ADVERTISEMENT

‘ಬ್ಯಾರೇಜ್‌ಗಾಗಿ ರೈತರಿಂದ ಹಣ ಸಂಗ್ರಹ’

ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ರೈತರ ಪಕ್ಷಾತೀತ ಸಭೆ; ಶಾಸಕರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:42 IST
Last Updated 28 ಡಿಸೆಂಬರ್ 2016, 5:42 IST

ಜಮಖಂಡಿ:  ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ನ್ನು ಸರ್ಕಾರದ ವಶಕ್ಕೆ ನೀಡಿದ್ದರೆ ಸರ್ಕಾರವೇ ಬ್ಯಾರೇಜ್‌ ನಿರ್ವಹಣೆಯ ಹೊಣೆ ಹೊರುತ್ತಿತ್ತು. ಅದರ ಬದಲಾಗಿ ಶಾಸಕ ಸಿದ್ದು ನ್ಯಾಮಗೌಡ ಬ್ಯಾರೇಜ್‌ನ್ನು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ದೂರಿದರು.

ಈಚೆಗೆ ನಗರದ ನಂದಿಕೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಕೃಷ್ಣಾ ತೀರ ರೈತ ಸಂಘದ ಸಭೆಯಲ್ಲಿ ಶಾಸಕರು ಹಾಕಿದ್ದ ಸವಾಲಿಗೆ ಪ್ರತಿಯಾಗಿ ಇಲ್ಲಿನ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಕರೆದಿದ್ದ ರೈತರ ಪಕ್ಷಾತೀತ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕಪಡಸಲಗಿ ಬ್ಯಾರೇಜ್‌ ನಿರ್ಮಾಣ ಕುರಿತು ತಾಲ್ಲೂಕಿನ ಮುತ್ತೂರ ಹಾಗೂ ಆಲಗೂರ ಗ್ರಾಮದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಮಾಜಿ ಶಾಸಕ ಸಿದ್ದು ಸವದಿ ಹಾಗೂ ತಾವು ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದಾಗಿ ಹೇಳಿದರಲ್ಲದೆ ಬ್ಯಾರೇಜ್‌ ನಿರ್ಮಾಣಕ್ಕಾಗಿ ₹ 50 ಸಾವಿರ ಹಣವನ್ನು ರೈತರಿಂದ ವಂತಿಗೆ ಸಂಗ್ರಹಿಸಿ ನೀಡಿದ್ದಾಗಿ ಹೇಳಿದರು.

ಈ ಭಾಗದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಗೊಳ್ಳುತ್ತದೆ ಎಂಬ ಭರವಸೆಯ ಮೇರೆಗೆ ಕಾರ್ಖಾನೆ ನಿರ್ಮಾಣಕ್ಕೆ ಷೇರು ಸಂಗ್ರಹಣೆ ಸೇರಿದಂತೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲಾಗಿತ್ತು. ಆದರೆ, ರಾತ್ರೋರಾತ್ರಿ ಸಕ್ಕರೆ ಕಾರ್ಖಾನೆಯನ್ನು ತಮ್ಮ ಸ್ವಂತ ಮಾಲ್ಕೀಯ ಮಾಡಿಕೊಂಡರು ಎಂದು ಆರೋಪಿಸಿದರು.

ರಾಯಲ್‌ ಪ್ಯಾಲೇಸ್‌ ಸ್ಕೂಲ್‌ನಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ನೀಡುವ ಶುಲ್ಕದ ರಸೀದಿಯಲ್ಲಿ ಕೃಷ್ಣಾತೀರ ರೈತ ಸಂಘದ ಹೆಸರಿಗೆ ₹ 5 ಸಾವಿರ ಎಂದು ನಮೂದಿಸಲಾಗುತ್ತದೆ. ಆ ಹಣ ಎಲ್ಲಿ ಹೋಗುತ್ತದೆ. ರೈತ ಸಂಘಕ್ಕೆ ಬರುತ್ತದೆಯೋ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಎಲ್ಲ ಪ್ರಶ್ನೆಗಳಿಗೆ ಅವರು ಸಮರ್ಪಕ ಉತ್ತರ ನೀಡಬೇಕು. ಇದೇ 30 ರೊಳಗಾಗಿ ಲೆಕ್ಕಪತ್ರ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದರು.

ಮಾಜಿ ಶಾಸಕ ಸಿದ್ದು ಸವದಿ ಮಾತನಾಡಿ, ಖರ್ಚು–ವೆಚ್ಚದ ಲೆಕ್ಕಪತ್ರದ ಪ್ರತಿಯನ್ನು ಕೃಷ್ಣಾತೀರ ರೈತ ಸಂಘದ ಪ್ರತಿಯೊಬ್ಬ ಸದಸ್ಯರ ಮನೆಗೆ ಕಳುಹಿಸಬೇಕು. ಖರ್ಚು–ವೆಚ್ಚದ ಲೆಕ್ಕ ಕೇಳುವವರು ರೈತರ ಸಭೆಗೆ ಬರಬೇಕು ಎಂದು ಹೇಳುವುದು ಕಾನೂನಿನ ದೃಷ್ಟಿಯಲ್ಲಿ ಎಷ್ಟು ಸರಿ ಎಂದರು.

ಸಾರ್ವಜನಿಕರ ಹಣಕ್ಕೆ ಲೆಕ್ಕ ಕೇಳುವುದು ಕೃಷ್ಣಾತೀರ ರೈತ ಸಂಘದ ಸದಸ್ಯರ ಹಕ್ಕು. ಆದರೆ, ಲೆಕ್ಕ ಕೇಳುವವರನ್ನು ಒಬ್ಬೊಬ್ಬರನ್ನಾಗಿ ಸಂಘದಿಂದ ಹೊರ ಹಾಕುವ ತಂತ್ರ ಸರಿಯಲ್ಲ. ಈಗ ಕೃಷ್ಣಾತೀರ ರೈತ ಸಂಘದ ಅಧ್ಯಕ್ಷರು ಯಾರಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಶಾಸಕರೆ ಅಧ್ಯಕ್ಷರು, ಅವರೇ ಕಾರ್ಯದರ್ಶಿಗಳು ಎಂದು ಲೇವಡಿ ಮಾಡಿದರು.

ಚಿಕ್ಕಪಡಸಲಗಿ ಬ್ಯಾರೇಜ್‌ ನಿರ್ಮಾಣಕ್ಕೆ ಮುಂಚೆ ಮರಳಿನ ಚೀಲ ಇಟ್ಟು ನೀರು ಹಿಡಿದವರು ರೈತರು. ನಂತರ ಬ್ಯಾರೇಜ್‌ ನಿರ್ಮಾಣಕ್ಕೆ ರೈತರು ಮುಂದಾದ ಮೇಲೆ ಶಾಸಕರು ಸೇರಿಕೊಂಡಿದ್ದರು. ಅದನ್ನು ಮರೆತು ಬ್ಯಾರೇಜ್‌ ನಿರ್ಮಾಣ ನಡೆದಾಗ ನಾವೆಲ್ಲರೂ ಎಲ್ಲಿ ಇದ್ದೇವು ಎಂದು ಕೇಳುವುದೇಕೆ? ಎಂದು ಶಾಸಕರ ಸವಾಲಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಯಾರದೇ ಸರ್ಕಾರ ಬಂದರೂ ಬ್ಯಾರೇಜ್‌ ತುಂಬಿಸುವ ಕಾರ್ಯಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಬೇಕು ಎಂದು ಸಭೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಒಪ್ಪಿಗೆ ಸೂಚಿಸಿದ್ದೆವು. ಅದಕ್ಕೆ ಶಾಸಕರು ಸಹ ಒಪ್ಪಿಗೆ ಸೂಚಿಸಿದ್ದರು. ಆದಾಗ್ಯೂ, ಈಗ ಬ್ಯಾರೇಜ್‌ ತುಂಬಿಸಲು ರೈತರಿಂದ ವಂತಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿದರು.

ಜಮಖಂಡಿ ಶುಗರ್‌್ಸನ್ನು ರೈತರಿಗೆ ಒಪ್ಪಿಸಿ ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಇನ್ನೊಂದು ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಿಕೊಳ್ಳಲಿ ಎಂದು ಶಾಸಕರಿಗೆ ಮರು ಸವಾಲು ಹಾಕಿದರು.

ಮುಖಂಡ ಬಿ.ಎಸ್‌. ಸಿಂಧೂರ, ರಾಜು ಮೇಲಿನಕೇರಿ, ಶ್ರೀಶೈಲ ದಳವಾಯಿ, ಸುಶೀಲಕುಮಾರ ಬೆಳಗಲಿ, ರಾಜು ಮಸಳಿ ಮತ್ತಿತರರು ಮಾತನಾಡಿದರು. ಇಲಾಹಿ ಕಂಗನೊಳ್ಳಿ, ಜಿ.ಪಂ. ಸದಸ್ಯ ಪುಂಡಲೀಕ ಪಾಲಬಾವಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸಪ್ಪ ಬಿರಾದಾರ, ರಾಜುಗೌಡ ಪಾಟೀಲ, ಶಿವಾನಂದ ಪಾಟೀಲ, ಎಂ.ಎಂ. ಹಟ್ಟಿ, ಟಿ.ಎ. ಬಿರಾದಾರ  ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.