ADVERTISEMENT

ಮಸೀದಿ ನಿರ್ಮಾಣ: ಬಗೆಹರಿದ ವಿವಾದ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 6:46 IST
Last Updated 26 ಜುಲೈ 2017, 6:46 IST

ಜಮಖಂಡಿ: ತಾಲ್ಲೂಕಿನ ಬುದ್ನಿ ಗ್ರಾಮದಲ್ಲಿ ಅನಧಿಕೃತವಾಗಿ ಹೆಚ್ಚುವರಿ ಜಾಗವನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಲು ಮುಂದಾಗಿದ್ದ ಘಟನೆಯಿಂದ ಉಂಟಾಗಿದ್ದ ವಿವಾದವನ್ನು ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಗ್ರಾಮದಲ್ಲಿ ಸೋಮವಾರ ನಡೆದ ಹಿಂದೂ–ಮುಸ್ಲಿಂ ಸಮಾಜದವರ ಶಾಂತಿ ಸಭೆಯಲ್ಲಿ ಬಗೆಹರಿಸಲಾಯಿತು.

ಅನಧಿಕೃತವಾಗಿ ಅತಿಕ್ರಮಿಸಿದ ಹೆಚ್ಚುವರಿ ಜಾಗದಲ್ಲಿ ನಿರ್ಮಾಣದ ಆರಂಭ ಹಂತದಲ್ಲಿದ್ದ ಮಸೀದಿಯನ್ನು ಕೆಲವು ಗ್ರಾಮಸ್ಥರು ಸೇರಿ 2016ರ ಅ.11ರಂದು ಧ್ವಂಸಗೊಳಿಸಿದ್ದರು. ಮಸೀದಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ 17 ಜನರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು, ಅವರನ್ನು ಬಂಧಿಸಲಾಗಿತ್ತು.

ಗ್ರಾಮದ ಅಮೀನಸಾಬ ಪೆಂಡಾರಿ ಎಂಬುವವರು ಜಿಲ್ಲಾಧಿಕಾರಿ, ಎ.ಸಿ, ತಹಶೀಲ್ದಾರ್‌, ಗ್ರಾಮದ ಮುಖಂಡರು ಸೇರಿದಂತೆ ಒಟ್ಟು 27 ಜನರ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿ, ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸುವಂತೆ ಕೋರಿದ್ದರು. ರಾಜ್ಯ ಹೈಕೋರ್ಟ್‌ ನೀಡಿದ ಆದೇಶದ ಮೇರೆಗೆ ಸೋಮವಾರ ಶಾಂತಿಸಭೆ ಕರೆಯಲಾಗಿತ್ತು.

ADVERTISEMENT

ಗ್ರಾಮದಲ್ಲಿ ಸದ್ಯಕ್ಕೆ ಯಾವುದೇ ಭಯದ ವಾತಾವರಣವಿಲ್ಲ ಎಂದು ರಿಟ್‌ ಅರ್ಜಿದಾರ ಅಮೀನಸಾಬ ಪೆಂಡಾರಿ ಸೇರಿದಂತೆ ಇತರ 6 ಮಂದಿ ಮುಸ್ಲಿಂ ಸಮಾಜದವರು ಶಾಂತಿಸಭೆಯ ಗಮನ ಸೆಳೆದರು. ಆ ಹಿನ್ನೆಲೆಯಲ್ಲಿ 25x25 ಅಡಿ ಅಳತೆಯ ಸ್ವಂತ ಜಾಗದ ಜೊತೆಗೆ 11.5x25 ಅಡಿ ಹೆಚ್ಚುವರಿ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಿ ವಿವಾದಕ್ಕೆ ತೆರೆ ಎಳೆಯಲಾಯಿತು.

ನಿರ್ಮಾಣಗೊಳ್ಳಲಿರುವ ಮಸೀದಿಯ ಪಕ್ಕದಲ್ಲಿಯೇ ಎಪಿಎಂಸಿ ಗೋದಾಮು ಕೂಡ ನಿರ್ಮಾಣ ಆಗಬೇಕಿರುವುದರಿಂದ ಎರಡಕ್ಕೂ ಜಾಗವನ್ನು ನೀಡಲು ಗ್ರಾಮ ಪಂಚಾಯ್ತಿಯಲ್ಲಿ ಠರಾವು ಮಾಡಿ ಪ್ರಕರಣಕ್ಕೆ ಅಂತಿಮ ತೆರೆ ಎಳೆಯುವಂತೆ ಮೇಘಣ್ಣವರ ತಾ.ಪಂ. ಇಒ ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದರು.

ಈ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಗ್ರಾಮಸ್ಥರನ್ನು ಖುಲಾಸೆಗೊಳಿಸುವ ರೀತಿಯಲ್ಲಿ ಎಲ್ಲರೂ ಸಹಕರಿಸಬೇಕು ಎಂಬ ಸೂಚನೆಯನ್ನು ಮೇಘಣ್ಣವರ ನೀಡಿದರು.

ಶಾಸಕ ಸಿದ್ದು ನ್ಯಾಮಗೌಡ, ಎಸ್ಪಿ ಸಿ.ಬಿ. ರಿಷ್ಯಂತ, ಎಸಿ ರವೀಂದ್ರ ಕರಲಿಂಗಣ್ಣವರ, ಡಿವೈಎಸ್ಪಿ ರಾಮನಗೌಡ ಹಟ್ಟಿ, ತಹಶೀಲ್ದಾರ್‌್‌ ಪ್ರಶಾಂತ ಚನಗೊಂಡ, ಸಿಪಿಐ ಸುನೀಲಕುಮಾರ್‌ ನಂದೇಶ್ವರ, ಟಿಪಿಇಒ ಎನ್‌.ವೈ. ಬಸರಿಗಿಡದ ಸೇರಿದಂತೆ ಇಡೀ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಶಾಂತಿಸಭೆಯಲ್ಲಿ ಪಾಲ್ಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.