ADVERTISEMENT

ಬನಶಂಕರಿ ಜಾತ್ರೆ; ನೂಕುನುಗ್ಗಲಿಗೆ ತಡೆ?

ರಥೋತ್ಸವದ ದಿನ ಜನದಟ್ಟಣೆ, ಭಕ್ತರು ಹೈರಾಣ; ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಲಿ: ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:19 IST
Last Updated 10 ಜನವರಿ 2017, 5:19 IST
ಕಳೆದ ವರ್ಷ ಬಾದಾಮಿ ತಾಲ್ಲೂಕು ಬನಶಂಕರಿ ಜಾತ್ರೆಯ ವೇಳೆ ಉಂಟಾಗಿದ್ದ ನೂಕು ನುಗ್ಗಲು   ಪ್ರಜಾವಾಣಿ ಸಂಗ್ರಹ ಚಿತ್ರ
ಕಳೆದ ವರ್ಷ ಬಾದಾಮಿ ತಾಲ್ಲೂಕು ಬನಶಂಕರಿ ಜಾತ್ರೆಯ ವೇಳೆ ಉಂಟಾಗಿದ್ದ ನೂಕು ನುಗ್ಗಲು ಪ್ರಜಾವಾಣಿ ಸಂಗ್ರಹ ಚಿತ್ರ   
ಬಾಗಲಕೋಟೆ: ಬಾದಾಮಿ ತಾಲ್ಲೂಕು ಬನಶಂಕರಿಯಲ್ಲಿ ಇದೇ 12ರಂದು ನಡೆಯಲಿರುವ ರಥೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಅಂದು ರಥಬೀದಿಯಲ್ಲಿ ಉಂಟಾಗುವ ಸಂಚಾರ ದಟ್ಟಣೆ, ನೂಕುನುಗ್ಗಲು ತಡೆಯಲು ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿ ಎಂಬುದು ಸ್ಥಳೀಯರ ಒತ್ತಾಯ.
 
ಜಾತ್ರೆ ನಡೆಯುವ ಪ್ರದೇಶದಲ್ಲಿ 10ಕ್ಕೂ ಹೆಚ್ಚು ನಾಟಕ ಕಂಪೆನಿಗಳು 5ರಿಂದ 6 ಸಿನಿಮಾ ಟೆಂಟ್‌ಗಳು ತಲೆ ಎತ್ತಲಿದ್ದು, ಜೊತೆಗೆ ವ್ಯಾಪಾರ–ವಹಿವಾಟು ಭರದಿಂದ ಸಾಗಿರುತ್ತದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ರಥೋತ್ಸ ವಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಜನದಟ್ಟಣೆ ಮತ್ತು ನೂಕು ನುಗ್ಗಲಿಗೆ ಕಾರಣವಾಗುತ್ತಿದೆ.
‘ಅಂದು ಸಂಜೆ ರಥೋತ್ಸವದ ನಂತರ ರಥಬೀದಿಯಲ್ಲಿ ಉಂಟಾಗುವ ನೂಕುನುಗ್ಗಲು ಭಕ್ತರನ್ನು ಹೈರಾಣಾಗಿಸುತ್ತದೆ. ಇದು ಪ್ರತಿ ವರ್ಷದ ಗೋಳು. ಮಹಿಳೆಯರು, ಮಕ್ಕಳು ಸಂಕಷ್ಟಕ್ಕೆ ತುತ್ತಾಗುತ್ತಾರೆ. ಜೊತೆಗೆ ಸರಗಳ್ಳರು, ಜೇಬುಕಳ್ಳರಿಗೆ ಅನುಕೂಲವಾಗುತ್ತದೆ. ಜನದಟ್ಟಣೆ ಹೆಚ್ಚಾದರೆ ಕಾಲ್ತುಳಿತಕ್ಕೆ ಕಾರಣವಾಗಿ ಅವಘಡ ಸಂಭವಿಸುವ ಅವಕಾಶವೂ ಇರುತ್ತದೆ’ ಎಂದು ಬಾದಾಮಿಯ ಸಾಮಾಜಿಕ ಹೋರಾಟಗಾರ ಇಷ್ಟಲಿಂಗ ಶಿರಸಿ ಆತಂಕ ವ್ಯಕ್ತಪಡಿಸುತ್ತಾರೆ.
 
ರಥೋತ್ಸವದ ದಿನ ಸಂಜೆ 4 ಗಂಟೆಯ ನಂತರ ವಾಹನ ಸಂಚಾರ ನಿಷೇಧಿಸಲಿ. ಜೊತೆಗೆ ಅಲ್ಲಿ ಅನಗತ್ಯವಾಗಿ ಓಡಾಡುವ ದ್ವಿ ಚಕ್ರವಾಹನ ಸವಾರರನ್ನು ನಿಯಂತ್ರಿಸಲಿ. ನಾಟಕ ಕಂಪೆನಿಗಳ ಪ್ರಚಾರ ವಾಹನಗಳೂ ದಟ್ಟಣೆಗೆ ಕಾರಣವಾಗುತ್ತಿದ್ದು, ರಥೋತ್ಸವ ಮುಗಿಯುವವರೆಗೂ ರಥಬೀದಿಯನ್ನು ಇಕ್ಕಟ್ಟಾಗಿಸುವ ವ್ಯಾಪಾರಿಗಳಿಗೆ ಅಲ್ಲಿ ಅವಕಾಶ ಮಾಡಿಕೊಡದಂತೆ ಇಷ್ಟಲಿಂಗ ಒತ್ತಾಯಿಸುತ್ತಾರೆ.
 
ಈ ಹಿಂದೆ ಜಿ.ಎನ್.ನಾಯಕ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ನೂಕುನುಗ್ಗಲು ಆಗದಂತೆ ತಡೆಯಲು ಕ್ರಮ ಕೈಗೊಂಡಿದ್ದರು. ಸಿಇಒ ಆಗಿದ್ದ ಎಸ್.ಎಸ್.ನಕುಲ್, ದೇವಸ್ಥಾನದ ಸಮೀಪ ಇರುವ ಚೊಳಚಗುಡ್ಡ ಗ್ರಾಮ ಪಂಚಾಯ್ತಿಗೆ ಸೇರಿದ 19 ಎಕರೆ ಜಾಗದಲ್ಲಿ ನಾಟಕ ಹಾಗೂ ಸಿನಿಮಾ ಟೆಂಟ್‌ಗಳನ್ನು ಹಾಕಲು ಯೋಜನೆ ಸಿದ್ಧಪಡಿಸಿದ್ದರು. ಅವರ ನಂತರ ಆ ಯೋಜನೆ ಅಲ್ಲಿಗೇ ಸ್ಥಗಿತಗೊಂಡಿತು ಎನ್ನುವ ಇಷ್ಟಲಿಂಗ, ಜಾತ್ರೆಯ ವೇಳೆ ದಟ್ಟಣೆ ಆಗದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಕಳೆದ ಅಕ್ಟೋಬರ್‌ನಿಂದಲೇ ಸಂಬಂಧಿಸಿ ದವರಿಗೆ ಮನವಿ ಮಾಡಲಾಗುತ್ತಿದೆ. ಯಾರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
 
***
ಈ ಬಾರಿ ರಥೋತ್ಸವದ ವೇಳೆ ಜನದಟ್ಟಣೆ ಆಗದಂತೆ ತಡೆ ಯಲು ವಾಹನ ಸಂಚಾರ ನಿಷೇಧಿಸ ಲಾಗುತ್ತಿದೆ. ಜಾತ್ರೆ ಸ್ಥಳದಿಂದ ದೂರ ದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ
-ಸಿ.ಬಿ.ರಿಷ್ಯಂತ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
 
***
ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ ಆದರೆ ಜಾಗ ಮಾತ್ರ ಅಷ್ಟೇ ಇದೆ. ವ್ಯಾಪಾರಿಗಳ ಹೊಟ್ಟೆ ಮೇಲೆ ಒಡೆಯಲು ಕ್ರಮಕ್ಕೆ ಒತ್ತಾಯಿಸುತ್ತಿಲ್ಲ
-ಇಷ್ಟಲಿಂಗ ಶಿರಸಿ,
ಸಾಮಾಜಿಕ ಕಾರ್ಯಕರ್ತ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.