ADVERTISEMENT

‘ಕುರುಬ ಬದಲಿಗೆ ಕುರುಹು ಸೂಕ್ತ’

ಜಮಖಂಡಿ: ಶ್ರೀಗುರು ಮಾಳಿಂಗರಾಯ, ಸರಸ್ವತಿದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 5:32 IST
Last Updated 10 ಏಪ್ರಿಲ್ 2018, 5:32 IST

ಜಮಖಂಡಿ: ‘ಕುರುಬ ಎನ್ನುವ ಬದಲಾಗಿ ಕುರುಹು ಸೂಕ್ತವಾದ ಪದ ಎನಿಸುತ್ತದೆ. ಕುರುಹು ಎಂದರೆ ಗುರುತು. ಸಾವಿರ ಕುರಿಗಳ ಮಧ್ಯೆ ಕುರಿಮರಿವೊಂದು ತನ್ನ ತಾಯಿಯನ್ನು ಗುರುತಿಸಿ ಹೋಗುವ ಹಾಗೆ ಪ್ರತಿಯೊಬ್ಬರೂ ಮಾಳಿಂಗರಾಯನ ಸನ್ನಿಧಿ ಕಡೆಗೆ ಸಾಗಬೇಕು’ ಎಂದು ನಂದೇಶ್ವರ ಕಮರಿಮಠದ ದುಂಡೇಶ್ವರ ಶ್ರೀ ಹೇಳಿದರು.

ಇಲ್ಲಿಗೆ ಸಮೀಪದ ಕಡಪಟ್ಟಿ ಗ್ರಾಮದ ಶ್ರೀಗುರು ಮಾಳಿಂಗರಾಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀಗುರು ಮಾಳಿಂಗರಾಯ ಹಾಗೂ ಶ್ರೀ ಸರಸ್ವತಿದೇವಿ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಪರರಿಗೆ ಉಪಕಾರ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪುಣ್ಯ ಮಾಡಿ ಧನ್ಯರಾಗಬೇಕು. ಅದಕ್ಕಾಗಿ ಹಾಲುಮತದವರು ಮದ್ಯಪಾನ ತ್ಯಜಿಸಬೇಕು. ಹಾಲು ಹಾಲಾಗಿ ಇರಬೇಕು, ಹಾಲಾಹಲವಾಗಬಾರದು’ ಎಂದರು.

ADVERTISEMENT

ಕಡಪಟ್ಟಿಯ ಜಗದೀಶ್ವರ ವಿರಕ್ತಮಠದ ಪ್ರಮೀಳಾತಾಯಿ ಮಾತನಾಡಿ, ‘ಭಕ್ತಿಯಲ್ಲಿ ನಿಜವಾದ ಸುಖವಿದೆ. ಆದ್ದರಿಂದ ಎಲ್ಲರೂ ಭಕ್ತಿ ಮಾರ್ಗದಲ್ಲಿ ಸಾಗಬೇಕು’ ಎಂದರು.

ಮುಗಳಖೋಡದ ಅಭಿನವ ಯಲ್ಲಾಲಿಂಗ ಮಹಾರಾಜರು ಮಾತನಾಡಿ, ‘ನಾನು ನನ್ನದು ಎನ್ನವುದರಲ್ಲಿ ಸುಖವಿಲ್ಲ. ಪರರಿಗೆ ಸಹಾಯ ಮಾಡುವುದರಲ್ಲಿ ಸುಖವಿದೆ. ನಿಸ್ವಾರ್ಥ ಸೇವೆಯಲ್ಲಿ ನಿಜವಾದ ಸುಖವಿದೆ’ ಎಂದರು.

ಕುಂಚನೂರಿನ ಸಿದ್ಧಾಶ್ರಮದ ಮಾಧುಲಿಂಗ ಮಹಾರಾಜರು ಆಶೀರ್ವಚನ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಕುಲ್ಲೊಳ್ಳಿ ಮಾತನಾಡಿದರು. ಭಕ್ತ ಕನಕದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಗಪ್ಪ ಸನದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಮಾಳಿಂಗರಾಯ ಗದ್ದುಗೆ ಪೂಜಾರಿ ನಾಗಪ್ಪ ಮರನೂರ, ಕಡಪಟ್ಟಿಯ ಕಾಡಸಿದ್ಧೇಶ್ವರ ಮಠದ ಶ್ರೀಶೈಲ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ವಾಳೆನ್ನವರ, ರಾಮಣ್ಣ ಕಡಕೋಳ, ಡಾ.ಮಾಳೇಶ ಪೂಜಾರಿ, ಪ್ರಾಧ್ಯಾಪಕ ಡಾ.ಟಿ.ಪಿ. ಗಿರಡ್ಡಿ, ಪಿಎಸ್‌ಐ ನೀಲಮ್ಮ ನಿಂಗನೂರ, ನಿವೃತ್ತ ತಹಶೀಲ್ದಾರ್‌ ಮಹಮ್ಮದ ಬಾಗಲಕೋಟ, ಗ್ರಾಮ ಪ್ರಮುಖ ಗುರುಮೂರ್ತಯ್ಯ ಮಠಪತಿ, ಶಂಕರ ಸಂತಿ, ಡಾ.ವೈ.ವೈ. ಕೊಕ್ಕನವರ, ಬಿ.ಎನ್‌. ಅಸ್ಕಿ, ಆನಂದ ಗೊಂದಿ, ಲಕ್ಷ್ಮಣ ಯಮಗಾರ, ಪ್ರಕಾಶ ಮಲಕೈಗೋಳ, ಸಿದ್ರಾಮ ಬಜೇನಿ, ಭರಮಪ್ಪ ಪಡಸಲಗಿ, ಪರಶುರಾಮ ಗುದುಗಿಯವರ ವೇದಿಕೆಯಲ್ಲಿದ್ದರು.

ವಿಜಯಲಕ್ಷ್ಮಿ ಬ್ಯಾಕೋಡ ಪ್ರಾರ್ಥನೆ ಗೀತೆ ಹಾಡಿದರು. ಬಸವರಾಜ ಬಿರಾದಾರ ಭಂಡಾರ ನೃತ್ಯ ಪ್ರದರ್ಶನ ನೀಡಿದರು. ಜಗದೀಶ ಜಡಿಪೂಜಾರಿ ಸ್ವಾಗತಿಸಿದರು. ಮಲ್ಲಪ್ಪ ಮೇಳಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.