ADVERTISEMENT

ಬೆನಕಟ್ಟಿ: ಭಕ್ತಿ-ಭಾವದ ಆಷಾಢ ಪರ್ವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:28 IST
Last Updated 16 ಜುಲೈ 2017, 10:28 IST

ಬೆನಕಟ್ಟಿ (ಬಾಗಲಕೋಟೆ): ತಾಲ್ಲೂಕಿನ ಬೆನಕಟ್ಟಿ ಗ್ರಾಮದ ಕಂಚಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ 'ಆಷಾಢ ಪರ್ವ'(ಎಂಕಂಚೆಪ್ಪನ ಪರು) ಶೃದ್ಧಾ-ಭಕ್ತಿಯಿಂದ ನಡೆಯಿತು. ಜೋಳದ ಕಿಚಡಿಯ ನೈವೇದ್ಯ ಹಬ್ಬದ ವಿಶೇಷವಾಗಿದ್ದು ಗ್ರಾಮದ ಪ್ರತಿ ಮನೆಯಿಂದ ಜೋಳದ ಕಿಚಡಿಯ ಗಡಿಗೆಯನ್ನು ಬುಟ್ಟಿಯಲ್ಲಿ ಹೊತ್ತ ಪುರುಷರು ಹನಮಂತ ದೇವರ ದೇವಸ್ಥಾನದ ಬಳಿ ಸೇರಿ ಬಾಜಾ- ಭಜಂತ್ರಿ, ಹಲಗೆ, ಡೊಳ್ಳುಮೇಳದೊಂದಿಗೆ ಮೆರವಣಿಗೆಯಲ್ಲಿ ಊರ ಹೊರವಲಯದ ಕಂಚಿ ವೆಂಕಟೇಶ್ವರ (ಎಂಕಂಚೆಪ್ಪ) ದೇವಸ್ಥಾನಕ್ಕೆ ಸಾಗಿದರು.

ಮಾರ್ಗದುದ್ದಕ್ಕೂ 'ವೆಂಕಟರಮಣ ಗೋವಿಂದಾ..ಗೋವಿಂದ..' ಎಂಬ ನಾಮಸ್ಮರಣೆ ಹೇಳುತ್ತಾ ಸಾಗಿ ಬಂದ ಗಡಿಗೆ ಹೊತ್ತ ಯುವಕರು, ರೈತರು, ದೇವಸ್ಥಾನದ ಕಟ್ಟೆಯ ಮೇಲೆ ತಾವು ತಂದಿದ್ದ ಜೋಳದ ಕಿಚಡಿಯನ್ನು ಒಂದೇ ರಾಶಿಯಲ್ಲಿ ಸುರಿದು ದೇವರಿಗೆ ನೈವೇದ್ಯ ಮಾಡಿ, ಗೋಪಾಳ ತುಂಬಿಸಿ ಈ ವರ್ಷ ಒಳ್ಳೆಯ ಮಳೆ, ಬೆಳೆ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಪೂಜಾ ಕಾರ್ಯಕ್ರಮಗಳನ್ನು ಪೂರೈಸಿದ ನಂತರ ಭಕ್ತರು  ಕಿಚಡಿ, ಕಟ್ಟಿನ ಸಾರು ಹಾಗೂ ಮಜ್ಜಿಗೆ ಸಾರು ಸವಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಸ್ಥಾನ ಸಮೀತಿ ಪದಾಧಿಕಾರಿಗಳು, ಯುವಕರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.