ADVERTISEMENT

ಕಾಲುವೆಗೆ ಹರಿದ ಕಳಸಕೊಪ್ಪ ಕೆರೆ ನೀರು!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:53 IST
Last Updated 16 ಸೆಪ್ಟೆಂಬರ್ 2017, 5:53 IST
ಕಾಲುವೆ ಮೂಲಕ ಜಮೀನುಗಳಿಗೆ ನೀರು ಹರಿಸುವ ಯೋಜನೆಗೆ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು
ಕಾಲುವೆ ಮೂಲಕ ಜಮೀನುಗಳಿಗೆ ನೀರು ಹರಿಸುವ ಯೋಜನೆಗೆ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು   

ಕಲಾದಗಿ: ಸಮೀಪದ ಶೆಲ್ಲಿಕೇರಿ ಕ್ರಾಸ್ ಬಳಿಯ ಜಾಕ್‌ವೆಲ್‌ನಿಂದ ಏತ ನೀರಾವರಿ ಮೂಲಕ ಭಾಗದ ಐತಿಹಾಸಿಕ ಕಳಸಕೊಪ್ಪ ಕೆರೆಯನ್ನು ತುಂಬಿಸಿ ಅಲ್ಲಿಂದ ಕಾಲುವೆ ಮೂಲಕ ಜಮೀನುಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶುಕ್ರವಾರ ಶಾಸಕ ಜೆ.ಟಿ. ಪಾಟೀಲ, ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು,‘ ರೈತರಿಗೆ ಸರಿಯಾಗಿ ವಿದ್ಯುತ್ ಹಾಗೂ ನೀರು ಕೊಟ್ಟರೆ ಚಿನ್ನದ ಬೆಳೆ ಬೆಳೆಯು­ತ್ತಾರೆ. ಸರ್ಕಾರದ ಯಾವುದೇ ಸವಲತ್ತು ಬಯಸುವುದಿಲ್ಲ’ ಎಂದು ಹೇಳಿದರು.

ಈ ಯೋಜನೆಯಿಂದ ಸುತ್ತಲಿನ ಮೂರು ಸಾವಿರ ಎಕರೆ ಬರಡು ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡುತ್ತದೆ. ಇಲ್ಲಿನ ಭೂಮಿ ಫಲವತ್ತಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಬಹುದಾಗಿದೆ. ಕಲಾದಗಿ ಹಣ್ಣಿನ ಬೆಳೆಗಳ ಕಾರಣಕ್ಕೆ ದೇಶದಲ್ಲಿಯೇ ಹೆಸರು ಪಡೆದಿದೆ ಎಂದರು.

ADVERTISEMENT

‘ನೀರನ್ನು ಮಿತವಾಗಿ ಬಳಸುವಂತೆ ಕಿವಿಮಾತು ಹೇಳಿದ ಅವರು, ಅಗತ್ಯಕ್ಕೆ ತಕ್ಕಂತೆ ನೀರು ಬಳಕೆ ಮಾಡಿದಲ್ಲಿ ಮೂರು ಸಾವಿರ ಎಕರೆಗೂ ನೀರಿನ ಕೊರತೆಯಾಗದಂತೆ ನೋಡಿ­ಕೊಳ್ಳಬಹುದು’ ಎಂದರು.

ಮಾಜಿ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ‘ಕಳಸಕೊಪ್ಪ ಕೆರೆ ಮಳೆ ನೀರಿನ ಮೇಲೆ ಅವಲಂಬನೆಯಾಗಿದೆ. ಮಳೆಯಾದರೇ ಮಾತ್ರ ಬೆಳೆ ಬರುತ್ತದೆ ಎನ್ನುವ ಪರಿಸ್ಥಿತಿ ಇತ್ತು. ಆದರೆ ಮಳೆ ಕೊರತೆಯಿಂದಾಗಿ ಕಳೆದ 15 ವರ್ಷಗಳಿಂದ ಕೆರೆ ಭರ್ತಿಯಾಗಿರಲಿಲ್ಲ.

ಇಲ್ಲಿನ ರೈತರಿಗೆ ಭೂಮಿ ಇದ್ದರೂ ಕೆಲಸ ಅರಸಿ ಹೊರ ರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ಇತ್ತು. ಇದನ್ನು ಅರಿತು ಈ ಭಾಗದ ಶಾಸಕ ಜೆ.ಟಿ. ಪಾಟೀಲ ಅವರು ಸರ್ಕಾರದ ಮೇಲೆ ಒತ್ತಡ ತಂದು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದರು. ಇದಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಒತ್ತಾಸೆಯಾಗಿ ನಿಂತಿದ್ದಾರೆ.

ಯೋಜನೆಗೆ ಮಂಜೂರಾತಿ ಸಿಕ್ಕು ಎರಡು ವರ್ಷಗಳಲ್ಲಿಯೇ ಕಾಲುವೆಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗದ ರೈತರ ಬಹು ದಿನಗಳ ಕನಸು ನನಸಾಗಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಖೋತ್, ತಾಲ್ಲೂಕು ಪಂಚಾಯ್ತಿ ಸದಸ್ಯ ಸಂಗಣ್ಣ ಮುಧೋಳ, ರೈತರನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಬಿರಾದಾರ ಪಾಟೀಲ, ತಾಲ್ಲೂಕು ಪಂಚಾಯ್ತಿ ಉಪಾ­ಧ್ಯಕ್ಷ ಸಲಿಂ ಶೇಖ್, ಸದಸ್ಯೆ ಲಕ್ಷ್ಮೀ­ಬಾಯಿ ಪೂಜಾರ, ಎಪಿಎಂಸಿ ಸದಸ್ಯ ನಿಂಗಪ್ಪ ಅರಕೇರಿ, ಬೀಳಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸತ್ಯಪ್ಪ ಮೇಲನಾಡ, ಮುಖಂಡರಾದ ವಿಠ್ಠಲ ಶಿವನಿಚ್ಚಿ, ಪಾಂಡು ಪೋಲಿಸ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಆರ್.ಜೆಡ್‌. ಸೋಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.