ADVERTISEMENT

‘ಕಾಂಗ್ರೆಸ್, ಬಿಜೆಪಿ ಒಳಜಗಳದಿಂದ ಜೆಡಿಎಸ್‌ ಪಕ್ಷಕ್ಕೆ ಲಾಭ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 8:50 IST
Last Updated 22 ಮೇ 2017, 8:50 IST

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಇದೇ 30ರಂದು ಕಾಂಗ್ರೆಸ್ ಪಕ್ಷ ತೊರೆದು ಸಾವಿರಾರು ಕಾರ್ಯಕರ್ತರೊಂದಿಗೆ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹೊಣೆಗಳಿಂದ ಮುಕ್ತನಾಗಿದ್ದು, ಬಾದಾಮಿ ಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ, ಅಲ್ಕೋಡ್ ಹನುಮಂತಪ್ಪ, ಎನ್.ಎಚ್.ಕೋನರಡ್ಡಿ ಹಾಗೂ ಬಿ.ಎ. ಫಾರುಖ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗುವುದಾಗಿ ತಿಳಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಒಳಜಗಳ, ಗುಂಪುಗಾರಿಕೆ ಹಾಗೂ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿವೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಸಂತ್ರಸ್ಥರ ಪುನರ್ವಸತಿ, ಹಿನ್ನೀರು, ಮಹದಾಯಿ ತಿರುವು ಯೋಜನೆ, ಬರಗಾಲ, ರೈತರ ಆತ್ಮಹತ್ಯೆ ಹಾಗೂ ಗುಳೆ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳದೇ ಸಮಸ್ಯೆ ಗಳನ್ನು ಜೀವಂತವಾಗಿರಿಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ADVERTISEMENT

ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಜನ ಮಾನಸದಲ್ಲಿ ಇನ್ನೂ ಹಸಿರಾಗಿದೆ. ರೈತರು ಹಾಗೂ ಯುವಕರ ಬಗೆಗೆ ಅವರಿಗಿರುವ ಕಾಳಜಿ ನಮ್ಮನ್ನು ಪಕ್ಷ ಸೇರ್ಪಡೆಯಾಗಲು ಪ್ರೇರೇಪಿಸಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಈಗಾಗಲೇ 35 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮುಖಂಡರ ಸಭೆ ನಡೆಸಲಾ ಗಿದೆ. ಅವರೆಲ್ಲರೂ ಪಕ್ಷ ಸೇರ್ಪಡೆ ಬಗ್ಗೆ ಒಲವು ತೋರಿದ್ದಾರೆ. ಬಾದಾಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 15–20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಮುಖಂಡರಾದ ಅಪ್ಪಣ್ಣ ಹಿರೇ ಹಾಳ, ಚಂದ್ರಕಾಂತ ಸೂಡಿ, ಶೇಖರ ರಾಠೋಡ, ಅಜೀಜ್ ಮುಲ್ಲಾ, ಬಾಲು ಹುನಗುಂಡಿ, ಲಕ್ಷ್ಮಣ, ಮುತ್ತಣ್ಣ ರೊಟ್ಟಿ, ರಂಗಪ್ಪ ಕಾಲಾದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.