ADVERTISEMENT

ಅಧಿಕಾರಿಗಳಿಗೆ ರೈತರಿಂದ ದಿಗ್ಬಂಧನ

ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಕೃಷಿ, ಕಂದಾಯ ಇಲಾಖೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 8:49 IST
Last Updated 22 ಮಾರ್ಚ್ 2017, 8:49 IST

ಬಾದಾಮಿ: ಬೆಳೆಹಾನಿ ಪರಿಹಾರ ವಿತರಣೆಯಲ್ಲಿ  ಅಧಿಕಾರಿಗಳು ತಾರತಮ್ಯ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆಂದು ಹೆಬ್ಬಳ್ಳಿ ಗ್ರಾಮದ ರೈತರು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಅಪರೂಪದ ಘಟನೆ ನಡೆದಿದೆ.

ಹೆಬ್ಬಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಶಿವಾನಂದ ಮಠದಲ್ಲಿ ನೂರಾರು ರೈತರು ಸಹಾಯಕ ಕೃಷಿ ಅಧಿಕಾರಿಗೆ ಮೊದಲು ದಿಗ್ಬಂಧನ ಹಾಕಿದರು. ನಂತರ 11 ಗಂಟೆಗೆ ಬಂದ ಸಹಾಯಕ ಕೃಷಿ ನಿರ್ದೇಶಕ ಡಿ.ಎಚ್‌. ನರಹಟ್ಟಿ ಅವರು ಬಂದಾಗ ಅವರಿಗೂ ಸಹ ರೈತರು ದಿಗ್ಬಂಧನ ಹಾಕಿದರೆಂದು ಗ್ರಾಮಸ್ಥರಿಂದ ತಿಳಿದಿದೆ.

ತಹಶೀಲ್ದಾರ್‌ ಬರುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರರು ಮೀಟಿಂಗ್‌ ಹೋಗಿರುವ ಕಾರಣದಿಂದ ರಾತ್ರಿ 8 ಗಂಟೆಯಾದರೂ ತಹಶೀಲ್ದಾರರು ಗ್ರಾಮಕ್ಕೆ ಹೋಗಿಲ್ಲಎಂದ ತಿಳಿದುಬಂದಿದೆ.

ಬೆಳೆ ಹಾನಿ ಕುರಿತು ರೈತರಿಗೆ ಸರ್ಕಾರ ನಿಗದಿ ಮಾಡಿದ ಪ್ರತಿ ಹೆಕ್ಟೇರ್‌ಗೆ ಕೊಡಬೇಕಾದ ಹಣವನ್ನು ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು  ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮದ ರೈತ ಮುಖಂಡ ಕುಮಾರ ದೇಸಾಯಿ ಆರೋಪಿಸಿದರು.

ಮೂರು ವರ್ಷಗಳಿಂದ ಸತತ ಬರಗಾಲವಿದ್ದು. ಜಾನುವಾರುಗಳಿಗೆ ಮೇವು ಇಲ್ಲ. ಕುಡಿಯಲು ನೀರು ಇಲ್ಲದೇ ರೈತರು ಕಂಗಾಲಾಗಿದ್ದಾರೆ.ರೈತರ ಖಾತೆಗೆ ಹಣ ಜಮಾ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಶಿವನಗೌಡ ಗದ್ದಿಗೌಡರ ಹೇಳಿದರು.

ಜಿಲ್ಲಾ ಕೃಷಿ , ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ  ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಿಂಗನಗೌಡ ಹಿರೇನಿಂಗನಗೌಡರ, ಭೀಮನಗೌಡ ಮಾದಳ್ಳಿ, ಬಸವಂತಪ್ಪ ಬ್ಯಾಳಿ, ಹನುಮಂತಗೌಡ ನಾವಳ್ಳಿ, ಏಕನಾಥಪ್ಪ ಕಿತ್ತಲಿ, ಭೀಮಸಿ ಅನೇಕನವರ, ಚಂದನಗೌಡ ಪಾಟೀಲ, ಕುಮಾರಯ್ಯ ಭಿಕ್ಷಾವತಿಮಠ, ಸಿದ್ದನಗೌಡ ಪಾಟೀಲ, ಸುರೇಶ ಮಡ್ಲಿ ಮತ್ತು ನೂರಾರು ರೈತರು ಇದ್ದರು.
ತಹಶೀಲ್ದಾರ್ ಎಸ್‌. ರವಿಚಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.