ADVERTISEMENT

ಬಿಸಿಲಿಗೆ ಹಬ್ಬಿದ ಡೆಂಗಿ, ಎಚ್1ಎನ್1

ಸಾಂಕ್ರಾಮಿಕ ರೋಗದ ಆತಂಕ: ಇಬ್ಬರಿಗೆ ಆನೆಕಾಲು, 7 ಮಂದಿಗೆ ಮಲೇರಿಯಾ

ವೆಂಕಟೇಶ್ ಜಿ.ಎಚ್
Published 9 ಮಾರ್ಚ್ 2017, 11:46 IST
Last Updated 9 ಮಾರ್ಚ್ 2017, 11:46 IST
ಬಿಸಿಲಿಗೆ ಹಬ್ಬಿದ ಡೆಂಗಿ, ಎಚ್1ಎನ್1
ಬಿಸಿಲಿಗೆ ಹಬ್ಬಿದ ಡೆಂಗಿ, ಎಚ್1ಎನ್1   
ಬಾಗಲಕೋಟೆ:  ಬಿಸಿಲ ಝಳ ಏರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಡೆಂಗಿ, ಎಚ್1ಎನ್‌1, ಮಲೇರಿಯಾ, ಪೈಲೇರಿಯಾದ (ಆನೆಕಾಲು ರೋಗ) ಉಪಟಳ ಆರಂಭವಾಗಿದೆ.
ಜಿಲ್ಲೆಯಲ್ಲಿ 58 ಪ್ರಕರಣಗಳಲ್ಲಿ ಡೆಂಗಿ ಜ್ವರದ  ಶಂಕಿಸಲಾಗಿದೆ. ಅದರಲ್ಲಿ 31 ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 9 ಮಂದಿಗೆ ದೃಢಪಟ್ಟಿದೆ.

ಬಾಗಲಕೋಟೆ ತಾಲ್ಲೂಕು ಶಿರೂರಿನ ಮಹಿಳೆಯೊಬ್ಬರಿಗೆ ಎಚ್1ಎನ್1 ಬಾಧಿಸಿದೆ. ಹುನಗುಂದ ತಾಲ್ಲೂಕು ಕಮತಗಿ ಹಾಗೂ ಬಾದಾಮಿ ತಾಲ್ಲೂಕು ಕೆರೂರಿನಲ್ಲಿ ತಲಾ ಒಬ್ಬರು ಪೈಲೇರಿಯಾಗೆ ತುತ್ತಾಗಿದ್ದಾರೆ. ಹುನಗುಂದ ತಾಲ್ಲೂಕು ಚಿಕ್ಕಕೊಡಗಲಿ ತಾಂಡಾದ ಏಳು ಮಂದಿಗೆ ಮಲೇರಿಯಾ ದೃಢಪಟ್ಟಿದೆ.
 
38 ಕಡೆ ಲಾರ್ವಾ ಪತ್ತೆ:  ‘ಚಿಕ್ಕಕೊಡಗಲಿ ತಾಂಡಾದಲ್ಲಿ ಕಳೆದ ಐದು ದಿನಗಳಲ್ಲಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ. ಒಟ್ಟು 38 ಕಡೆ ಡೆಂಗೆ ಜ್ವರ ಹರಡುವ ಈಡಿಸ್‌ ಈಜಿಪ್ಟೈ ಸೊಳ್ಳೆಯ ಲಾರ್ವಾ ದೊರೆತಿದೆ. ಹೊಸದಾಗಿ ಎರಡು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಸಂಪೂರ್ಣ ತಾಂಡಾವನ್ನು ಡೆಂಗೆ ಪೀಡಿತ ಎಂದು ಘೋಷಿಸಲಾಗಿದೆ’ ಎಂದು ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ದಿಲೀಪ ಗಂಜಿಹಾಳ ‘ಪ್ರಜಾವಾಣಿ’ಗೆ ತಿಳಿಸಿದರು.
 
ಎಚ್1ಎನ್1 ಬಾಧಿಸಿರುವ ಶಂಕೆಯಲ್ಲಿ ಜಿಲ್ಲೆಯಲ್ಲಿ ಎಂಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಶಿರೂರಿನ ಶಾಂತಾ ರಾಮಪ್ಪ ಕೋಟಿಕಲ್ (40) ಎಂಬುವವರಿಗೆ ದೃಢಪಟ್ಟಿದ್ದು, ಅವರಿಗೆ ಇಲ್ಲಿನ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 
 
ಇಬ್ಬರಿಗೆ ಆನೆಕಾಲು ರೋಗ:  ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರು ಪೈಲೇರಿಯಾ (ಆನೆಕಾಲು ರೋಗ) ಪೀಡಿತರಾಗಿದ್ದಾರೆ. ಹುನಗುಂದ ತಾಲ್ಲೂಕು ಕಮತಗಿಯ ವ್ಯಕ್ತಿಯೊಬ್ಬರಿಗೆ ಹಾಗೂ ಬಾದಾಮಿ ತಾಲ್ಲೂಕು ಕೆರೂರಿನ ಮಹಿಳೆಯೊಬ್ಬರಿಗೆ ಎಂಬ ಮಹಿಳೆಗೆ ರೋಗ ಬಾಧಿಸಿದೆ. 
 
‘ಕೆರೂರು, ಕಮತಗಿ ಹಾಗೂ ಗುಳೇದಗುಡ್ಡದಲ್ಲಿ ಪೈಲೇರಿಯಾ ಹರಡುವ ಕ್ಯುಲೆಕ್ಸ್ ಎಂಬ ಸೊಳ್ಳೆಯಲ್ಲಿ ವೈರಸ್ ಇರುವುದು ಪತ್ತೆಯಾಗಿದೆ. ಈಗಾಗಲೇ ಮೂರು ಸ್ಥಳಗಳಲ್ಲೂ ಸೊಳ್ಳೆ ನಾಶಕ್ಕೆ ಧೂಮೀಕರಣದ ನಡೆಸಲಾಗಿದೆ. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಆಯಾ ಸ್ಥಳೀಯ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಎಮ್ಮಿ ತಿಳಿಸಿದರು.
 
ಏಳು ಮಂದಿಗೆ ಮಲೇರಿಯಾ:  ‘ಚಿಕ್ಕಕೊಡಗಲಿ ತಾಂಡಾದಲ್ಲಿ ಜ್ವರ ಪೀಡಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಏಳು ಮಂದಿಗೆ ಮಲೇರಿಯಾ ಇರುವುದು ಪತ್ತೆಯಾಗಿದೆ. ರೋಗ ನಿಯಂತ್ರಣಕ್ಕೆ ತಾಂಡಾದಲ್ಲಿ 665 ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. ಈ ಸೊಳ್ಳೆ ಪರದೆಗಳನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪರದೆಯ ಮೇಲೆ ಕುಳಿತರೇ ಸೊಳ್ಳೆಗಳು ಸಾಯಲಿವೆ’ ಎಂದು ಡಾ.ಜಯಶ್ರೀ ಮಾಹಿತಿ ನೀಡಿದರು. 
 
ಹುನಗುಂದ–ವೈದ್ಯರೇ ಇಲ್ಲ: ‘ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ 11 ಹುದ್ದೆಗಳಿಗೆ ಮಂಜೂರಾತಿ ಇದ್ದರೂ ಅಲ್ಲಿ ಕೇವಲ ಒಬ್ಬರು ವೈದ್ಯರು ಕೆಲಸ ಮಾಡುತ್ತಿದ್ದಾರೆ. ಹುನಗುಂದ ತಾಲ್ಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 4ರಲ್ಲಿ ಮಾತ್ರ ಎಂಬಿಬಿಎಸ್ ಮಾಡಿದ ವೈದ್ಯರು ಇದ್ದಾರೆ. ಹಾಗಾಗಿ ತಾಲ್ಲೂಕಿನಲ್ಲಿ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರ ಹೇಳುತ್ತಾರೆ.

ವರದಿ ಕೇಳಿದ ಆರೋಗ್ಯ ಇಲಾಖೆ..
ಚಿಕ್ಕಕೊಡಗಲಿ ತಾಂಡಾದ ನಿವಾಸಿಗಳು ಸಾಮೂಹಿಕವಾಗಿ ಜ್ವರ ಪೀಡಿತರಾದ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾರ್ಚ್‌ 15ರೊಳಗಾಗಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ ಮಾರ್ಚ್ 3ರಂದು ವಿಶೇಷ ವರದಿ ಪ್ರಕಟಿಸಿತ್ತು.

ತಾಂಡಾದಲ್ಲಿ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಕ್ಲಿನಿಕನ್ನು ಮಂಗಳವಾರ ಮುಚ್ಚಲಾಗಿದೆ. ಅಲ್ಲಿ 5 ದಿನಗಳಲ್ಲಿ ಒಟ್ಟು 124 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಹುನಗುಂದ ಹಾಗೂ ಇಳಕಲ್ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ ಕಾಯ್ದಿರಿಸಿ ಅಲ್ಲಿ ತಾಂಡಾದ ನಿವಾಸಿಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ಜಿಲ್ಲಾ ಲಸಿಕಾ ಅಧಿಕಾರಿ ಡಾ. ದಿಲೀಪ ಗಂಜಿಹಾಳ ಪ್ರಭಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.