ADVERTISEMENT

ಗುರು ಸ್ವೀಕಾರ ಸಮಾರಂಭ 29ಕ್ಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:28 IST
Last Updated 22 ಏಪ್ರಿಲ್ 2017, 7:28 IST
ಕಲಾದಗಿ: ‘ಇಲ್ಲಿಯ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ನೇಮಕ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಹೋಗಲು ಲೋಕಾಪುರದ ಮಹಾಂತ ದೇವರು ಎಂಬುವವರನ್ನು ಗುರುವಾಗಿ ಸ್ವೀಕಾರ ಮಾಡಲಾಗುವುದು’ ಎಂದು ಸ್ಥಳೀಯ ವೀರಶೈವ ಸಮಾಜದ ಮುಖಂಡ ಕೆ.ಆರ್. ಬ್ಯಾಳಿ ತಿಳಿಸಿದರು.
 
ಪಟ್ಟಣದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಗುರುಲಿಂಗೇಶ್ವರ ಮಠದ ಭಕ್ತರನ್ನು ಕಡೆಗಣಿಸಿ ರಂಭಾಪುರಿ ಶ್ರೀಗಳು ನೇಮಕ ಮಾಡಿರುವ ಎಂ.ಕೆ.ಗಂಗಾಧರ ಸ್ವಾಮಿ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳುವ ಮಾತೆ ಇಲ್ಲ’ ಎಂದು ಪುನರುಚ್ಚರಿಸಿದರು.
 
ಮಠದಲ್ಲಿ ಗುರು ಇಲ್ಲದೇ ಕಳೆದೊಂದು ವರ್ಷದಿಂದ ಸಮಾಜದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದೇ 29ರಂದು ನಡೆಯಲಿರುವ ಬಸವಜಯಂತಿ ಕಾರ್ಯಕ್ರಮದಲ್ಲಿ ಮಹಾಂತದೇವರು  ಅವರನ್ನು ಗುರುವಾಗಿ ಸ್ವೀಕಾರ ಮಾಡುವ ಸಮಾರಂಭ ನಡೆಯಲಿದೆ. 
ಸುತ್ತಲಿನ 14 ಹಳ್ಳಿಗಳಲ್ಲಿನ ಸಮಸ್ತ ಸಮಾಜದ ಭಕ್ತರ ಸಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
 
ಮಹಾಂತ ದೇವರು ಅವರು ಸುತ್ತೂರು ಮಠದಲ್ಲಿ ಎಂಎ ಪದವಿ, ಸಂಸ್ಕೃತದಲ್ಲಿ ವಿದ್ವತ್ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
 
ಮಠಕ್ಕೆ ಗುರುಗಳಾಗಿ ಬರಲು ಅವರು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಇರುವ ಮಠದ ಉತ್ತರಾಧಿಕಾರಿ ನೇಮಕ ವಿವಾದ ಇತ್ಯರ್ಥ ಆಗುವವರೆಗೂ ಅವರಿಗೆ ಗ್ರಾಮದಲ್ಲಿ ವಾಸ್ತವ್ಯಕ್ಕೆ, ಪೂಜಾ ಕೈಂಕರ್ಯಗಳಿಗೆ ಸಕಲ ವ್ಯವಸ್ಥೆ ಮಾಡುವುದಾಗಿ ಹೇಳಿದರು.
 
ವೀರಶೈವ ಮುಖಂಡರಾದ ಎಸ್.ಎ. ಯಮಕನಮರಡಿ, ಪಿ.ಪಿ. ಸಗರಿ, ಎಸ್.ಎ. ಹೊಸೂರ, ಮಲ್ಲಯ್ಯ ಗಣಾಚಾರಿ, ನಂದಿಶ ಹೊಸೂರ, ಐ.ಎಂ. ಜಾಲಿಹಾಳ, ರಾಚಯ್ಯ ಮುದ್ದಿಮಠ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.