ADVERTISEMENT

ವಿದ್ಯುತ್‌ ನೀಡದ ಹೆಸ್ಕಾಂ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಮೇ 2017, 7:05 IST
Last Updated 18 ಮೇ 2017, 7:05 IST

ಗೋಕಾಕ: ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಬುಧವಾರ ಕರೆಯಲಾಗಿದ್ದ  ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೃಷಿಕ ಬಾಂಧವರ ಕುಂದು–ಕೊರತೆಗಳ ಸಭೆ ಜರುಗಿತು.

ಸಭೆಯಲ್ಲಿ ಕೃಷಿಕರು ಎದುರಿಸು ತ್ತಿರುವ ಸಮಸ್ಯೆಗಳ ಮಹಾಪೂರವೇ ಅಧಿಕಾರಿಗಳ ಮುಂದೆ ಹರಿದು ಬಂತು.

ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಕೃಷಿಕ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯ ವೈಖರಿಗೆ ತಾಲ್ಲೂಕಿನ ಬಹುತೇಕ ಕೃಷಿಕರು ಬೇಸತ್ತಿದ್ದು, ಅದರಲ್ಲೇ ಪ್ರಮುಖವಾಗಿ ಹೆಸ್ಕಾಂ ರಾತ್ರಿ ಸಮಯ ದಲ್ಲೂ ವಿದ್ಯುತ್‌ ನೀಡದೇ ಕೃಷಿಕರನ್ನು ಪೀಡಿಸುತ್ತಿದೆ ಎಂದು ಹರಿಹಾಯ್ದರು.

ADVERTISEMENT

ವಿದ್ಯುತ್‌ ಪರಿವರ್ತಕಗಳು ಸುಟ್ಟು ಸಾಕಷ್ಟು ದಿನಗಳು ಕಳೆದರೂ ಹೆಸ್ಕಾಂನ ಯಾವ ಅಧಿಕಾರಿಯೂ ಅತ್ತ ಸುಳಿಯು ತ್ತಿಲ್ಲ. ತಮ್ಮ ಕೈಚಳಕವನ್ನು ತೀರುತ್ತಿದ್ದಾರೆ. ಮೊದಲೇ ಬರದಿಂದ ಕಂಗೆಟ್ಟಿರುವ ಕೃಷಿಕ ಇವರಿಗೆ ನೀಡಲು ದುಡ್ಡು ಎಲ್ಲಿಂದ ತರಬೇಕು ಎಂದು ಯಾವೊಬ್ಬ ಅಧಿಕಾರಿ ಹೆಸರನ್ನು ಬಹಿರಂಗಪಡಿಸದೇ ಆಪಾದಿಸಿದರು.

ನೀರಾವರಿ ಇಲಾಖೆಯ ಕಾಲುವೆ ಮೂಲಕ ಹರಿಯುತ್ತಿರುವ ನೀರು ಕೊನೆ ಹಂತ ತಲುಪುತ್ತದೆಯೋ ಹೇಗೆ ಎಂದು  ಅಧಿಕಾರಿಗಳು ನಿಗಾ ವಹಿಸುವುದಿಲ್ಲ. ಇದೊಂದು ರೀತಿಯ ಸಮಸ್ಯೆಯಾದರೆ, ಕಾಲುವೆಗಳು ಹಾಳಾಗಿರುವುದು ಇನ್ನೊಂದು ರೀತಿಯ ಸಮಸ್ಯೆ ಎಂದು ರೈತ ಪ್ರತಿನಿಧಿಗಳು ದೂರಿದರು.

ಇಷ್ಟಕ್ಕೇ ತಮ್ಮ ಆರೋಪಗಳ ಸುರಿಮಳೆಯನ್ನು ನಿಲ್ಲಿಸದ ರೈತ ಮುಖಂಡರು, ಹಲವು ಇಲಾಖೆಗಳ ಅಧಿಕಾರಿಗಳು  ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಸ್ಥಳೀಯ ಶಾಸಕರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರದಲ್ಲಿ ನಿರತರಾಗಿದ್ದಾರೆ ಎಂದು ಆಪಾದಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯ ಬೆಲೆ ಅಂಗಡಿಗಳು ‘ಅನ್ಯಾಯ ಬೆಲೆ’ ಅಂಗಡಿ ಗಳಾಗಿದ್ದು ಆಹಾರ ಮತ್ತು ನಾಗರ ಪೂರೈಕೆ ಇಲಾಖೆ ಅಧಿಕಾರಿಗಳು ತುಸು ಎಚ್ಚೆತ್ತು ಕಾರ್ಯ ನಿರ್ವಹಿಸಲಿ’ ಎಂದು ಮುಖಂಡರು ಗುಡುಗಿದರು.

ಪಂಚಾಯತ್‌ ರಾಜ್‌ ಇಲಾಖೆ ಏನು ಆರೋಪಗಳಿಗೆ ಹೊರತಾಗಿಲ್ಲ, ಗ್ರಾಮ ಗಳಲ್ಲಿ ನಿರ್ಮಿಸಿರುವ ಶೌಚಾಲಯಗಳ ಸಹಾಯಧನ, ಕೃಷಿಹೊಂಡ ನಿರ್ಮಿಸಿ ಕೊಂಡವರಿಗೆ ಪರಿಹಾರಧನ, ದನಗಳ ವಾಸಕ್ಕೆ ನಿರ್ಮಿಸಿಕೊಂಡ ಶೆಡ್‌ ಹಾಗೂ ವಸತಿ ಯೋಜನೆ ಅಡಿ ಮಂಜೂರಾಗಿ ರುವ ಮನೆಗಳ ಬಿಲ್ಲನ್ನು ಪಾವತಿಸಲು ಪಿಡಿಓಗಳು ಮೀನ ಮೇಷ ನಡೆಸುತ್ತಿ ರುವುದು ಏಕೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಗರ್ಜಿಸಿದರು.

ಗ್ರಾಮ ಸಭೆಗಳಲ್ಲಿ ಏನು ನಡೆಯು ತ್ತಿದೆ ಎಂಬುದನ್ನು ಉನ್ನತ ಮಟ್ಟದ ಅಧಿಕಾರಿಗಳು ಅರಿಯಲು ಗ್ರಾಮಸಭೆ ಗಳ ನಡಾವಳಿಗಳ ವೀಡಿಯೊ ಚಿತ್ರೀಕರಣ ಮಾಡುವಂತೆಯೂ ಸಭೆಯನ್ನು ಕೃಷಿಕ ಮುಖಂಡರು ಒತ್ತಾಯಿಸಿದರು.

ಪ್ರಸ್ತುತ ಸಭೆಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೂ ಹಾಜರಾಗದ ಬಗ್ಗೆ ರೈತ ಮುಖಂಡರು ಪ್ರಶ್ನಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಮಳಲಿ, ತಾಲ್ಲೂಕು ಘಟಕ ಅಧ್ಯಕ್ಷ ಭೀಮಶಿ ಗದಾಡಿ, ಹಸಿರು ಸೇನೆ ಜಿಲ್ಲಾ ಮುಖಂಡ ಗಣಪತಿ ಈಳಿಗೇರ, ಚೂನಪ್ಪ ಪೂಜೇರಿ ಮಾತನಾಡಿದರು.

ತಹಶೀಲ್ದಾರ್ ಜಿ.ಎಸ್.ಮಳಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಫ್‌.ಜಿ. ಚಿನ್ನನವರ, ತೋಟ ಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್‌. ಜನ್ಮಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎ.ಡಿ.ಸವದತ್ತಿ ಸಭೆಯಲ್ಲಿ ಉಪಸ್ಥಿತರಿದ್ದರು.

**

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿ ಕಾರ್ಯ ನಿರ್ವಹಿಸಬೇಕು.
-ಜಿ.ಎಸ್‌. ಮಳಗಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.