ADVERTISEMENT

ಬಡ್ತಿ ಮೀಸಲಾತಿ: ಹೋರಾಟ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 6:39 IST
Last Updated 27 ಜುಲೈ 2017, 6:39 IST
ಸೇವಾ ಜ್ಯೇಷ್ಠತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಾಲನೆ ಮಾಡುವಂತೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಅಹಿಂಸಾ ವರ್ಗದ ನೌಕರರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು
ಸೇವಾ ಜ್ಯೇಷ್ಠತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಾಲನೆ ಮಾಡುವಂತೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಅಹಿಂಸಾ ವರ್ಗದ ನೌಕರರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು   

ಬಾಗಲಕೋಟೆ: ‘ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆದೇಶ ಪಾಲನೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಹೋರಾಟ ಅನಿವಾರ್ಯವಾಗಿದೆ’ ಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರ ಒಕ್ಕೂಟದ (ಅಹಿಂಸಾ) ರಾಷ್ಟ್ರೀಯ ಅಧ್ಯಕ್ಷ ಎಂ.ನಾಗರಾಜ ಅಭಿಪ್ರಾಯ ಪಟ್ಟರು.

ನಗರದ ಅಂಜುಮನ್ ಕಾಲೇಜು ಮೈದಾನದಲ್ಲಿ ಬುಧವಾರ ಅಹಿಂಸಾ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿರು.
ಬಡ್ತಿ ವಿಚಾರದಲ್ಲಿ ಈಗಾಗಲೇ ನಮಗೆ ಆಗಿರುವ ಅನ್ಯಾಯ ನಮ್ಮ ಮುಂದಿನ ಪೀಳಿಗೆಗೂ ಮುಂದುವರಿಯಬಾರದು ಎಂಬ ಉದ್ದೇಶದಿಂದ ಸಂಘಟನೆ ಹೋರಾಟ ಕೈಗೆತ್ತಿಕೊಂಡಿದೆ.

ಅಹಿಂಸಾ ವರ್ಗದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬಂದಿದ್ದರು ಸರ್ಕಾರ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ನಮ್ಮ ರಾಜಕಾರಣಿಗಳಿಗೆ ಸಂವಿಧಾನ ಓದುವ ವ್ಯವಧಾನ ಇಲ್ಲವೋ ಅಥವಾ ಜಾಣ ಕುರುಡೊ ಎಂಬುದು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸುಪ್ರೀಂಕೋರ್ಟ್ ಎಲ್ಲರೂ ಅರ್ಥಮಾಡಿಕೊಳ್ಳುವಂತಹ ಸರಳ ತೀರ್ಪು ನೀಡಿದೆ. ಅದನ್ನು ಅರ್ಥಮಾಡಿಕೊಳ್ಳದ ರಾಜಕಾರಣಿಗಳು ತಮ್ಮ ಯೋಗ್ಯತೆ ಏನು ಎಂಬುದನ್ನು ಪ್ರದರ್ಶಿಸುತ್ತಿದ್ದಾರೆ. ಬಡ್ತಿ ಯಲ್ಲಿ ಮೀಸಲಾತಿ ಕೊಡಬೇಡಿ ಎಂದು ನಾವು ಯಾರಿಗೂ ಹೇಳಿಲ್ಲ. ಸಂವಿಧಾನದ ಪ್ರಕಾರ ಆಯಾವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿ ಎಂದು ಒತ್ತಾಯಿಸಿದರು.

ಆರು ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಮೀಸಲಾತಿ ಕಡಿತಗೊಳಿಸಿ ಎಂದು ನ್ಯಾಯಾಲಯ ಹೇಳಿದೆ. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರಿದಿದ್ದಾರೆ. ಅಂತವರಿಗೆ ಮೀಸಲಾತಿ ಏಕೆ ಬೇಕು ಎಂದು ಪ್ರಶ್ನಿಸಿದರು.

ಒಕ್ಕೂಟದ ಮುಖಂಡ ವೀರಣ್ಣ ಹಲಕುರ್ಕಿ ಮಾತನಾಡಿ, ‘ಸರ್ಕಾರದಿಂದ ಅಹಿಂಸಾ ವರ್ಗದ ನೌಕರರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಸುಪ್ರೀಂಕೋರ್ಟ್ ಹೇಳಿದ್ದರೂ ಸರ್ಕಾರ ಅದಕ್ಕೆ ಮುಂದಾಗುತ್ತಿಲ್ಲ. ಈ ವಿಚಾರದಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದು ಬೇಸರ  ವ್ಯಕ್ತಪಡಿಸಿದರು.

‘ಮನೆಯಲ್ಲಿ ಕುಳಿತು ಹೋರಾಟಕ್ಕೆ ಬೆಂಬಲ ನೀಡದೇ ಸಂಘಟನೆಯ ಚಟುವಟಿಕೆಗಳಲ್ಲಿ ಎಲ್ಲರೂ ಕೈಜೋಡಿಸಿ ಒಗ್ಗಟ್ಟಾಗಿ ಹೋರಾಡಬೇಕು. ನಮ್ಮ ಹಕ್ಕುಗಳ ಪಡೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದರು.

ಕೆರೂರಿನ ಚರಂತಿಮಠದ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ದ್ದರು. ಅಹಿಂಸಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ನಾಡಗೌಡ, ಕರ್ನಾಟಕ ಎಂಜಿನಿಯರಿಂಗ್ ಸೇವಾ ಸಂಘದ ಗೌರವಾಧ್ಯಕ್ಷ ಶಿವಾನಂದ ಹೂಗಾರ, ಶಾಬಾದಿ, ನಸಲಾಪುರೆ, ಜೆ.ವಿ. ಕಿರಸೂರು, ಎಸ್‌.ಬಿ.ಕರ್ಣಿ, ಎಸ್‌.ಎಸ್.ಪಾಟೀಲ, ಅಶೋಕ ಲಾಗಲೋಟಿ, ಡಾ.ಮಾಸೂರಕರ, ಶಿವಾನಂದ ಕಣವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.