ADVERTISEMENT

8 ವರ್ಷದಲ್ಲಿ ಡೀಸೆಲ್‌ಗೆ ₹ 14 ಕೋಟಿ ವೆಚ್ಚ

ನಾಲ್ಕು ವರ್ಷಗಳಲ್ಲಿ ಏಳು ಬಾರಿ ವಿದ್ಯುತ್‌ ದರ ಏರಿಕೆ; ಚನ್ನರಾಯಪಟ್ಟಣ ಡೇರಿಗೆ ದೊರಕದ ವಿದ್ಯುತ್‌ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 9 ಮೇ 2017, 8:42 IST
Last Updated 9 ಮೇ 2017, 8:42 IST
8 ವರ್ಷದಲ್ಲಿ ಡೀಸೆಲ್‌ಗೆ ₹ 14 ಕೋಟಿ ವೆಚ್ಚ
8 ವರ್ಷದಲ್ಲಿ ಡೀಸೆಲ್‌ಗೆ ₹ 14 ಕೋಟಿ ವೆಚ್ಚ   
ಹಾಸನ: ಶೆಟ್ಟಿಹಳ್ಳಿಯಲ್ಲಿ ವಿದ್ಯುತ್‌ ಉಪ ಕೇಂದ್ರ ನಿರ್ಮಾಣವಾಗಿ ಎಂಟು ವರ್ಷ ಕಳೆದರೂ ಚನ್ನರಾಯಪಟ್ಟಣದ ಹಾಲಿನ ಡೇರಿಗೆ ವಿದ್ಯುತ್‌ ಸಂಪರ್ಕ ನೀಡಿಲ್ಲ. ಇದರಿಂದಾಗಿ ಡೇರಿ ನಡೆಸಲು 8 ವರ್ಷಕ್ಕೆ ₹ 14 .5 ಕೋಟಿ ಡೀಸೆಲ್‌ಗೆ ವೆಚ್ಚ ಮಾಡಲಾಗಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ  ಆರೋಪಿಸಿದರು.
 
‘ಇಂಧನ ಸಚಿವನಾಗಿದ್ದಾಗ ಚನ್ನ ರಾಯಪಟ್ಟಣದಲ್ಲಿ ₹ 5 ಕೋಟಿ ವೆಚ್ಚ ದಲ್ಲಿ ವಿದ್ಯುತ್‌ ಉಪ ಕೇಂದ್ರ ನಿರ್ಮಿಸ ಲಾಯಿತು. ಆದರೆ ಇದುವರೆಗೂ ನಾಲ್ಕು ಕಂಬಗಳನ್ನು ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ‘ಸೆಸ್ಕ್‌’ ಮುಂದಾಗಿಲ್ಲ.  
 
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು ಹದಿನೈದು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ. ರೈತರ ಹಣವನ್ನು ಡೀಸೆಲ್‌ಗೆ ಬಳಸಲಾಗುತ್ತಿದೆ. ಈ ಬಗ್ಗೆ ಸಚಿವರಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರೈತರಿಗೆ ನೀಡ ಬೇಕಾದ ಪರಿಹಾರ ಕೊಟ್ಟು ಕಾಮಗಾರಿ ಪೂರ್ಣಗೊಳಿಸಲಿ’ ಎಂದರು.
 
‘ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ಏಳು ಬಾರಿ ವಿದ್ಯುತ್‌ ದರ ಏರಿಕೆ ಮಾಡಿದೆ. ಸರಿಯಾಗಿ ವಿದ್ಯುತ್‌ ನೀಡದೆ ಜನರ ಕಣ್ಣೀರು ಹಾಕಿಸುತ್ತಿದ್ದಾರೆ. ಇಂಧನ ಇಲಾಖೆ ನಿಷ್ಕ್ರಿಯವಾಗಿದ್ದು, ಬರದಿಂದಾಗಿ ಜನರು ತತ್ತರಿಸುತ್ತಿದ್ದಾರೆ.
 
ಇಂಥ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಹಣ ಮಾಡುವವರಿಗೆ ಅವಕಾಶ ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
‘ಜಿಲ್ಲಾಡಳಿತ ಇಂಧನ ಇಲಾಖೆ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆದು ನನೆಗುದಿಗೆ ಬಿದ್ದಿರುವ ಉಪ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ನೀಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯರು, ಅಧಿ ಕಾರಿಗಳು ಹಾಗೂ ರೈತರ ಸಭೆ ನಡೆಸಿ ತೀರ್ಮಾನಕ್ಕೆ ಬರಬೇಕು’ ಎಂದರು.
 
‘ಹೊಳೆನರಸೀಪುರದ ಕೆಇಬಿ ಕಿರಿಯ ಎಂಜಿನಿಯರ್‌ ಶ್ರೀರಂಗ ಅಕ್ರಮ ಸಕ್ರಮ ಯೋಜನೆಯಡಿ ನಂಬರ್‌ ಅನುಮತಿಗೆ 42 ಜನರಿಂದ ತಲಾ ₹ 5,000, ₹ 10,000 ವಸೂಲು ಮಾಡಿ ವಂಚಿಸಿ ದ್ದಾರೆ’ ಎಂದು ಆರೋಪಿಸಿದರು.
 
‘ಸಾರ್ವಜನಿಕರಿಂದ ವಸೂಲು ಮಾಡಿದ ಸುಮಾರು ₹ 20 ಲಕ್ಷ ಹಣ ವನ್ನು  ‘ಸೆಸ್ಕ್‌’ಗೆ ಪಾವತಿಸದೆ ದುರುಪ ಯೋಗ ಮಾಡಿಕೊಂಡಿದ್ದಾರೆ. ಈ ಅಧಿಕಾರಿಯನ್ನು ಅಮಾನತು ಮಾಡಲಾ ಗಿತ್ತು. ಈಗ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಕ್ಷಣ ಅವರ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು. ಡಿಸಿಸಿ ಬ್ಯಾಂಕ್‌ ಸತೀಶ್‌, ಮುಖಂಡ ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.