ADVERTISEMENT

‘ಅನುಭವ ಪಾಠ ಕಲಿಸಿದ ಚುನಾವಣೆ’

ಚುನಾವಣಾ ಯಶಸ್ಸಿಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 7:32 IST
Last Updated 17 ಮೇ 2018, 7:32 IST

ಬಾಗಲಕೋಟೆ : ‘ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ವಿಶೇಷ ಅನುಭವ ನೀಡಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.

ನವನಗರದ ಬಾಬು ಜಗಜೀವನರಾಂ ಭವನದಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಯಶಸ್ವಿಗೆ ಕಾರಣವಾದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದ ಅನೇಕ ಕಾರ್ಯಗಳಲ್ಲಿ ದೊಡ್ಡ ಯೋಜನಾ ಬದ್ಧವಾದ ಕಾರ್ಯಕ್ರಮಕ್ಕೆ ನಾವೆಲ್ಲರೂ ಭಾಗಿಯಾಗಿದ್ದು ಸಂತಸ ತಂದಿದೆ. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಹಿಡಿದು ಡಿ–ಗ್ರೂಪ್ ನೌಕರ ವರ್ಗದ ಸಿಬ್ಬಂದಿ ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

‘ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಶ್ರಮಿಸಿದ್ದೇವೆ. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಂದೊಂದು ಕಾರ್ಯದಲ್ಲಿ ಸಾಧನೆ ಮಾಡಿದ್ದನ್ನು ಗಮನಿಸಿದಾಗ ಪ್ರತಿಯೊಬ್ಬರಲ್ಲಿ ಹುದುಗಿದ ಸಾಮರ್ಥ್ಯ ನೋಡುವ ಸಂದರ್ಭ ಒದಗಿ ಬಂದಿತು’ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಕೆ.ಎಸ್.ಹಟ್ಟಿ, ವಿಎಸ್‌ಟಿ ತಂಡದ ಪ್ರಕಾಶ ದಡ್ಡಿ, ಡಿವೈಎಸ್‌ಪಿ ಗಿರೀಶ, ಹುನಗುಂದ ಕ್ಷೇತ್ರದ ಚುನಾವಣಾಧಿಕಾರಿ ಎಸ್.ಬಿ.ಮುಳ್ಳೊಳ್ಳಿ ಸೇರಿದಂತೆ ಇತರರು ತಮ್ಮ ಅನುಭವ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ, ಚುನಾವಣಾ ಅಧಿಕಾರಿಗಳಾದ ಶಿವರಾಜ
ಕುಲಕರ್ಣಿ, ಪ್ರಕಾಶ ಜೋಶಿ, ಮಾರುತಿ ಎಂ.ಪಿ, ಸಿ.ಎಲ್. ಆನಂದ, ರಮೇಶ್‌ಕುಮಾರ, ಎಚ್.ಜಯಾ, ನೋಡಲ್ ಅಧಿಕಾರಿಗಳಾದ ರವೀಂದ್ರ ಹಕಾಟಿ, ಉಕ್ಕಲ್ಲಿ, ಮೇಲಿನಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ ಸ್ವಾಗತಿಸಿದರು. ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.