ADVERTISEMENT

ಮೀಸಲಾತಿ: ಮೇಟಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 6:12 IST
Last Updated 4 ಸೆಪ್ಟೆಂಬರ್ 2017, 6:12 IST

ಬಾಗಲಕೋಟೆ: ‘ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಸರಿಯಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಎಚ್.ವೈ.ಮೇಟಿ ಕೂಡಲೇ ಕುರುಬ ಸಮಾಜದ ಕ್ಷಮೆಯಾಚಿಸಬೇಕು’ ಎಂದು ರಾಯಣ್ಣ ಯುವ ಘರ್ಜನೆ ರಾಜ್ಯ ಕಾರ್ಯಾಧ್ಯಕ್ಷ ವೀರಣ್ಣ ಹಳೇಗೌಡರ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಸಮಾಜದ ಬೆಂಬಲ ಪಡೆದು ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದು ಈಗ ಸಮಾಜದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇವಲ ತಮ್ಮ ಕುಟುಂಬದವರು ಶಾಸಕ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಾತ್ರಕ್ಕೆ ಸಮುದಾಯ ಮುಂದುವರೆದಿದೆ ಎಂದು ಭಾವಿಸಿದಂತಿದೆ. ಬೀಳಗಿಯಲ್ಲಿ ಇತ್ತೀಚೆಗೆ ನಡೆದ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕುರುಬರು ಎಸ್‌ಟಿ ಮೀಸಲಾತಿ ಪಡೆಯುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇದ್ದ ಮೀಸಲಾತಿಯಲ್ಲಿ ಮುಂದುವರೆಯುವುದು ಸೂಕ್ತ ಎಂದು ಹೇಳಿರುವುದು ಖಂಡನೀಯ’ ಎಂದರು.

ADVERTISEMENT

‘ನಿಮ್ಮ ವೈಯಕ್ತಿಕ ಸಮಸ್ಯೆಗಳೇ ಬಹಳಷ್ಟಿವೆ. ನಿಮ್ಮಿಂದ ಈಗಾಗಲೇ ಸಮಾಜದ ಮಾನ ಹರಾಜಾಗಿದೆ. ಮೊದಲು ಅವುಗಳನ್ನು ಬಗೆಹರಿಸಿಕೊಳ್ಳಿ. ನಂತರ ಸಮಾಜದ ಬಗ್ಗೆ ಮಾತನಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಮೀಸಲಾತಿ ಹೋರಾಟಕ್ಕೆ ಸಂಘಟನೆಯು ಗುಜರಾತಿನಲ್ಲಿ ನಡೆದ ಪಟೇಲ್ ಮಾದರಿ ಹೋರಾಟ ಅನುಸರಿಸಲಿದೆ’ ಎಂದರು.

‘ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಸಮಾಜದ ಯುವಕರನ್ನು ಹತ್ತಿಕ್ಕುವ ಪ್ರಯತ್ನವನ್ನು ಸಮುದಾಯದ ಕೆಲ ಮುಖಂಡರು ಮಾಡುತ್ತಿದ್ದಾರೆ’ ಎಂದರು. ‘ಮೀಸಲಾತಿ ದೊರೆಯುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು. ಸಂಘಟನೆ ವತಿಯಿಂದ ಎಲ್ಲಾ ತಾಲ್ಲೂಕಿನಲ್ಲಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಮೀಸಲಾತಿ ಜೊತೆಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ನಡೆಸಲಾಗುವುದು’ ಎಂದರು.

‘ಇದೇ 25ರಂದು ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೀಸಲಾತಿ ಹೋರಾಟಕ್ಕೆ ಶಾಸಕ ಮೇಟಿ ಬೆಂಬಲ ನೀಡಬೇಕು. ನಿರ್ಲಕ್ಷ್ಯವಹಿಸಿದರೆ ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲು ಹುನಗುಂಡಿ, ಸುನೀಲ್ ಹಾದಿಮನಿ, ರಾಘು ಹಡಗಲಿ, ಸೋಮು, ರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.