ADVERTISEMENT

ಸೆಪ್ಟೆಂಬರ್‌ 23ರಂದು ರೈತರ ಬಹಿರಂಗ ಸಭೆ

ರೈತರ ಹಕ್ಕುಗಳಿಗೆ ಒತ್ತಾಯಿಸಿ ದೇಶವ್ಯಾಪ್ತಿ ಕೈಗೊಂಡಿರುವ ’ರೈತ ಮುಕ್ತಿ ಜಾಥಾ’ ಜಿಲ್ಲೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 4:04 IST
Last Updated 22 ಸೆಪ್ಟೆಂಬರ್ 2017, 4:04 IST
ಸೆಪ್ಟೆಂಬರ್‌ 23ರಂದು ರೈತರ ಬಹಿರಂಗ ಸಭೆ
ಸೆಪ್ಟೆಂಬರ್‌ 23ರಂದು ರೈತರ ಬಹಿರಂಗ ಸಭೆ   

ತುಮಕೂರು: ರೈತರ ಸಾಲ ಮನ್ನಾ ಸೇರಿದಂತೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ದೇಶವ್ಯಾಪ್ತಿ ಕೈಗೊಂಡಿರುವ ’ರೈತ ಮುಕ್ತಿ ಜಾಥಾ’ ಶನಿವಾರ (ಸೆ.23) ನಗರಕ್ಕೆ ಬರಲಿದೆ ಎಂದು ಗ್ರಾಮ ಸೇವಾ ಸಂಘದ ಜಿಲ್ಲಾ ಸಂಚಾಲಕ ಸಿ.ಯತಿರಾಜು ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರೈತ ಮುಕ್ತಿ ಜಾಥಾ ದೇಶ ವ್ಯಾಪ್ತಿ ಸಂಚರಿಸಿ ಇದೀಗ ದಕ್ಷಿಣ ಭಾರತದ ತೆಲಂಗಾಣದ ಮೂಲಕ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಸಂಚರಿಸಿದ್ದು, ಸೆ.22ರಂದು ಕರ್ನಾಟಕ್ಕೆ ಬರಲಿದೆ’ ಎಂದರು.

ಸೆ.23ರಂದು ಬೆಳಿಗ್ಗೆ 10.30ಕ್ಕೆ ಟೌನ್‌ಹಾಲ್‌ ವೃತ್ತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ರೈತರ ಬಹಿರಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯ ರಾಷ್ಟ್ರ ನಾಯಕ ಯೋಗೇಂದ್ರ ಯಾದವ್‌, ಡಾ.ವಿಜು ಕೃಷ್ಣನ್‌, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್‌ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ರೈತರ ಹೋರಾಟ ದೇಶದಾದ್ಯಂತ ವ್ಯಾಪಕವಾಗಿದೆ. ಮಹಾರಾಷ್ಟ್ರ, ತಮಿಳನಾಡು, ಪಂಜಾಬ್ ಮತ್ತು ಮಧ್ಯ ಪ್ರದೇಶ ಸೇರಿದಂತೆ ವಿವಿಧೆಡೆ ರೈತ ಸಂಘಟನೆಗಳು ಬಿಡಿ ಬಿಡಿಯಾಗಿ ಹೋರಾಟ ಮಾಡಲಾಗುತ್ತಿದೆ. ಈ ರೀತಿಯ ಹೋರಾಟದಿಂದ ರೈತರ ಬೇಡಿಕೆ ಈಡೇರುವುದಿಲ್ಲ ಎಂದು ಅಖಿಲ ಭಾರತ ಮಟ್ಟದಲ್ಲಿ 170ಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಿಗೆ ಸೇರಿ ದೇಶವ್ಯಾಪ್ತಿ ಜಾಥಾ ನಡೆಸಲಾಗುತ್ತಿದೆ ಎಂದರು.

ರೈತರನ್ನು ಕಡೆಗಣಿಸಿರುವ ಸರ್ಕಾರಗಳ  ವಿರುದ್ಧ ವ್ಯಾಪಾಕವಾದ ಹೋರಾಟ ರೂಪಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ. ಎಲ್ಲ ರೈತರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್‌ ಮಾತನಾಡಿ, ’ಕೇಂದ್ರ ಸರ್ಕಾರ ರೈತರ ಪರವಾಗಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತ ವಿರೋಧಿಯಾಗಿದೆ’ ಎಂದು ದೂರಿದರು.

ತಮಿಳುನಾಡು ರೈತರು ಕೇಂದ್ರ ಸರ್ಕಾರದ ವಿರುದ್ಧ ಬೆತ್ತಲೆ ಪ್ರತಿಭಟನೆ  ಮಾಡಿದರೂ ಸಹ ಸಮಸ್ಯೆಗೆ ಸ್ಪಂದಿಸಲಿಲ್ಲ. ಜತೆಗೆ ಯಾವ ರಾಜಕಾರಣಿಯು ಸಹ ಅಲ್ಲಿಗೆ ಸುಳಿಯಲಿಲ್ಲ. ಹೋರಾಟ ಮಾಡುವ ರೈತರನ್ನು ಹತ್ತಿಕ್ಕುವ ಮನೋಭಾವವನ್ನು ಸರ್ಕಾರ ರೂಢಿಸಿಕೊಂಡಿದೆ ಎಂದರು.

ಬಿಡಿ ಬಿಡಿಯಾಗಿ, ಹೋಬಳಿ, ತಾಲ್ಲೂಕು, ಜಿಲ್ಲಾವಾರು ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಅರಿತು, ದೇಶ ವ್ಯಾಪ್ತಿ ಎಲ್ಲ ರೈತ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಮಟ್ಟದಲ್ಲಿ ಜಾಥಾ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಗೌರವಧ್ಯಕ್ಷ ಧನಂಜಯರಾಧ್ಯ ಮಾತನಾಡಿ, ’ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರ ನೇರ ಹೊಣೆಯಾಗಿದೆ. ಸರ್ಕಾರಗಳು ಜಾರಿಗೆ ತರುತ್ತಿರುವ ಅವೈಜ್ಞಾನಿಕ ನೀತಿಗಳಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ, ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ’ ಎಂದು ದೂರಿದರು.

ರೈತ ಕಾರ್ಮಿಕ ಸಂಘದ ಸ್ವಾಮಿ, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನಮ್ಮ, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಕೀರ್ತಿ, ನಂಜಪ್ಪ, ಗೋವಿಂದಪ್ಪ ಇದ್ದರು.

**

ರೈತರ ಮೇಲಿನ ಎಫ್ಐಆರ್‌ ಹಿಂಪಡೆಯಿರಿ

ಹೇಮಾವತಿ ನೀರಿನ ವಿಚಾರವಾಗಿ ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದ ರೈತರ ಮೇಲೆ ಹಾಕಿರುವ ಎಫ್‌ಐಆರ್‌ ಅನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ವ್ಯಾಪಕವಾದ ಉಗ್ರ ಹೋರಾಟ ಮಾಡಲಾಗುವುದು ಎಂದು ಆನಂದ ಪಟೇಲ್‌ ಎಚ್ಚರಿಸಿದರು.

‘ರೈತರು ಮಾಡಿರುವ ತಪ್ಪಾದರೂ ಏನು. ನೀರು ಕೇಳುವುದು ನಮ್ಮ  ಹಕ್ಕು. ರೈತರಿಗೆ ರಕ್ಷಣೆ ನೀಡಬೇಕಾದ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ದೌರ್ಜನ್ಯ ಎಸಗಿದೆ’ ಎಂದು ಕಿಡಿಕಾರಿದರು.

**

ಬಹಿರಂಗ ಸಭೆಯಲ್ಲಿ ರೈತರ ಸಾಲಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆ ನಿಗದಿ ಜಾರಿಗೆ ಒತ್ತಾಯಿಸಿ ನ.20ರಂದು ನವದೆಹಲಿಯಲ್ಲಿ ನಡೆಯಲಿರುವ ಕಿಸಾನ್‌ ಮುಕ್ತಿ ಸಂಸತ್‌ ಕಾರ್ಯಕ್ರಮ ಯಶಸ್ವಿಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು.

ಸಿ.ಯತಿರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.