ADVERTISEMENT

‘ಒತ್ತುವರಿ ಭೂಮಿ ಕೂಡಲೇ ತೆರವುಗೊಳಿಸಿ’

​ಪ್ರಜಾವಾಣಿ ವಾರ್ತೆ
Published 29 ಮೇ 2017, 11:50 IST
Last Updated 29 ಮೇ 2017, 11:50 IST

ಬಾಗಲಕೋಟೆ: ‘ಸರ್ಕಾರಿ ಭೂಮಿ ಒತ್ತು ವರಿಯನ್ನು ಗಂಭೀರವಾಗಿ ಪರಿಗಣಿಸಿ, ದೊಡ್ಡವರು–ಸಣ್ಣವರು ಎಂಬ ಬೇಧವಿಲ್ಲದೇ ತೆರವುಗೊಳಿಸುವಂತೆ’ ತಹಶೀಲ್ದಾರ್‌ಗಳಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಭಾನುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಭೂಮಿ ರಕ್ಷಣೆ ಮಾಡುವವರು ನೀವು. ಅದೇ ಕಾರಣಕ್ಕೆ ನಿಮ್ಮನ್ನು ಪ್ರಭುಗಳು ಎನ್ನಲಾಗುತ್ತದೆ. ಯಾವುದೇ ಒತ್ತಡಗಳಿಗೆ ಮಣಿಯದೇ ಕೆಲಸ ಮಾಡಿ. ಈ ವಿಚಾರದಲ್ಲಿ ಸರ್ಕಾರ ಯಾರಿಗೂ ರಕ್ಷಣೆ ಕೊಡುವುದಿಲ್ಲ ಎಂದರು.

ಸಸ್ಪೆಂಡ್ ಮಾಡಿ: ಹಿಂದೆ ಶಾನು ಭೋಗರ ಬಳಿ ಊರಿನ ಪ್ರತಿ ಸರ್ವೆ ನಂ ಮಾಹಿತಿ ಇರುತ್ತಿತ್ತು. ಯಾವ ಜಮೀನಿ ನಲ್ಲಿ ಏನು ಬೆಳೆಯಲಾಗಿದೆ ಎಂಬುವು ದನ್ನು ದಾಖಲಿಸಿ ಇಡುತ್ತಿದ್ದರು. ಆದರೆ ಈಗ ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ಮಾಡುವ ಊರಿನಲ್ಲಿ ವಾಸವಿರುವು ದಿಲ್ಲ. ಸರ್ಕಾರಿ ಭೂಮಿಗೆ ಯಾರು ಬೇಲಿ ಹಾಕಿಕೊಂಡರೂ, ಮನೆ ಕಟ್ಟಿದರೂ ಗೊತ್ತಿರುವುದಿಲ್ಲ. ಇದು ಅವರ ಕಾರ್ಯ ವೈಖರಿ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಚುರುಕುಗೊಳಿ ಸಲಿ ಕೆಲಸ ಮಾಡಿಸಿಕೊಳ್ಳಿ ಇಲ್ಲದಿದ್ದರೆ ಅವರನ್ನು ಸಸ್ಪೆಂಡ್ ಮಾಡಲು ಜಿಲ್ಲಾಧಿ ಕಾರಿಗೆ ಶಿಫಾರಸು ಮಾಡಿ ಎಂದು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಗಾಂವಠಾಣಾ ಹಾಗೂ ಗೋಮಾಳ ಗಳು ಶ್ರೀಮಂತರ ಹಿಡಿತದಲ್ಲಿವೆ. ಕಾನೂನು ಪ್ರಕಾರ ಕ್ರಮ ಕೈಗೊಂಡು ಅವುಗಳನ್ನು ತೆರವುಗೊಳಿಸುವಂತೆ ಹೇಳಿದ ಅವರು, ಮೊದಲು ಗಾಂವ ಠಾಣಾಗಳನ್ನು ಅಳತೆ ಮಾಡಿಸಿ ಗಡಿ ಗುರುತಿಸಿ. ಅಲ್ಲಿ ಯಾರಾದರೂ ದೀರ್ಘ ಕಾಲದಿಂದ ವಾಸವಿದ್ದರೆ ಅವರಿಂದ ಅರ್ಜಿ ಪಡೆದು ಶಿಫಾರಸು ಮಾಡಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸಿ ಅನುಮೋದನೆ ಪಡೆದು ಹಕ್ಕುಪತ್ರ ವಿತರಿಸಿ ಎಂದು ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ (ಇಒ) ಸೂಚನೆ ನೀಡಿದರು.

ADVERTISEMENT

ಕೊಪ್ಪಳ ಡಿಸಿಗೆ ಪತ್ರ ಬರೆಯಿರಿ: ಕುಷ್ಟಗಿ ತಾಲ್ಲೂಕು ಚಿತ್ತವಾಡಗಿ ಕೆರೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಹಾಳಾ ಗಿದೆ. ಇದರಿಂದ ಹುನಗುಂದ ತಾಲ್ಲೂಕಿನ ಸಾವಿರಾರು ಎಕರೆ ಭೂಮಿಗೆ ನೀರು ಇಲ್ಲದಂತಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸಚಿವರ ಗಮನ ಸೆಳೆದರು. ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆದು ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಸಭೆ ಯಲ್ಲಿದ್ದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣ ವರ ಅವರಿಗೆ ಕಾಗೋಡು ಸೂಚನೆ ನೀಡಿದರು.

ಇದೇ ವೇಳೆ ಜಿಲ್ಲೆಯಲ್ಲಿ ಕೈಗೊಂಡಿ ರುವ ಬರ ಪರಿಹಾರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಕಾಗೋಡು ತಿಮ್ಮಪ್ಪ ಕುಡಿಯುವ ನೀರು, ಜಾನು ವಾರುಗಳಿಗೆ ಮೇವು ಒದಗಿಸುವಂತೆ ಸೂಚನೆ ನೀಡಿದರು. ನೀರಿನ ಮೂಲ ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಎಚ್.ವೈ. ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನ ವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ವಿಕಾಸ್ ಸುರಳಕರ್, ಕೃಷ್ಣಾ ಮೇಲ್ದಂಡೆ ಯೋಜನೆ ಮಹಾ ವ್ಯವ ಸ್ಥಾಪಕ ನಳಿನ್ ಅತುಲ್ ಪಾಲ್ಗೊಂಡಿದ್ದರು.

ಮಿನಿ ವಿಧಾನಸೌಧ ಕಾಮಗಾರಿ ಪರಿಶೀಲನೆ
ಜಮಖಂಡಿ: ಇಲ್ಲಿನ ಕುಡಚಿ ರಸ್ತೆ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆ ಕಾರ್ಯಾಲಯದ ಪಕ್ಕದ ಜಾಗದಲ್ಲಿ ನಿರ್ಮಾಣ ಹಂತದಲ್ಲಿ ರುವ ಮಿನಿವಿಧಾನಸೌಧ ಕಟ್ಟಡಕ್ಕೆ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದರು.

ತಾಲ್ಲೂಕಿನ ರಬಕವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ವಾಪಸ್‌ ಬಾಗಲ ಕೋಟೆಗೆ ತೆರಳುವಾಗ ಇಲ್ಲಿಗೆ ಬಂದು ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಅಂದಾಜು ₹ 15 ಕೋಟಿ ವೆಚ್ಚದಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿ ಯಲ್ಲಿದ್ದು, ಕಳೆದ ಮೂರುವರೆ ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ನಿಗದಿತ ಅವಧಿಯಲ್ಲಿ ನಿರ್ಮಾಣ ಕಾಮಗಾರಿ ಯನ್ನು ಪೂರ್ಣಗೊಳಿಸಲಾಗುವುದು ಎಂಬ ಮಾಹಿತಿಯನ್ನು ಶಾಸಕ ಸಿದ್ದು ನ್ಯಾಮಗೌಡ ಸಚಿವರಿಗೆ ನೀಡಿದರು.

ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ಉಪವಿಭಾಗಾಧಿ ಕಾರಿ ರವೀಂದ್ರ ಕರಲಿಂಗಣ್ಣವರ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಕಾಂಗ್ರೆಸ್‌ ಕಾರ್ಯಕರ್ತರಾದ ಸಿದ್ದು ಮೀಸಿ, ಮಹೇಶ ಕೋಳಿ, ಪರಗೌಡ ಬಿರಾದಾರಪಾಟೀಲ, ಈಶ್ವರ ಕರಬಸನವರ, ರೇಷ್ಮಾ ಖಾದ್ರಿ, ಸುಮಿತ್ರಾ ಗುಳಬಾಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.