ADVERTISEMENT

ಡಿಕ್ಕಿ–ಬೈಕ್‌ ಸವಾರ ಸಾವು: ಪರಿಹಾರಕ್ಕೆ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:38 IST
Last Updated 24 ಏಪ್ರಿಲ್ 2017, 6:38 IST

ಜಮಖಂಡಿ: ತಾಲ್ಲೂಕಿನ ಮೈಗೂರ ಗ್ರಾಮದ ಹಳೆಯ ಶಾಲೆಯ ಹತ್ತಿರ ಭಾನುವಾರ ಮಧ್ಯಾಹ್ನ ಮೋಟರ್‌ ಬೈಕ್‌ ಮತ್ತು ಇಟ್ಟಿಗೆ ಬಟ್ಟಿ ಟ್ರ್ಯಾಕ್ಟರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೈಗೂರ ಗ್ರಾಮದ ವಿಜಯ ಪಡಸಾಲಿ(23) ಮೃತಪಟ್ಟ ಯುವಕ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಜುಂಝರವಾಡ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ಬಿದ್ದಿರುವ  ಕಾವೇರಿ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನೋಡಲು ವಿಜಯ ಅವರು ಮೋಟರ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಯುವಕನ ಶವವನ್ನು ರಸ್ತೆಯಲ್ಲಿಟ್ಟು, ಗ್ರಾಮಸ್ಥರು ಕೆಲಕಾಲ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಇಟ್ಟಿಗೆ ಬಟ್ಟಿಗಳ  ಮಾಲೀಕರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮೈಗೂರ ಗ್ರಾಮದ ಇಟ್ಟಿಗೆ ಬಟ್ಟಿಗಳನ್ನು ಬೇರೆಡೆ ಸ್ಥಳಾಂತರಿಸಲು ಅಥವಾ ಇಟ್ಟಿಗೆ ಬಟ್ಟಿಗಳ ಟ್ರ್ಯಾಕ್ಟರ್‌, ಲಾರಿಗಳ ಓಡಾಟಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸಿ ಕೊಡಲು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದರು.

ಪ್ರತಿಭಟನೆಗೆ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಈಗ ಅಪಘಾತ ಸಂಭವಿಸಿದ್ದರಿಂದ ಗ್ರಾಮಸ್ಥರು ಮತ್ತೆ ಪ್ರತಿಭಟನೆ ನಡೆಸಿದರು.ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಪಿ.ಎಸ್‌. ಚನಗೊಂಡ, ಸಿಪಿಐ ಸುನಿಲಕುಮಾರ ನಂದೇಶ್ವರ, ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಪಿ.ಎನ್‌. ಮನಗೂಳಿ ಭೇಟಿ ನೀಡಿದ್ದಾರೆ.ಆದರೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಅಪಘಾತದಲ್ಲಿ ಸಾವನ್ನಪ್ಪಿರುವ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ  ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.