ADVERTISEMENT

ಕುಡಿಯುವ ನೀರು ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಿ: ಶಾಸಕ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:47 IST
Last Updated 19 ಏಪ್ರಿಲ್ 2017, 5:47 IST

ಹುನಗುಂದ: ತಾಲ್ಲೂಕಿನಲ್ಲಿ ನೀರು ಸರಬರಾಜಿನ ವಿಷಯದಲ್ಲಿ ಎಲ್ಲಿಯೂ ವ್ಯತ್ಯಯ ಬರಬಾರದು. ನಿಗದಿತ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪರಿಹಾರಗಳನ್ನು ಶೀಘ್ರವಾಗಿ ಕಂಡುಕೊಳ್ಳಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಇಲ್ಲಿನ ತಾಲ್ಲೂಕು ಕಂದಾಯ ಭವನದಲ್ಲಿ ಕುಡಿಯುವ ನೀರಿನ ಕುರಿತ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯ್ತಿ ತುಂಬ ಚುರುಕಾಗಿ ಕಾರ್ಯ ಮಾಡಬೇಕು. ಇದರಲ್ಲಿ ವಿಳಂಬ ತೋರಿದರೆ ಅಂಥವರ ವಿರುದ್ಧ ಕ್ರಮ ಅನಿವಾರ್ಯ. ನೀರಿನ ಮೂಲಗಳು ಮತ್ತು ಸರಬರಾಜಿನ ವಿಷಯದಲ್ಲಿ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದರು.

ಈ ವಿಷಯದಲ್ಲಿ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದೆ. ಸಾಕಷ್ಟು ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿದೆ. ಬಹುಗ್ರಾಮ ಯೋಜನೆಯ ಸರಬರಾಜು ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ಕೊರೆದು ಪೈಪ್‌ಲೈನ್ ಮಾಡಬೇಕು. ಅದರಂತೆ ಹುನಗುಂದ, ಇಳಕಲ್ ನಗರಗಳ ವಿಷಯದಲ್ಲಿ ತಕ್ಷಣದ ಕ್ರಮ ಕೈಕೊಂಡಿದೆ.

‘ಕುಡಿಯುವ ನೀರಿಗಾಗಿ ₹ 52 ಲಕ್ಷ ತಮ್ಮಲ್ಲಿದೆ. ಅಗತ್ಯ ಕಡೆಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದೇವೆ. 50 ಟನ್ ಮೇವು ಇದೆ. ಜಿಂದಾಲ್ ಕಂಪನಿ ಕೊಡುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ತಹಶೀಲ್ದಾರ್ ಸುಭಾಷ ಸಂಪಗಾಂವಿ ತಿಳಿಸಿದರು.

ADVERTISEMENT

ತಾಪಂ ಇಒ ಡಾ.ಎಸ್.ಎಚ್.ಅಂಗಡಿ, ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಮಾತ್ರ ಸಮಸ್ಯೆ ಬಂದಿವೆ. ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡಿದ್ದೇವೆ. ಬಹುತೇಕ ಶುದ್ಧ ನೀರಿನ ಘಟಕಗಳು ಸರಿಯಾಗಿವೆ. ನೀರಿನ ಸರಬರಾಜು ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕು ಎಂದರು.ಇಳಕಲ್ ವಿಶೇಷ ತಹಶೀಲ್ದಾರ್ ಗ್ರೇಡ್–2 ತಹಶೀಲ್ದಾರ್‌ ಆನಂದ ಕೋಲಾರ, ಜಿ.ಎಂ.ಕುಲಕರ್ಣಿ, ಇಳಕಲ್ ನಗರ ಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಹುನಗುಂದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಹೆಸ್ಕಾಂ ಎಇಇ ಪ್ರಕಾಶ, ಶಾಖಾಧಿಕಾರಿಗಳು, ಪಿಡಿಒಗಳು ಹಾಜರಿದ್ದು ಮಾಹಿತಿ ಒದಗಿಸಿದರು.

ಬಿಸಿಲಿನ ತಾಪ: 50 ಕುರಿ ಸಾವುತಾಲ್ಲೂಕಿನಲ್ಲಿ ಹೆಚ್ಚಿದ ಬಿಸಿಲಿನ ತಾಪಕ್ಕೆ ಸುಮಾರು 50 ಕುರಿಗಳು ಸತ್ತಿವೆ. ತಲಾ ಒಂದು ಕುರಿಗೆ ₹ 5 ಸಾವಿರ ಪರಿಹಾರ ನೀಡಲಾಗಿದೆ ಎಂದು ತಹಶೀಲ್ದಾರ್ ಸುಭಾಷ ಸಂಪಗಾಂವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.