ADVERTISEMENT

ಇಂದ್ರಿಯ ಗಮ್ಯಭಾವವೇ ಪ್ರೇಮ: ಕುಂ.ವೀ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:13 IST
Last Updated 30 ಜನವರಿ 2017, 5:13 IST
ಬಾಗಲಕೋಟೆ: ‘ಪ್ರೀತಿ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಎಲ್ಲಿ ಹಸಿರು–ಬೆಳದಿಂಗಳು ಇದೆಯೋ ಅಲ್ಲೆಲ್ಲಾ ಪ್ರೇಮ ಇದೆ. ಇಂದ್ರೀಯ ಗಮ್ಯ ಅಗೋಚರವಾದ ಸುಕೋಮಲ ಭಾವನೆಯೇ ಪ್ರೇಮ’ ಎಂದು ಲೇಖಕ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
 
ಇಲ್ಲಿನ ಸಹೃದಯ ಸಾಹಿತ್ಯ ವೇದಿಕೆ ಹಾಗೂ ವಿಶ್ವಖುಷಿ ಪ್ರಕಾಶನದ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಡಾ.ಪ್ರಕಾಶ ಶಿ.ಡಂಗಿ ಅವರ ‘ಅವಳ ನೆನಪಲ್ಲೆ’ ಹಾಗೂ ಕೆ.ಟಿ.ಹಳ್ಳಿ ರಾಮು ಅವರ ‘ನೀನೆಂಬ ಮಾಯೆ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
 
ಮನುಷ್ಯನಲ್ಲಿರುವ ಯಾವುದಾದರೂ ಪ್ರತಿಭೆ ಪ್ರೇಮಕ್ಕೆ ಕಾರಣವಾಗುತ್ತದೆ. ಅದು ಆತನನ್ನು ಕವಿಯಾಗಿ, ಸೃಜನಶೀಲ ವ್ಯಕ್ತಿಯಾಗಿ ರೂಪಿಸುತ್ತದೆ. ಲಿಯೊನಾರ್ಡೊ ಡಾವಿಂಚಿಯ ಚಿತ್ರವೇ ‘ಮೊನಾಲಿಸಾ’ ಆಗಿದ್ದರೂ ಅದರಲ್ಲಿನ ಪ್ರೇಮ ಭಾವ ಆತನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದರು.
 
‘ಸುಲಿದ ಬಾಳೆಹಣ್ಣಿನಂತೆ ಕನ್ನಡ ಭಾಷೆ. ಮೊದಲ ಕವನ ಸಂಕಲನಗಳು ನವಿರಾಗಿದ್ದರೂ ಶ್ರೇಷ್ಠ ಕವಿತೆಗಳು ಎನ್ನಲು ಆಗುವುದಿಲ್ಲ. ದಾಂಪತ್ಯವನ್ನು ಬೆಸೆದು ಗಟ್ಟಿಗೊಳಿಸುವ ಶಕ್ತಿ ಕಾವ್ಯಕ್ಕೆ ಇದೆ’ ಎಂದು ಹೇಳಿದ ಕುಂ.ವೀ ‘ಇಂದಿನ ತಾಂತ್ರಿಕ ಜಗತ್ತು ಮನುಷ್ಯನನ್ನು ಬೇರೆ ಕಡೆ ಆಲೋಚನೆ ಮಾಡದಂತೆ ಸ್ಥಗಿತಗೊಳಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
 
ಅರುಣಕುಮಾರ ಗೋಗಿ ಅವರ ಗಾಯನದೊಂದಿಗೆ ಆರಂಭವಾದ ಸಮಾರಂಭದಲ್ಲಿ ಹಾಸನದ ಕವಿಯತ್ರಿ ಮಮತಾ ಅರಸೀಕೆರೆ ಹಾಗೂ ಬಾದಾಮಿಯ ಜಯಶ್ರೀ ಭಂಡಾರಿ ಕೃತಿಗಳ ಪರಿಚಯ ಮಾಡಿದರು.
 
ಸಾಹಿತಿ ಡಾ.ಪ್ರಕಾಶ ಗ.ಖಾಡೆ ಆಶಯ ಭಾಷಣ ಮಾಡಿದರು. ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಗವಿಸಿದ್ದಪ್ಪ, ಬಸವೇಶ್ವರ ಕಲಾ ಕಾಲೇಜು ಪ್ರಾಚಾರ್ಯ ಡಾ.ವಿಜಯಕುಮಾರ ಕಟಗೀಹಳ್ಳಿಮಠ, ಕಥೆಗಾರ ಅಬ್ಬಾಸ್ ಮೇಲಿನಮನಿ ಮತ್ತಿತರರು ಪಾಲ್ಗೊಂಡಿದ್ದರು. ಉಮೇಶ ತಿಮ್ಮಾಪುರ ಸ್ವಾಗತಿಸಿದರು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.