್, ಗಿರೀಶ್ ಭೇಟಿ ನೀಡಿ ಶಾಂತಿ ಕಾಪಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.