ADVERTISEMENT

ಗ್ರಾಹಕನ ಕೈಗೆಟಕುವ ಮಾವು

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:14 IST
Last Updated 14 ಮೇ 2017, 10:14 IST

ಬಾದಾಮಿ ಪಟ್ಟಣದ ಟಾಂಗಾ ನಿಲ್ದಾಣ ಮತ್ತು ಮ್ಯುಜಿಯಂ ರಸ್ತೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ವಹಿವಾಟು ಭರ್ಜರಿಯಾಗಿ ನಡೆದಿದೆ. ಏಪ್ರಿಲ್‌ ತಿಂಗಳಲ್ಲಿ ಮಾವಿನ ಹಣ್ಣು ಗ್ರಾಹಕರ ಕೈಗೆ ಎಟುಕದಂತಾಗಿತ್ತು. ಕಿಲೋಗೆ ₹ 100ರಿಂದ 180 ರವರೆಗೆ ದರ ಇತ್ತು. ಇದು ಮಾವು ಪ್ರಿಯರಿಗೆ ನಿರಾಶೆ ಮೂಡಿಸಿತ್ತು.  ಈಗ ಉತ್ತಮ ಹಣ್ಣು ಕಿಲೋ  ₹ 50 ರಿಂದ 200 ವರೆಗೆ ಸಿಗುತ್ತಿದೆ.  ಮೊದಲು ಡಜನ್‌ ಹಣ್ಣು ಕೊಳ್ಳಲು ₹ 400ರಿಂದ ₹ 600 ಕೊಡಬೇಕಿತ್ತು. ಈಗ  ₹ 200ಕ್ಕೆ ಸಿಗುತ್ತಿದೆ. 

ಹಿಂದೆಲ್ಲಾ ಪಟ್ಟಣದ ಪ್ರತಿ ಮನೆಯಲ್ಲಿ ಮಾವಿನ ಹಣ್ಣುಗಳ ಬಟ್ಟಿ ಇಡುತ್ತಿದ್ದರು. ಇಡೀ ಓಣಿಯೆಲ್ಲ ಮಾವಿನ ಪರಿಮಳದಿಂದ ತುಂಬಿರುತ್ತಿತ್ತು. ಹೊಲಗಳಲ್ಲಿ ಮಾವಿನ ಮರಗಳು ಕಡಿಮೆಯಾಗಿದ್ದು ಈಗ ಅಲ್ಲೊಂದು ಇಲ್ಲೊಂದು ಮರ ಕಾಣಬಹುದಾಗಿದೆ. ಜವಾರಿ ಹಣ್ಣುಗಳು ಈಗ ಸಿಗುತ್ತಿಲ್ಲ.

ಕ್ಯಾಲ್ಸಿಯಂ ಕಾರ್ಬೈಟ್‌ ಬಳಕೆ: ಮಾವು  ಬೇಗನೆ ಹಣ್ಣಾಗುವಂತೆ ಮಾಡಲು ಕೆಲವರು ಕ್ಯಾಲ್ಸಿಯಂ ಕಾರ್ಬೈಟ್‌ ರಾಸಾಯನಿಕವನ್ನು ಬಳಸು ತ್ತಾರೆ. ಇದರಿಂದ ಹಣ್ಣು ರುಚಿಯಾಗು ವುದಿಲ್ಲ ಜೊತೆಗೆ ಹಣ್ಣು ತಿನ್ನುವವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಲಿದೆ. ಹಾಗಾಗಿ ನೈಸರ್ಗಿಕ ಪದ್ಧತಿಯಿಂದ ಹಣ್ಣು ಮಾಡುವುದು ಸೂಕ್ತ.

ADVERTISEMENT

ಪಟ್ಟಣದ ಹಣ್ಣಿನ ವ್ಯಾಪಾರಿ ಲಾಲ್‌ಸಾಬ್‌ ಬಾಗವಾನ ಪ್ರತಿ ವರ್ಷ ಮಾವಿನ ಮರಗಳನ್ನು ಗುತ್ತಿಗೆ ಹಿಡಿಯುತ್ತಾರೆ. ಜೊತೆಗೆ ಬೇರೆಡೆ ಯಿಂದಲೂ ಮಾವಿನಕಾಯಿ ತರಿಸು ತ್ತಾರೆ.  ಕಾಯಿ ಮಾಗಿ ಪಾಡಿಗೆ ಬಿದ್ದಾಗ ಅವುಗಳನ್ನು ಮನೆಯಲ್ಲಿ ಹುಲ್ಲಿಗೆ (ಬಟ್ಟಿ) ಹಾಕಿ ಹಣ್ಣು ಮಾಡುತ್ತಾರೆ. ಇನ್ನೊಬ್ಬ ವ್ಯಾಪಾರಿ ಅನಿಲ್ ಕಲ್ಯಾಣಶೆಟ್ಟಿ ಕೂಡ  ನೈಸರ್ಗಿಕವಾಗಿ ಹುಲ್ಲು ಹಚ್ಚಿ ಹಣ್ಣು ಮಾಡುತ್ತಾರೆ. ಈ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ ಎಂಬುದು ಅವರ ಅಭಿಮತ.

ತಾಲ್ಲೂಕಿನಲ್ಲಿ 215 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಫೆನೆಶನ್‌, ಮಲ್ಲಿಕಾ, ಆಪೂಸ್‌, ತೋತಾಪುರಿ ಮತ್ತು ಕೇಸರ್‌ ತಳಿಯ ಮಾವು ಬೆಳೆಯುತ್ತಾರೆ. 1,500 ಟನ್‌ ಇಳುವರಿ ಬರಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿ.ವೈ. ಹಿರೇಕುರುಬರ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.