ADVERTISEMENT

‘ತೇರು, ಜಾತ್ರೆ ಸಹಬಾಳ್ವೆ ಸಂಕೇತ’

ನಂದಿಕೇಶ್ವರ: ನೂತನ ನಂದಿ ಬಸವೇಶ್ವರ ರಥ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 6:10 IST
Last Updated 20 ಮಾರ್ಚ್ 2018, 6:10 IST
ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ನಂದಿಬಸವೇಶ್ವರ ನೂತನ ರಥದ ಲೋಕಾರ್ಪಣೆ ಸಮಾರಂಭದಲ್ಲಿ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಡಾ. ಸಂಗನಬಸವ ಶ್ರೀಗಳು ಮಾತನಾಡಿದರು
ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ನಂದಿಬಸವೇಶ್ವರ ನೂತನ ರಥದ ಲೋಕಾರ್ಪಣೆ ಸಮಾರಂಭದಲ್ಲಿ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಡಾ. ಸಂಗನಬಸವ ಶ್ರೀಗಳು ಮಾತನಾಡಿದರು   

ನಂದಿಕೇಶ್ವರ (ಬಾದಾಮಿ): ‘ಮನುಷ್ಯನು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ನೈತಿಕ ಮೌಲ್ಯಗಳು ಅವಶ್ಯ. ಸತ್ಯ, ನ್ಯಾಯ, ಪರೋಪಕಾರ ಮತ್ತು ಕ್ರಿಯಾಶೀಲಗುಣಗಳ ಅಳವಡಿಸಿಕೊಳ್ಳಬೇಕು’ ಎಂದು ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ ಹೇಳಿದರು.

ನಂದಿಕೇಶ್ವರ ಗ್ರಾಮದಲ್ಲಿ ಭಾನುವಾರ ನೂತನ ನಂದಿಬಸವೇಶ್ವರ ರಥದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತೇರು ಮಾನವನ ದೇಹದ ಸಂಕೇತ. ನಮ್ಮ ಬಾಳ್ವೆಯೆಂಬ ಬದುಕಿನ ರಥವು ಎಲ್ಲ ಜನತೆಯ ಜೊತೆಗೆ ಸೌಹಾರ್ದದಿಂದ ಸರಿಯಾಗಿ ನಡೆಯಬೇಕು ಎಂದರು.

ADVERTISEMENT

ಕೋಡಿಮಠದ ಶಿವಾನಂದ ಶ್ರೀಗಳು ಮಾತನಾಡಿ, ‘ಭಾರತೀಯ ಪರಂಪರೆಯಲ್ಲಿ ತೇರಿಗೆ ಮಹತ್ವದ ಸ್ಥಾನವಿದೆ. ಯಾವುದೇ ಜಾತಿ ಮತ ಪಂಥವೆನ್ನದೇ ಸಾವಿರಾರು ಜನರು ಒಗ್ಗಟ್ಟಾಗಿ ತೇರನ್ನು ಶ್ರದ್ಧೆ ಭಕ್ತಿಯಿಂದ ಎಳೆಯುತ್ತಾರೆ’ ಎಂದು ಹೇಳಿದರು.

ಬಾಳು ಹಣ್ಣಾಗಬೇಕು, ಹಸನಾಗಬೇಕು, ಹಣ್ಣಿನಂತೆ ರುಚಿಯಾಗಬೇಕು ಎಂಬ ಸಂಕೇತವಾಗಿ ರಥಕ್ಕೆ ಬಾಳೆಹಣ್ಣು ಹಾಗೂ ಮನುಷ್ಯರು ಹಣ್ಣಾಗಿ ಬಾಡಿ ಗಟ್ಟಿಯಾಗಿ ರುಚಿಯಾಗುವುದರ ಸಂಕೇತವಾಗಿ ಉತ್ತತ್ತಿ ಎಸೆಯುವುದರ ಬಗ್ಗೆ ಶ್ರೀಗಳು ಮಾರ್ಮಿಕವಾಗಿ ಹೇಳಿದರು.

‘ಭೂಮಿ, ನೀರು, ಮಳೆ, ಗಾಳಿ,ಬೆಳೆ ಮತ್ತು ಅನ್ನ ಇವೆಲ್ಲ ಭಗವಂತನದು. ಉತ್ಸವ, ದಾನ, ಧರ್ಮದ ಮೂಲಕ ಭಗವಂತನ ಆರಾಧನೆ ಮಾಡಬೇಕು. ಮಾನವ ಚಿಂತನೆ ಮಾಡಬೇಕು ಮೌಲ್ಯಗಳನ್ನು ಕಳೆದುಕೊಳ್ಳಬಾರದು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ರೈತರು ನಮ್ಮ ಸಂಸ್ಕೃತಿಯ ರೂವಾರಿಗಳು. ಅವರು ದಾನದ ರೂಪದಲ್ಲಿ ಕೊಟ್ಟ ಹಣದಲ್ಲಿ ನಿರ್ಮಿಸಿದ ನೂತನ ತೇರು ಅತ್ಯಂತ ಪವಿತ್ರವಾದದ್ದಾಗಿದೆ’ ಎಂದರು.

ಕಾಶಿನಾಥ ಶ್ರೀಗಳು, ಒಪ್ಪತ್ತೇಶ್ವರ ಶ್ರೀಗಳು, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಜೆಡಿಎಸ್‌ ಮುಖಂಡ ಹನುಮಂತ ಮಾವಿನಮರದ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಥಶಿಲ್ಪಿ ಮಹೇಶ ಹೆಬ್ಬಳ್ಳಿ ದಂಪತಿ ಮತ್ತು ರಥದ ಗಾಲಿ ನಿರ್ಮಿಸಿದ ಕಲಾವಿದರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ಗ್ರಾಮದಲ್ಲಿ ನಂದಿಬಸವೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಕಳಶದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು.

ಬಾಲಪ್ರಭು ಸಿದ್ಧರಾಮ ಸ್ವಾಮೀಜಿ, ಮಳೆ ರಾಜೇಂದ್ರ ಸ್ವಾಮೀಜಿ, ಯಚ್ಚರೇಶ್ವರ ಸ್ವಾಮೀಜಿ, ಡಾ. ಭಾಗ್ಯಶ್ರೀ ಪಾಟೀಲ, ಕುಮಾರಗೌಡ ಜನಾಲಿ, ಬಸಪ್ಪ ಭೂತಾಳಿ, ಶಿವನಪ್ಪ ಹುಲಸಗೇರಿ, ದ್ಯಾಮಣ್ಣ ಹುಲ್ಲೂರ, ಮಹಾಗುಂಡಪ್ಪ ಅಂಬಿಗೇರ, ಬಸವರಾಜ ತಳವಾರ, ಶಿವಪ್ಪ ಕೋಟಿಕಲ್‌ ಇದ್ದರು.

ಎಂ.ಬಿ. ಹಂಗರಗಿ ಸ್ವಾಗತಿಸಿದರು. ಎಂ.ಕೆ. ಕೆರಿಹೊಲದ ನಿರೂಪಿಸಿದರು. ಪ್ರಕಾಶ ಕಲಶಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.