ADVERTISEMENT

ಸಿಂದಗಿಯಲ್ಲಿ ನೀರಿಗಾಗಿ ಹಾಹಾಕಾರ

ಟ್ಯಾಂಕರ್ ನೀರು ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:36 IST
Last Updated 20 ಜುಲೈ 2017, 9:36 IST
ಸಿಂದಗಿ ನಗರದ 10ನೇ ವಾರ್ಡ್ ನಿವಾಸಿಗಳಿಗೆ ಶಾಂತೇಶ್ವರ ರಸ್ತೆಯಲ್ಲಿನ ವರ್ತಕ ಚಂದ್ರಶೇಖರ ನಾಗೂರ ತಮ್ಮ  ಒಡೆತನದ ಕೊಳವೆಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದಾರೆ
ಸಿಂದಗಿ ನಗರದ 10ನೇ ವಾರ್ಡ್ ನಿವಾಸಿಗಳಿಗೆ ಶಾಂತೇಶ್ವರ ರಸ್ತೆಯಲ್ಲಿನ ವರ್ತಕ ಚಂದ್ರಶೇಖರ ನಾಗೂರ ತಮ್ಮ ಒಡೆತನದ ಕೊಳವೆಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದಾರೆ   

ಸಿಂದಗಿ:  ನಗರಕ್ಕೆ ನೀರು ಪೂರೈಸುವ ಶಾಶ್ವತ ಕುಡಿಯುವ ನೀರು ಯೋಜನೆಯ ಕೆರೆ ಬರಿದಾಗಿದೆ. ಹೀಗಾಗಿ ನಗರದಲ್ಲಿ ಕೆರೆಯ ನೀರು ಅವಲಂಬಿಸಿರುವ ಬಹುತೇಕ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಎಡದಂಡೆ ಕಾಲುವೆಗೆ ನೀರು ಹರಿಸಿದಾಗಲೇ ಸಿಂದಗಿ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ.
ಆದರೆ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಜನತೆ ಆತಂಕಕೊಳಗಾಗಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಲಿಲ್ಲ. ಆದರೆ ಮಳೆಗಾಲದಲ್ಲಿಯೇ ನೀರಿಲ್ಲದಂತಾಗಿದೆ.

ಜನರು ನೀರಿದ್ದಲ್ಲಿಗೆ ಕೊಡಗಳನ್ನು ತೆಗೆದುಕೊಂಡು ಹೋಗಿ ಹೊತ್ತು ನೀರು ತರುವ ದುಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ಕುರಿತಾಗಿ ಪುರಸಭೆ ಮುಖ್ಯಾಧಿಕಾರಿಯನ್ನು ಸಂಪರ್ಕಿಸಲು ಅವರ ಮೊಬೈಲ್‌ಫೋನ್ ಸ್ವಿಚ್‌ ಆಫ್‌ ಆಗಿತ್ತು.

ADVERTISEMENT

ಆದರೆ ಪುರಸಭೆ ಅಧ್ಯಕ್ಷ ಬಾಷಾಸಾಬ್‌ ತಾಂಬೋಳಿ ‘ಪ್ರಜಾವಾಣಿ’ ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ‘ಟ್ಯಾಂಕರ್‌ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿ ಕಚೇರಿ ಯಿಂದ ಅನುಮತಿ ಪಡೆಯಲಾಗಿದೆ’ ಎಂದರು.

‘ಟ್ಯಾಂಕರ್ ಗಳನ್ನು ಆಯಾ ವಾರ್ಡುಗಳಲ್ಲಿ ನಿಲ್ಲಿಸಿ ನೀರು ಸರಬರಾಜು ಮಾಡುವುದು ಸಮರ್ಪಕ ಆಗುವದಿಲ್ಲ. ಹೀಗಾಗಿ ಪ್ರತಿದಿನ 80 ಟ್ಯಾಂಕರ್ ನೀರನ್ನು ನಗರಕ್ಕೆ ನೀರು ಸರಬರಾಜು ಮಾಡುವ ಜಲಶುದ್ಧೀಕರಣ ಘಟಕದ ಟ್ಯಾಂಕುಗಳಿಗೆ ನೀರು ತುಂಬಿ ಅಲ್ಲಿಂದ ನಳಗಳ ಮೂಲಕ ಮನೆ, ಮನೆಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ’ ಎಂದರು.

‘ವಾರ್ಡ್ 10ರ ಸದಸ್ಯೆ ಮಹಾದೇವಿ ಬಿರಾದಾರ  ಪುರಸಭೆ ಉಪಾಧ್ಯಕ್ಷ ರಾಗಿದ್ದರೂ ತಮ್ಮ ವಾರ್ಡ್ ನಿವಾಸಿಗಳು ನೀರಿಗಾಗಿ ಬಾಯಿ ಬಿಡುತ್ತಿದ್ದರೂ ಅವರೇನು ಇತ್ತ ಸುಳಿದಿಲ್ಲ’ ಎಂದು ವಾರ್ಡ್‌ ನಿವಾಸಿ ಸಿದ್ಧಲಿಂಗ ಪತ್ತಾರ ಆಕ್ರೋಶ ವ್ಯಕ್ತಪಡಿಸಿದರು.

10ನೇ ವಾರ್ಡ್ ನಿವಾಸಿ ವರ್ತಕ ಚಂದ್ರಶೇಖರ ನಾಗೂರ ತಮ್ಮ ಒಡೆತನ ಕೊಳವೆಬಾವಿಯಿಂದ ಪ್ರತಿದಿನ ಮುಂಜಾನೆ ಮತ್ತು ಸಂಜೆ ನೀರು ಸರಬರಾಜು ಮಾಡುತ್ತಿರುವ ಮಾನವೀಯ ಸೇವಾ ಕಾರ್ಯದ ಬಗ್ಗೆ ನಿವಾಸಿಗಳು ಹೊಗಳಿದರು. 

ಶಾಂತೂ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.