ADVERTISEMENT

ಬಣ್ಣಗಳಲ್ಲಿ ಮಿಂದೆದ್ದ ಬಾಗಲಕೋಟೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:35 IST
Last Updated 15 ಮಾರ್ಚ್ 2017, 6:35 IST
ಹೋಳಿ ಹಬ್ಬದ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಮಂಗಳವಾರ ಸತತ ಎರಡನೇ ದಿನ ಬಣ್ಣದಾಟ ಮುಂದುವರೆದಿದೆ. ಬಸವೇಶ್ವರ ಕಾಲೇಜು ಬಳಿ ಬಣ್ಣದ ನೀರು ತುಂಬಿದ್ದ ಬ್ಯಾರಲ್‌ಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಮುಖಾಮುಖಿಯಾದಾಗ ಸಾರ್ವಜನಿಕರು ಪರಸ್ಪರ ಬಣ್ಣ ಎರಚಾಡಿದರು  ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ
ಹೋಳಿ ಹಬ್ಬದ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಮಂಗಳವಾರ ಸತತ ಎರಡನೇ ದಿನ ಬಣ್ಣದಾಟ ಮುಂದುವರೆದಿದೆ. ಬಸವೇಶ್ವರ ಕಾಲೇಜು ಬಳಿ ಬಣ್ಣದ ನೀರು ತುಂಬಿದ್ದ ಬ್ಯಾರಲ್‌ಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಮುಖಾಮುಖಿಯಾದಾಗ ಸಾರ್ವಜನಿಕರು ಪರಸ್ಪರ ಬಣ್ಣ ಎರಚಾಡಿದರು ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ   

ಬಾಗಲಕೋಟೆ: ಬೆಳಿಗ್ಗೆಯಿಂದಲೇ ವಿದ್ಯಾಗಿರಿ, ನವನಗರ, ಹಳೆ ಬಾಗಲಕೋಟೆ ಕಿಲ್ಲಾಪೇಟೆ, ಜೈನಪೇಟೆ, ಹಳೆಪೇಟೆಯ ಪ್ರಮುಖ ಬೀದಿಗಳಲ್ಲಿ ಹೋಳಿ ಹಬ್ಬ ಸಂಭ್ರಮ ಮನೆ ಮಾಡಿತ್ತು. ಒಬ್ಬರಿಗೊಬ್ಬರು ಬಣ್ಣಗಳನ್ನು ಹಚ್ಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಪರೀಕ್ಷೆಗಳ ಚಿಂತೆ ಮರೆತು ಮಕ್ಕಳು, ವಿದ್ಯಾರ್ಥಿಗಳು ಬಣ್ಣಗಳೊಂದಿಗೆ ನಲಿದಾಡಿದರು. ಪೋಷಕರಿಗೆ ಮಾತ್ರ ಬಣ್ಣ ಹಿಡಿದು ಓಡುವ ಮಕ್ಕಳನ್ನು ಕರೆತರುವುದೇ ಚಿಂತೆ ಒಂದು ಕಡೆಯಾಗಿತ್ತು.

ನೀರಿನ ಸಮಸ್ಯೆಯಿಂದ ಈ ಬಾರಿ ಹೋಳಿ ಆಚರಣೆ ಸ್ವಲ್ಪ ಮಟ್ಟಿಗೆ ಕಳೆಗುಂದಿದೆ. ಅದನ್ನು ಹೊರತುಪಡಿಸಿ, ಬಿಸಿಲಿನ ಝಳವನ್ನು ಲೆಕ್ಕಿಸದೇ ಅನೇಕ ಭಾಗಗಳಲ್ಲಿ ಬಾಟಲಿಗಳಲ್ಲಿ ರಂಗು ರಂಗಿನ ನೀರನ್ನು ತುಂಬಿಸಿ ಪರಸ್ಪರ ಎರಚಿಕೊಂಡರು. ವಿದ್ಯಾಗಿರಿ, ನವನಗರ, ಕಿಲ್ಲಾ, ಜೈನಪೇಟೆಯಲ್ಲಿ ಮಕ್ಕಳು ಬಕೆಟು, ಬಾಟಲಿಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಓಕುಳಿಯ ಮಜ್ಜನ ಮಾಡಿ ಖುಷಿಪಟ್ಟರು.

ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು. ಹತ್ತಾರು ಎತ್ತಿನ ಗಾಡಿ, ಟ್ರಾಕ್ಟರ್‌ಗಳಲ್ಲಿ ಒಂದೊಂದು ಓಣಿಯವರು ಕನಿಷ್ಟ 10ರಿಂದ 20 ಎತ್ತಿನ ಗಾಡಿಗಳಲ್ಲಿ, ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ ಹಾಗೂ  ಬ್ಯಾರಲ್‌ ಇಟ್ಟು ಅವುಗಳಲ್ಲಿ ಬಣ್ಣ ತುಂಬಿ ಕೇಕೇ ಹಾಕುತ್ತಾ ಬಣ್ಣ ಎರಚುತ್ತಿರುವುದು ದೃಶ್ಯಗಳು ಸಾಮಾನ್ಯವಾಗಿತ್ತು.

ADVERTISEMENT

ಪ್ರಮುಖ ಆಕರ್ಷಣೆ ಸೋಗಿನ ಬಂಡಿಗಳು: ಹೋಳಿ ಹಬ್ಬದ ವೇಳೆ ಸೋಗಿನ ಬಂಡಿಗಳ ಪ್ರದರ್ಶನ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ರಾರಾಜಿಸುತ್ತಿದ್ದವು. ಪೌರಾಣಿಕ ಸನ್ನಿವೇಶದ ರಾಮನ ಪಟ್ಟಾಭೀಷೇಕ, ದ್ರೌಪದಿ ವಸ್ತ್ರಾಪಹರಣ ಸೇರಿದಂತೆ ಹತ್ತು ಹಲವು ಸನ್ನಿವೇಶಗಳು ನೋಡುಗರ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು.

ಅಘೋಷಿತ ಬಂದ್‌ ವಾತಾವರಣ
ಇಳಕಲ್:
‘ಹೋಳಿ ಹಬ್ಬದ ಬಣ್ಣದಾಟ ಔಪಚಾರಿಕವಾಗಿದೆ. ಚಿಕ್ಕ ಮಕ್ಕಳು ಹಾಗೂ ಕೆಲವು ಯುವಕರನ್ನು ಬಿಟ್ಟರೇ ಬಣ್ಣ ಆಡುವವರು ರಸ್ತೆಯಲ್ಲಿ ಕಾಣಿಸಲೇ ಇಲ್ಲ. ಮಧ್ಯಾಹ್ನದ ಹೊತ್ತು ಪ್ರತಿಯೊಂದು ರಸ್ತೆಗಳೂ ನಿರ್ಜನವಾಗಿದ್ದವು. ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಕಂಡು ಬಂದಿತು.

ಬಣ್ಣದ ಸಂದರ್ಭದಲ್ಲಿ ಮಾರುಕಟ್ಟೆ 2 ದಿನ ಬಿಕೋ ಎನ್ನುವ ಕಾರಣ  ವ್ಯಾಪಾರಸ್ಥರು ಅಂಗಡಿ ಬಂದ್‌ ಮಾಡಿಕೊಂಡು ಗೋವಾ, ಮುಂಬೈಗೆ ತೆರಳಿದ್ದಾರೆ. ನಗರದ ಅನೇಕ ಶಾಲೆಗಳು 2 ದಿನ ರಜೆ ನೀಡಿದ ಕಾರಣ ಅನೇಕರು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ. ಬಣ್ಣದಾಟದ ಗೊಡವೆ ಬೇಡ ಎಂದು ನಗರದಿಂದ ಹೊರ ಹೋಗುವವರ ಸಂಖ್ಯೆ ಹೆಚ್ಚಾದ ಕಾರಣ  ಈ ಸಂದರ್ಭದಲ್ಲಿ ಬಾಡಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅಲ್ಲಲ್ಲಿ ಚಿಣ್ಣರು, ಯುವಕರು ತಮ್ಮ ನೆರೆಹೊರೆಯ ಗೆಳೆಯರೊಂದಿಗೆ ಬಣ್ಣ ಆಡಿ ಸಂಭ್ರಮಿಸಿದರು. ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಹಾಗೂ ಕಿಡಿಗೇಡಿಗಳು ಅಪಾಯಕಾರಿ ಬಣ್ಣಗಳನ್ನು ಬಳಸುವ ಕಾರಣ ಅನೇಕರು ಬಣ್ಣದಿಂದ ದೂರ ಉಳಿದರು.

‘ಓಣಿಯವರು, ಬಡಾವಣೆಯವರು ಹಾಗೂ ಒಂದು ಊರಿನವರು ಎಂಬ ಸಾಂಘಿಕ ಮನೋಭಾವ ಕಡಿಮೆಯಾದ ಕಾರಣ ಹಾಗೂ ಜನರಲ್ಲಿ ಸ್ವಕೇಂದ್ರಿತ ಮನೋಭಾವ ಬೆಳೆಯುತ್ತಿರುವುದು ಕಾರಣ ಬಣ್ಣದ ಹಬ್ಬ ವರ್ಷದಿಂದ ವರ್ಷಕ್ಕೆ ಮಹತ್ವ ಕಳೆದುಕೊಂಡು ಕಳೆಗುಂದುತ್ತಿದೆ’ ಎಂದು ಇಲ್ಲಿಯ ಸ್ನೇಹರಂಗ ಕಾರ್ಯದರ್ಶಿ ಮಹಾದೇವ ಕಂಬಾಗಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.