ADVERTISEMENT

ಫಲಾನುಭವಿ ಮನೆಗೆ ಹೊಸ ಕಾರ್ಡ್

ಜಿಲ್ಲೆಯಲ್ಲಿ ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆ ಜೋಡಣೆಗೆ ಒಂದು ವಾರ ಗಡುವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 9:03 IST
Last Updated 24 ಜುಲೈ 2017, 9:03 IST

ಬಾಗಲಕೋಟೆ: ‘ಚಾಲ್ತಿಯಲ್ಲಿರುವ ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್‌ಗೆ ಜೋಡಣೆ ಮಾಡುವಂತೆ’ ಇಲಾಖೆಯ ಅಧಿಕಾರಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಪಡಿತರ ಚೀಟಿ ವಿತರಣೆ ಕಾರ್ಯದಲ್ಲಿ ಆಹಾಯ ಇಲಾಖೆಗೆ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆರವಾಗುವಂತೆ’ ಕೋರಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಹಯೋಗ ನೀಡಬೇಕಿದೆ. ತಮ್ಮ ವ್ಯಾಪ್ತಿಯ ಎಲ್ಲಾ ಫಲಾನುಭವಿ ಕುಟುಂಬಗಳಿಗೂ ಪಡಿತರ ಚೀಟಿ ದೊರೆಯುವಂತೆ ಹಾಗೂ ಆಧಾರ್‌ಗೆ ಜೋಡಣೆಯಾಗುವಂತೆ ಆಯಾ ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ನಿಗಾ ವಹಿಸಬೇಕು. ತಹಶೀಲ್ದಾರರು ಕಡ್ಡಾಯವಾಗಿ ಇದರ ಪ್ರಗತಿ ಪರಿಶೀಲಿಸಿ ಇನ್ನೊಂದು ವಾರದಲ್ಲಿ ಈ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಗಡುವು ನೀಡಿದರು.

ADVERTISEMENT

ಎಲ್ಲಾ ಅರ್ಹ ಫಲಾನುಭವಿಗಳಿಗೂ ಪಡಿತರ ಚೀಟಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಇಲಾಖೆಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಒಟ್ಟು 14.70 ಲಕ್ಷ ಹೊಸ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸ್ವೀಕರಿಸಲಾಗಿದೆ. ಅವುಗಳನ್ನು ಪರಿಶೀಲಿಸಿ ಹೊಸ ಕಾರ್ಡ್‌ಗಳನ್ನು ಅಂಚೆ ಮೂಲಕ ಫಲಾನುಭವಿಗಳ ಮನೆಗಳಿಗೆ ತಲುಪಿಸಲಾಗುತ್ತದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 3,26428 ಕುಟುಂಬಗಳು ಪಡಿತರ ವಿತರಿಸಲಾಗಿದೆ. ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಿಗೆ ಶೇ 99 ರಷ್ಟು ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸರ್ಕಾರದ ಹೊಸ ಆದೇಶದ ಅನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿ.ಕೆ.ಪಿ.ಎಸ್), ಹಾಪ್‌ಕಾಮ್ಸ್, ಹಾಲು ಉತ್ಪಾದಕರ ಸಹಕಾರಿ ಸಂಘ, ಟಿಎಪಿಸಿಎಮ್ಎಸ್, ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳಿಗೆ ನೇರವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಆಧಾರ್ ಆಧಾರಿತ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಹಾಗೂ 164 ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೆ 64,208 ಬಿಪಿಎಲ್ ಹಾಗೂ 3694 ಎಪಿಎಲ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 5057 ಬಿಪಿಎಲ್ ಹಾಗೂ 3028 ಎಪಿಎಲ್ ಪಡಿತರ ಚೀಟಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಉಳಿದ ಅರ್ಜಿಗಳ ವಿಲೇವಾರಿ ಕಾರ್ಯ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪ್ರಗತಿಯಲ್ಲಿರುತ್ತದೆ ಎಂದರು.

ಪಡಿತರ ಚೀಟಿದಾರರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳು 7ನೇ ತಾರೀಖು ಆಹಾರ ಅದಾಲತ್ ನಡೆಸ ಲಾಗುತ್ತದೆ. ಜಿಲ್ಲೆಯ 682 ನ್ಯಾಯಬೆಲೆ ಅಂಗಡಿಗಳ ಪೈಕಿ 311 ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ (pos) ಯಂತ್ರ ಅಳವಡಿಸಲಾಗಿದೆ. ಪಡಿತರ ಚೀಟಿ ದಾರರು ಆಧಾರ ಆಧಾರಿತ ಬಯೋ ದೃಢೀಕರಣ ನೀಡಿ ಪಡಿತರ ವಸ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಉಳಿದ ನ್ಯಾಯಬೆಲೆ ಅಂಗಡಿಕಾರರು ತಮ್ಮ ನೋಂದಾಯಿತ ಮೊಬೈಲ್ ಮೂಲಕ ಐವಿಆರ್ಎಸ್ ಮಾಡಿ ಪಡಿತರ ಚೀಟಿದಾರರ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್‌ಗೆ ರವಾನಿಸಬೇಕಿದೆ ಎಂದು ಸಭೆಗೆ ತಿಳಿಸಲಾಯಿತು.

ಶಾಸಕ ಎಚ್.ವೈ.ಮೇಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಸುರಳಕರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.