ADVERTISEMENT

‘ಇ–ಪಾವತಿ’, ಫಾಸ್‌ಟ್ಯಾಗ್‌ನತ್ತ ಸವಾರರ ಚಿತ್ತ

ನಗದುರಹಿತ ವಹಿವಾಟು – ಟೋಲ್‌ಗಳಲ್ಲಿ ಸ್ವೈಪಿಂಗ್‌ ಯಂತ್ರ ಬಳಕೆ: ಡೆಬಿಟ್‌ ಕಾರ್ಡ್‌ಗಳಿಂದ ಶುಲ್ಕ ಪಾವತಿ

ಜಗದೀಶ ಎಚ್ ಭಜಂತ್ರಿ
Published 10 ಜನವರಿ 2017, 5:17 IST
Last Updated 10 ಜನವರಿ 2017, 5:17 IST
ಬಾಗಲಕೋಟೆ: ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ವಾಹನ ಸವಾರರು ನಗದು ರಹಿತ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ಜಿಲ್ಲೆ ಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50ರ ನಾಗರಾಳ–ನಾಯನೇಗಲಿ ಟೋಲ್‌ ಪ್ಲಾಜಾದಲ್ಲಿ ಸಮಸ್ಯೆ ಹೆಚ್ಚು ಕಾಣುತ್ತಿಲ್ಲ.
 
ನೋಟು ರದ್ದತಿಯಿಂದ ಟೋಲ್‌ ನಲ್ಲಿ ಚಿಲ್ಲರೆ ಸಮಸ್ಯೆಯ ವಾಸ್ತವ ಚಿತ್ರಣ ಹೇಗಿದೆ ಎಂಬುದನ್ನು ತಿಳಿಯಲು ಜಿಲ್ಲಾ ಕೇಂದ್ರದಿಂದ 43 ಕಿ.ಮೀ ದೂರದ ಲ್ಲಿರುವ ನಾಗರಾಳ–ನಾಯನೇಗಲಿ ಟೋಲ್‌ಗೆ ‘ಪ್ರಜಾವಾಣಿ’ ಭೇಟಿ ನೀಡಿ ದಾಗ ಅಲ್ಲಿ ಚಿಲ್ಲರೆ ಸಮಸ್ಯೆಯ ಚಿತ್ರಣ ಕಾಣಿಸಲಿಲ್ಲ. ಸರಕು ಸಾಗಣೆ ವಾಹನ ಗಳು, ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಗದು ರೂಪದಲ್ಲಿ ಸುಂಕ ಕಟ್ಟಿದರೆ, ದೊಡ್ಡ ವಾಹನಗಳು, ಕಾರು ಮಾಲೀಕರು, ಟ್ರಕ್‌, ಕ್ಯಾಬ್‌ ವಾಹನ ಚಾಲಕರು ಡೆಬಿಟ್‌ ಕಾರ್ಡ್‌ಗಳನ್ನು ಬಳಸಿ ಶುಲ್ಕ ಪಾವತಿಸುತ್ತಿರುವ ದೃಶ್ಯ ಟೋಲ್‌ ಪ್ಲಾಜಾದಲ್ಲಿ ಕಂಡು ಬಂದಿತು.
 
₹ 500, 1 ಸಾವಿರ  ನೋಟುಗಳು ರದ್ದಾದ ಬಳಿಕ ಚಿಲ್ಲರೆ ಸಮಸ್ಯೆ ಎದುರಾಗುವ ಆತಂಕವಿತ್ತು. ಆದರೆ, ಕೇಂದ್ರ ಸರ್ಕಾರ ಸ್ವಲ್ಪ ದಿನ ಶುಲ್ಕ ರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪರಿಣಾಮ ಅಷ್ಟು ಸಮಸ್ಯೆ ಉದ್ಭವಿಸಲಿಲ್ಲ. ಡಿ. 2ರ ನಂತರ ಟೋಲ್‌ ಶುಲ್ಕ ಸಂಗ್ರಹ ಪುನರಾರಂಭದ ನಂತರ ಚಿಲ್ಲರೆ ಸಮಸ್ಯೆ ಕಾಡಿಲ್ಲ. ಆರಂಭದ 20 ದಿನಗಳಲ್ಲಿ ವಾಹನ ಸವಾರರಿಗೆ ಮರಳಿ ಹಣ ಹೊಂದಿಸಲು ಸಮಸ್ಯೆಯಿತ್ತು. ಅದು ಈಗ ಇಲ್ಲ ಎನ್ನುತ್ತಾರೆ ಟೋಲ್‌ನ ವ್ಯವಸ್ಥಾಪಕ ಸಾಯಿರಾಮ್ ಸಿಂಗ್‌. 
 
ಇ–ಪಾವತಿಯಲ್ಲಿ ಹೆಚ್ಚಳ: ನೋಟು ರದ್ದು ಮಾಡುವ ಮುಂಚೆ ಶೇ 90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಶುಲ್ಕ ನಗದು ರೂಪದಲ್ಲಿ ಸಂಗ್ರಹವಾಗುತ್ತಿತ್ತು. ಈಗ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಟೋಲ್‌ನಲ್ಲಿರುವ 10 ಕೌಂಟರ್‌ಗಳಲ್ಲೂ  ಸ್ವೈಪಿಂಗ್‌ ಮೆಷಿನ್‌ಗಳು ಅಳವಡಿಸಿದೆ. ವಾಹನ ಸವಾರರು ‘ಇ–ಪಾವತಿ’ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ತಾನ, ಹರಿಯಾಣ, ಛತ್ತೀಸ್‌ಗಡ ರಾಜ್ಯಕ್ಕೆ ಸೇರಿದ ವಾಹನಗಳು ಟೋಲ್‌ನ ಮೂಲಕ ಸಂಚರಿಸುತ್ತಿವೆ ಎಂದರು.
 
ಈ ಟೋಲ್‌ ಪ್ಲಾಜಾದಿಂದ ಪ್ರತಿ ದಿನ ರಾಜ್ಯ, ಹೊರ ರಾಜ್ಯ ಸೇರಿ ಸುಮಾರು 6 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. 10 ಪ್ಲಾಜಾದಲ್ಲಿ ಎರಡು ಆಗಮನ ಮತ್ತು ನಿರ್ಗಮನದ ‘ಫಾಸ್‌ಟ್ಯಾಗ್‌’ ಹೊಂದಿದ ವಾಹನಗಳಿಗೆ ಮೀಸಲಾಗಿವೆ. ಅಹಮದಾಬಾದಿನ ಸದ್ಭಾವ ಕನ್‌ಸ್ಟ್ರಕ್ಷನ್ ಲಿಮಿಟೆಡ್‌ ಸಂಸ್ಥೆ ಟೋಲ್‌ ನಿರ್ವಹಣೆಯ ಹೊಣೆ ಹೊತ್ತಿದೆ ಎಂದು ತಿಳಿಸಿದರು.
 
***
‘ಫಾಸ್‌ಟ್ಯಾಗ್‌’ಗೆ  ಚಾಲಕರ ಒತ್ತು
ಟೋಲ್‌ ಪ್ಲಾಜಾದಲ್ಲಿ ತಡೆ ರಹಿತ, ನಗದು ರಹಿತ ವ್ಯವಸ್ಥೆಗೆ ‘ಫಾಸ್‌ಟ್ಯಾಗ್‌’ ವ್ಯವಸ್ಥೆ ಅಳವಡಿಸಲಾಗಿದೆ. ಈ ಸವಲತ್ತಿನಡಿ ನೋಂದಾಯಿಸಿದ ವಾಹನಗಳ ಸುಗಮ ಸಂಚಾರಕ್ಕೆ ಎರಡು ಪ್ರತ್ಯೇಕ ಲೇನ್‌ಗಳನ್ನು  ಮೀಸಲಿಡಲಾಗಿದೆ. ಇದರಿಂದ ವಾಹನ ದಟ್ಟಣೆ  ಕಡಿಮೆಯಾಗಿದೆ ಎಂದು ಸಿಬ್ಬಂದಿ ಹೇಳಿದರು. ಗರಿಷ್ಠ ಮುಖಬೆಲೆ ನೋಟುಗಳು ರದ್ದಾಗುವ ಮುನ್ನ ‘ಫಾಸ್‌ಟ್ಯಾಗ್‌’ ಲೇನ್‌ನಲ್ಲಿ ದಿನಕ್ಕೆ 100ಕ್ಕಿಂತಲೂ ಕಡಿಮೆ ವಾಹನಗಳು ಸಂಚರಿಸುತ್ತಿದ್ದವು. ಪ್ರಸ್ತುತ 1500ಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿವೆ. ಆ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ ಎಂದು ಸಿಬ್ಬಂದಿ ಹೇಳಿದರು.
 
***
ನಮ್ಮ ಬಳಿ ಎಟಿಎಂ ಕಾರ್ಡ್‌ ಇಲ್ಲ. ಕೆಲವು ಟೋಲ್‌ಗಳಲ್ಲಿ ಚಿಲ್ಲರೆ ಕೊಡುತ್ತಾರೆ. ಒಂದೊಂದು ಕಡೆ ಚಿಲ್ಲರೆ ಸಿಗುತ್ತಿರಲಿಲ್ಲ. ಈಗ ಎಲ್ಲ ಕಡೆ ಸಿಗುತ್ತಿದೆ
-ರಾಮೋಜಿ ಸಿಂಗ್‌
ಮಹಾರಾಷ್ಟ್ರದ ಟ್ರಕ್‌ ಚಾಲಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.