ADVERTISEMENT

ಕುರಿ ಸಂತೆಗೆ ಹೊರಟವರ ಹಿಡಿದರು!

ಕುಳಗೇರಿ ಕ್ರಾಸ್ ತಪಾಸಣಾ ಕೇಂದ್ರ: ಬಳ್ಳಾರಿ ಜಿಲ್ಲೆ ರೈತರ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:26 IST
Last Updated 18 ಏಪ್ರಿಲ್ 2018, 5:26 IST

ಬಾಗಲಕೋಟೆ: ಕುರಿ ಒಯ್ಯಲು ಕೆರೂರು ಸಂತೆಗೆ ಬಂದಿದ್ದ ಬಳ್ಳಾರಿ ಜಿಲ್ಲೆಯ ರೈತರನ್ನು ಹಿಡಿದ ತಪಾಸಣಾ ಕೇಂದ್ರದ ಸಿಬ್ಬಂದಿ ಅವರನ್ನು ಸತಾಯಿಸಿದ ಪ್ರಸಂಗ ಕುಳಗೇರಿ ಕ್ರಾಸ್‌ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಹಣ ವಾಪಸ್‌ ಮರಳಿಸುವಂತೆ ಮಂಗಳವಾರ ಮುಂಜಾನೆವರೆಗೂ ಅಂಗಲಾಚಿದರೂ ತಪಾಸಣಾ ಕೇಂದ್ರದ ಸಿಬ್ಬಂದಿ ಕರಗಿಲ್ಲ. ಕೊನೆಗೆ ರೈತರ ನೆರವಿಗೆ ಸ್ಥಳೀಯರು ಬಂದಿದ್ದಾರೆ. ವಿಚಾರ ತಾಲ್ಲೂಕು ಚುನಾವಣಾ ಅಧಿಕಾರಿ ಪಿ.ರಮೇಶಕುಮಾರ ಅವರ ಗಮನಕ್ಕೆ ಬಂದಿದೆ. ಮಧ್ಯಪ್ರವೇಶಿಸಿದ ಅವರು ರೈತರಿಗೆ ಹಣ ವಾಪಸ್ ಕೊಡಿಸಿದ್ದಾರೆ.

ನಡೆದದ್ದಿಷ್ಟು: ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಸಕ್ರಿಹಳ್ಳಿಯ ತಲಾ 10 ಮಂದಿ ರೈತರು ಎರಡು ವಾಹನಗಳಲ್ಲಿ ಕುರಿ ಕೊಳ್ಳಲು ಕುಳಗೇರಿ ಕ್ರಾಸ್‌ ಮಾರ್ಗವಾಗಿ ಕೆರೂರಿನ ಸಂತೆಗೆ ಹೊರಟಿದ್ದಾರೆ. ಮಧ್ಯರಾತ್ರಿ ಅವರನ್ನು ತಡೆದ ತಪಾಸಣಾ ಕೇಂದ್ರದ ಸಿಬ್ಬಂದಿ ಅವರ ಬಳಿ ಇದ್ದ ಹಣ ತೆಗೆದುಕೊಂಡಿದ್ದಾರೆ.

ADVERTISEMENT

‘ನಮ್ಮ ಬಳಿ ತಲಾ ₹ 15ರಿಂದ 20 ಸಾವಿರ ಹಣ ಇತ್ತು. ಸಾಲ–ಸೋಲ ಮಾಡಿ ತಂದಿದ್ದೆವು. ಎಲ್ಲ ಹಣ ಒಟ್ಟುಗೂಡಿಸಿ ಒಬ್ಬರಿಂದ ಸಹಿ ಪಡೆಯಲು ಮುಂದಾದರು ಅದಕ್ಕೆ ನಾವು ಒಪ್ಪಲಿಲ್ಲ. ಹಾಗಾಗಿ ಬೆಳಿಗ್ಗೆವರೆಗೂ ಅಲ್ಲಿಯೇ ಕೂರಿಸಿಕೊಂಡರು.ಹಣದ ದಾಖಲೆ ತೆಗೆದುಕೊಂಡು ಮೂರು ದಿನ ಬಿಟ್ಟು ಬರುವಂತೆ ಸೂಚಿಸಿದರು. ನಾವು ಅಂಗಲಾಚಿದೆವು. ಕಾಲಿಗೆ ಬಿದ್ದೆವು. ಅವರು ಕರಗಲಿಲ್ಲ’ ಎಂದು ಸಕ್ರಿ ಹಳ್ಳಿಯ ಜಿ.ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಕ್ರಿಹಳ್ಳಿಯಿಂದ ಬರುವಾಗ ಗದಗ ಜಿಲ್ಲೆಯ ಮುಂಡರಗಿ ಬಳಿಯ ತಪಾಸಣಾ ಕೇಂದ್ರದಲ್ಲೂ ನಮ್ಮನ್ನು ತಡೆದಿದ್ದರು. ಕುರಿ ತರಲು ಹೊರಟಿರುವುದು ಮನವರಿಕೆಯಾದ ನಂತರ ಬಿಟ್ಟು ಕಳುಹಿಸಿದ್ದರು. ಆದರೆ ಇಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ಇಟ್ಟುಕೊಂಡಿದ್ದ ₹ 1,800 ಕೂಡ ತೆಗೆದುಕೊಂಡಿದ್ದರು’ ಎಂದು ಸುರೇಶ ಹೇಳಿದರು.

ಬೆಳಿಗ್ಗೆ ತಪಾಸಣಾ ಕೇಂದ್ರದ ಬಳಿ ಸಂತೆಗೆ ಹೊರಟ ಇನ್ನಷ್ಟು ರೈತರು ನೆರೆದಿದ್ದಾರೆ. ಅವರಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ. ಈ ವೇಳೆ ಕೆಲವರು ತಾಲ್ಲೂಕು ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

**

ರೈತರು ಕುರಿ ಕೊಳ್ಳಲು ಹೊರಟಿರುವುದು ಮನವರಿಕೆ<br/>ಯಾಯಿತು. ಸಿಬ್ಬಂದಿಯ ತಪ್ಪು ತಿಳಿವಳಿಕೆಯಿಂದ ಹೀಗೆ ಆಗಿದೆ. ಹಣ ಮರಳಿಸಲಾಗಿದೆ - ಪಿ.ರಮೇಶಕುಮಾರ, ಚುನಾವಣಾಧಿಕಾರಿ ಬಾದಾಮಿ ತಾಲ್ಲೂಕು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.