ADVERTISEMENT

ಬಿಸಿಯೂಟ ಸಿಬ್ಬಂದಿ, ಮುಖ್ಯಶಿಕ್ಷಕ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 5:38 IST
Last Updated 23 ಡಿಸೆಂಬರ್ 2016, 5:38 IST

ವಾಡಿ: ಬಿಸಿಯೂಟ ಮೇಲ್ವಿಚಾರಕಿ ಹಾಗೂ ಮುಖ್ಯಶಿಕ್ಷಕರ ನಡುವೆ ಕ್ಷುಲ್ಲಕ ವಿಷಯಕ್ಕೆ ಕಿತ್ತಾಟ ನಡೆದು ಪರಸ್ಪರ ಹಲ್ಲೆ ಮಾಡಿದ ಘಟನೆ ಸಮೀಪದ ಲಾಡ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಬಿಸಿಯೂಟ ಸಿಬ್ಬಂದಿಗಳ ವೇತನಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ ಬಾಬುರಾವ್ ಚವ್ಹಾಣ ಹಾಗೂ ಅಡುಗೆ ಮೇಲ್ವಿಚಾರಕಿ ದೇವಕಿ ನರಿಭೋಳ ನಡುವೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಶಾಲೆಗೆ ಬಂದ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಗೆ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ಅಡುಗೆ ಮೇಲ್ವೀಚಾರಕಿ ಸಂಬಂಧಿ ಕರು ಮುಖ್ಯಶಿಕ್ಷಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೆ ಮುಂದಾದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಶಿಕ್ಷಕರು ಮುಖ್ಯ ಶಿಕ್ಷಕ ಅವರನ್ನು ಶಾಲಾ ಕಚೇರಿಯಲ್ಲಿ ಕೂರಿಸಿ ಬೀಗ ಹಾಕಿದರು. ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ ತೇಲ್ಕರ್, ಗ್ರಾಪಂ ಅಧ್ಯಕ್ಷ ಈರಣ್ಣಾ ಮಲಕಂಡಿ, ನಾಲವಾರ ವಲಯ ಶಿಕ್ಷಣ ಸಂಯೋಜಕ ಸಿದ್ದರಾಮ್ ಹಳ್ಳಿ, ಸಿಆರ್‌ಪಿ ತಂಬೂರಿ ಭೇಟಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಮಾತನಾಡಿ, ‘ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ. ಹುದ್ದೆಗೆ ಕಳಂಕ ತಂದುಕೊಳ್ಳಬೇಡಿ. ಕಿತ್ತಾಟ ಮತ್ತು ಸಮನ್ವಯದ ಕೊರತೆಯಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು ಬಿಸಿಯೂಟದಿಂದ ವಂಚಿತರಾಗುತ್ತಾರೆ ಎಂದರು.

ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ವಾಡಿ ಠಾಣೆ ಎಎಸ್ಐ ಮನೋಹರ ಭಯ್ಯಾ ಹಾಗೂ ದತ್ತು ಜಾನೆ ಗಲಾಟೆ ಪರಿಸ್ಥಿತಿ ನಿಭಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT