ADVERTISEMENT

‘ಏಡ್ಸ್‌ ನಿರ್ಮೂಲನೆ; ಸರ್ಕಾರ ನಿರಾಸಕ್ತಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 7:29 IST
Last Updated 2 ಡಿಸೆಂಬರ್ 2017, 7:29 IST

ಜಮಖಂಡಿ: ‘ಎಚ್‌ಐವಿ/ಏಡ್ಸ್‌ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಸರ್ಕಾರ ಆ ರೋಗದ ನಿರ್ಮೂಲನೆ ಬಗ್ಗೆ ಆಸಕ್ತಿ ಕಳೆದುಕೊಂಡಿದೆ. ಜನಪ್ರತಿನಿಧಿಗಳು ಕೂಡ ಗಂಭೀರ ಚಿಂತನೆ ನಡೆಸುತ್ತಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಚ್‌.ಜಿ. ದಡ್ಡಿ ವಿಷಾದಿಸಿದರು.

ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕ, ಆರೋಗ್ಯ ಇಲಾಖೆ, ಜೀವನ ಜ್ಯೋತಿ ಸಂಘ, ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಜಮಖಂಡಿ ರೋಟರಿ ಸಂಸ್ಥೆ, ಲಯನ್ಸ್‌ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಬಿಎಲ್‌ಡಿಇ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಏಡ್ಸ್‌ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದರು.

‘ನನ್ನ ಆರೋಗ್ಯ ನನ್ನ ಹಕ್ಕು’ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಘೋಷ ವಾಕ್ಯವಾಗಿದೆ. ನ್ಯಾಕೋ ಸಂಸ್ಥೆ 2030ರ ವೇಳೆಗೆ ಏಡ್ಸ್‌ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರಲ್ಲೂ ಎಚ್‌ಐವಿ/ಏಡ್ಸ್‌ ಕುರಿತು ಜನಜಾಗೃತಿ ಮೂಡಿಸುವ ಮೂಲಕ ನ್ಯಾಕೋ ಸಂಸ್ಥೆಯೊಂದಿಗೆ ಕೈಜೋಡಿಸಬೇಕು’ ಎಂದರು.

ADVERTISEMENT

‘ಆಯಾ ಭಾಗದ ಜನರು ಅದೇ ಭಾಗದ ಎ.ಆರ್‌.ಟಿ ಕೇಂದ್ರದಿಂದ ಎಚ್‌ಐವಿ/ಏಡ್ಸ್‌ ರೋಗಕ್ಕೆ ಮಾತ್ರೆಗಳನ್ನು ಪಡೆದುಕೊಳ್ಳಬೇಕು ಎಂಬ ಸರ್ಕಾರದ ನಿರ್ಬಂಧದಿಂದಾಗಿ ಕೆಲವರು ಪರಿಚಿತರಿರುವ ಪ್ರದೇಶದ ಎ.ಆರ್‌.ಟಿ ಕೇಂದ್ರಕ್ಕೆ ತೆರಳಲು ಮುಜುಗರ ಪಟ್ಟುಕೊಂಡು ಉಪಚಾರದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಆ ನಿರ್ಬಂಧವನ್ನು ತೆಗೆದುಹಾಕಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್‌. ಗಲಗಲಿ, ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ವಿ.ಬಿ. ಪಾಟೀಲ, ಜೀವನ ಜ್ಯೋತಿ ಸಂಘದ ಅಧ್ಯಕ್ಷ ಮಲ್ಲಪ್ಪ ಹೊಸವಾಲೀಕಾರ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್‌.ಸಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಮಖಂಡಿ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಡಿ. ಗೌಡರ, ಲಯನ್ಸ್‌ ಸಂಸ್ಥೆಯ ಎಂ.ಜಿ. ಭುತಡಾ ವೇದಿಕೆಯಲ್ಲಿದ್ದರು. ಅರವಿಂದ ಕಡಕೋಳ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ವಿ.ಎಲ್‌. ನಾರಾಯಣಕರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಎಲ್‌. ಮಾದರ ನಿರೂಪಿಸಿದರು. ಮಹಾದೇವ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.