ADVERTISEMENT

ಮುಂಗಾರು ಕೊರತೆ; ಬರದ ಛಾಯೆ?

ಮಳೆಯಾಗದಿದ್ದರೂ ಮೈದುಂಬಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭಾ ನದಿಗಳು

ಬಸವರಾಜ ಸಂಪಳ್ಳಿ
Published 30 ಜೂನ್ 2015, 11:11 IST
Last Updated 30 ಜೂನ್ 2015, 11:11 IST

ಬಾಗಲಕೋಟೆ: ಮುಂಗಾರು ಆರಂಭ ಗೊಂಡು ತಿಂಗಳಾದರೂ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೇ ಇರುವುದ ರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನೆಡೆಯಾಗಿದ್ದು, ನಿಧಾನವಾಗಿ ಬರದ ಛಾಯೆ ಆವರಿಸತೊಡಗಿದೆ.

ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿ ರುವ ಮಳೆಯಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.

ಆಲಮಟ್ಟಿ ಜಲಾಶಯ ನಿಧಾನವಾಗಿ ಭರ್ತಿಯಾಗತೊಡಗಿರುವುದು ಜಿಲ್ಲೆಯ ನೀರಾವರಿ ಕ್ಷೇತ್ರದ ರೈತರು ಖುಷಿ ಪಡುವ ವಿಷಯವಾದರೂ ಮಳೆಯಾಶ್ರಿತ ಒಣಭೂಮಿ ಕೃಷಿಕರು ಖುಷಿಪಡುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇನ್ನೊಂದು ಅಥವಾ ಎರಡು ವಾರದಲ್ಲಿ ಮಳೆ ಬಾರದಿದ್ದರೇ ಜಿಲ್ಲೆ ಬರಕ್ಕೆ ತುತ್ತಾಗುವ ಆತಂಕ ಎದುರಾಗಿದೆ.

ಬಿತ್ತನೆ: ಜಿಲ್ಲೆಯ 93,900 ಹೆಕ್ಟೆರ್‌ ಒಣ ಬೇಸಾಯ ಭೂಮಿಯಲ್ಲಿ ಮಳೆ ಕೊರತೆಯಿಂದಾಗಿ ಕೇವಲ 17,683 ಹೆಕ್ಟೆರ್‌ ಮಾತ್ರ ಬಿತ್ತನೆಯಾಗಿದೆ.

ಈಗಾಗಲೇ ಬಿತ್ತನೆಯಾಗಿರುವ ಹೆಸರು, ಸಜ್ಜೆ, ತೊಗರಿ, ಗೋವಿನ ಜೋಳ ಮಳೆ ಕೊರತೆಯಿಂದಾಗಿ ಒಣಗುವ ಭೀತಿ ಎದುರಿಸುತ್ತಿವೆ.
ಬಾದಾಮಿ ತಾಲ್ಲೂಕಿನಲ್ಲಿ ಕೇವಲ 6168 ಹೆಕ್ಟರ್‌ ಒಣಭೂಮಿಯಲ್ಲಿ ಬಿತ್ತನೆ ಯಾಗಿದೆ. ಬಾಗಲಕೋಟೆಯಲ್ಲಿ 575 ಹೆಕ್ಟೆರ್‌, ಬೀಳಗಿ ಕೇವಲ 70 ಹೆಕ್ಟೆರ್‌, ಹುನಗುಂದ 8233 ಹೆಕ್ಟೆರ್‌, ಜಮಖಂಡಿ 937 ಹೆಕ್ಟೆರ್‌, ಮುಧೋಳ 1700 ಹೆಕ್ಟೆರ್‌ ಒಣಭೂಮಿಯಲ್ಲಿ ಬಿತ್ತನೆಯಾ ಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮಳೆ ಕೊರತೆ: ಜೂನ್‌ನಲ್ಲಿ ಜಿಲ್ಲೆಯಲ್ಲಿ 78 ಮಿ.ಮೀ.ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 48.4 ಮಿ.ಮೀ. ಮಾತ್ರ ಮಳೆಯಾಗಿದೆ. 29.6 ಮಿ.ಮೀ. ಮಳೆಕೊರತೆ ಉಂಟಾಗಿದೆ.ಬಾದಾಮಿ ತಾಲ್ಲೂಕಿನಲ್ಲಿ ಜೂನ್‌ ನಲ್ಲಿ 80.8 ಮಿ.ಮೀ. ವಾಡಿಕೆ ಮಳೆಯಾಗ ಬೇಕಿತ್ತು. ಆದರೆ, ಇದುವರೆಗೆ ಕೇವಲ 55.6 ಮಿ.ಮೀ ಮಾತ್ರ ಮಳೆಯಾಗಿದೆ.ಬಾಗಲಕೋಟೆ ತಾಲ್ಲೂಕಿನಲ್ಲಿ 67.1 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 50 ಮಿ.ಮೀ. ಮಾತ್ರ ಮಳೆಯಾಗಿದೆ.ಬೀಳಗಿ ತಾಲ್ಲೂಕಿನಲ್ಲಿ 78.9ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 36.2 ಮಿ.ಮೀ. ಮಾತ್ರ ಮಳೆಯಾಗಿದೆ.

ಒಣಭೂಮಿ ಹೆಚ್ಚು ಒಳಗೊಂಡಿ ರುವ ಹುನಗುಂದ ತಾಲ್ಲೂಕಿನಲ್ಲಿ 80.4 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 40.4 ಮಿ.ಮೀ. ಮಾತ್ರ ಮಳೆಯಾಗಿದೆ.ಜಮಖಂಡಿ ತಾಲ್ಲೂಕಿನಲ್ಲಿ 81.6 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 45.1ಮಿ.ಮೀ. ಮಾತ್ರ ಮಳೆಯಾಗಿದೆ.ಮುಧೋಳ ತಾಲ್ಲೂಕಿನಲ್ಲಿ 75.1 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 61.4 ಮಿ.ಮೀ. ಮಾತ್ರ ಮಳೆಯಾಗಿದೆ.

ಪ್ರವಾಹ ಎದುರಿಸಲು ಸನ್ನದ್ಧ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಯಿಂದ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ತಲೆದೋರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕಿನ ತಹಶೀಲ್ದಾರ್‌ ಮತ್ತು ಕಂದಾಯ, ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಪ್ರವಾಹ ಉಂಟಾದರೆ ಬಾಧಿತವಾಗುವ ಹಳ್ಳಿಗಳ ಜನರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಮತ್ತು ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ದೋಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಒಳನಾಡು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
24X7 ಸಹಾಯವಾಣಿ ಕೇಂದ್ರವನ್ನು ತೆರೆದು ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ, ಅಗತ್ಯ ನೆರವು ನೀಡುವಂತೆ ತಿಳಿಸಿದ್ದೇನೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇರುವಂತೆಯೂ ಸೂಚಿಸಲಾಗಿದೆ ಎಂದರು.

ಜತೆಗೆ ನದಿ ತೀರದಲ್ಲಿ ಇರುವ ಸ್ವಯಂ ಸೇವಕರ ಮಾಹಿತಿ, ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಿಕೊಂಡು, ಅಗತ್ಯವಿರುವಾಗ ಅವರ ನೆರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆ ಮುಂಗಾರು ಮಳೆ ಕೊರತೆ ಅನುಭವಿಸುತ್ತಿದೆ, ಈಗಾಗಲೇ ಬಿತ್ತನೆಯಾಗಿರುವ ಅಲ್ಪಸ್ವಲ್ಪ ಬೆಳೆಯೂ ತೇವಾಂಶ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ
ಪಿ.ಎ.ಮೇಘಣ್ಣವರ
ಜಿಲ್ಲಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT