ADVERTISEMENT

ಗದುಗಿನಲ್ಲಿ ಕಾವೇರಿದ ಪ್ರತಿಭಟನೆ; ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 8:45 IST
Last Updated 13 ಜನವರಿ 2018, 8:45 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ಅವರ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ಅವರ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು   

ಗದಗ: ‘ಆರ್‌ಎಸ್‌ಎಸ್‌, ಬಜರಂಗದಳದವರು ಉಗ್ರಗಾಮಿಗಳು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಖಂಡಿಸಿ, ಬಿಜೆಪಿ ಜಿಲ್ಲಾ ಘಟಕವು ಶುಕ್ರವಾರ ನಗರದಲ್ಲಿ ಜೈಲ್‌ ಭರೋ ಚಳವಳಿ ನಡೆಸಿ, ಪ್ರತಿಭಟನೆ ನಡೆಸಿತು.

ಕಾರ್ಯಕರ್ತರು ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್‌ ಮತ್ತು ಬಜರಂಗದಳ ನಿಷೇಧಿಸಬೇಕೆಂದು ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧವೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಸದಸ್ಯರು, 'ಜನ ವಿರೋಧಿ, ಭ್ರಷ್ಟ ಕಾಂಗ್ರೆಸ್‌ಗೆ ಧಿಕ್ಕಾರ, ಬಿಜೆಪಿ ಕಾರ್ಯಕರ್ತರ ಕೊಲೆಗಳ ರೂವಾರಿ, ಧರ್ಮ ಒಡೆಯುವ ಮುಖ್ಯಮಂತ್ರಿಗೆ ಧಿಕ್ಕಾರ' ಎಂದು ಘೋಷಣೆಗಳನ್ನು ಕೂಗಿದರು.

ನಂತರ ಕೆಲವು ಕಾರ್ಯಕರ್ತರು ರಸ್ತೆಗೆ ಅಡ್ಡವಾಗಿ ಮಲಗಿ ಪ್ರತಿಭಟಿಸಿದರು. ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ಸಂಚಾರ ಸ್ಥಗಿತಗೊಳಿಸಿದರು. ಪ್ರತಿಭಟನೆಯಿಂದ ವಾಹನಗಳ ದಟ್ಟಣೆ ಹೆಚ್ಚಿ, ಸವಾರರು, ಸಾರ್ವಜನಿಕರು ಪರದಾಡಿದರು. ‘ನಾವು ಬಿಜೆಪಿಯವರು, ಆರ್‍ಎಸ್‍ಎಸ್‌, ಬಜರಂಗದಳದವರು. ಧೈರ್ಯವಿದ್ದರೆ ನಮ್ಮನ್ನು ಬಂಧಿಸಿ, ಗುಂಡು ಹಾಕಿ’ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಸವಾಲು ಹಾಕಿದರು.

ADVERTISEMENT

‘ಆರ್‌ಎಸ್‌ಎಸ್‌, ಬಜರಂಗದಳ ಕಾರ್ಯಕರ್ತರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ದೇಶ ಪ್ರೇಮ, ಸಮನ್ವತೆ ಹಾಗೂ ಸಮಗ್ರತೆಗಾಗಿ ಶ್ರಮಿಸಿದ ಸಂಘಟನೆಗಳನ್ನು ನಿಷೇಧಿಸುವುದು ಸರಿಯಲ್ಲ. ದೇಶಪ್ರೇಮ ಮತ್ತು ಉಗ್ರವಾದದ ನಡುವಿನ ಅರ್ಥ ತಿಳಿಯದ ಸಿದ್ದರಾಮಯ್ಯನವರು ಅಸಮರ್ಥ ಮುಖ್ಯಮಂತ್ರಿ. ಅವರ ಕೊನೆಗಾಲ ಸಮೀಪಿಸುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ ಕಿಡಿಕಾರಿದರು.

‘ದೇಶದ ಇತಿಹಾಸದ ಪುಟಗಳನ್ನು ತೆರೆದು ನೋಡಿ ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಂಡು, ನಂತರ ಕಾಂಗ್ರೆಸ್‌ನವರು ಮಾತನಾಡಬೇಕು. ದೇಶದಲ್ಲಿ 6 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಜನವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು’ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು, ಮುಖಂಡ ಎಂ.ಎಸ್.ಕರಿಗೌಡರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ಎಂ.ಎಂ.ಹಿರೇಮಠ, ರಾಜು ಕುರಡಗಿ, ಮಾಧವ ಗಣಾಚಾರಿ, ಶ್ರೀಕಾಂತ ಖಟವಟೆ, ಜಗನ್ನಾಥಸಾ ಬಾಂಢಗೆ, ಭದ್ರೇಶ ಕುಸ್ಲಾಪುರ, ಅಶ್ವಿನಿ ಜಗತಾಪ್, ವಂದನಾ ವರ್ಣೇಕರ, ಶಾರದಾ ಸಜ್ಜನರ, ಸುಧೀರ ಕಾಟಿಗರ, ಜಯಶ್ರೀ ಉಗಲಾಟದ, ಮಾಧವ ಗಣಾಚಾರಿ, ಅನಿಲ ಅಬ್ಬಿಗೇರಿ, ಜಯಶ್ರೀ ಭೈರವಾಡೆ ಮಂಜುನಾಥ ಮುಳಗುಂದ ಇದ್ದರು.

ಬೆಂಕಿ ಹಚ್ಚಿಕೊಳ್ಳಲು ಯತ್ನ

ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಅರವಿಂದ ಹುಲ್ಲೂರು ಅವರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಆದರೆ, ತಕ್ಷಣ ಅವರನ್ನು ಪಕ್ಷದ ಕಾರ್ಯಕರ್ತರು ತಡೆದು, ಅವರ ಕೈಯಿಂದ ಪೆಟ್ರೋಲ್‌ ತುಂಬಿದ್ದ ಬಾಟಲಿ ಕಸಿದುಕೊಂಡರು. ಪೊಲೀಸರು ಅವರನ್ನು ಗುಂಪಿನಿಂದ ಹೊರಗೆ ಕರೆತಂದರು. ಈ ಘಟನೆಯಿಂದ ಕೆಲಕಾಲ ಗಾಂಧಿವೃತ್ತದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.